ಸಾರಾಂಶ
ನಗರದ ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವ ಸೋಮವಾರ ಸಂಜೆ ಸರ್ವಧರ್ಮೀಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವ ಸೋಮವಾರ ಸಂಜೆ ಸರ್ವಧರ್ಮೀಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಸರ್ವಧರ್ಮ ರಥೋತ್ಸವದಲ್ಲಿ ದೇವರ ಮೂರ್ತಿ ಬದಲಿಗೆ ರಥದಲ್ಲಿ ಸರ್ವ ಧರ್ಮ ಗ್ರಂಥಗಳನ್ನಿರಿಸಿ ಸಮಾಳ, ನಂದಿಕೋಲು, ಚಂಡೆ ಮದ್ದಲೆ ಸೇರಿದಂತೆ ವಿವಿಧ ಬಗೆಯ ಮಂಗಳವಾದ್ಯಗಳೊಂದಿಗೆ ಶ್ರೀಮಠದ ಪರಂಪರೆಯಂತೆ ತೇರನ್ನು ಎಳೆಯಲಾಯಿತು.
ತೇರಿನಲ್ಲಿ ಭಗವದ್ಗೀತೆ, ಬೈಬಲ್, ಕುರಾನ್, ಸಿದ್ಧಾಂತ ಶಿಖಾಮಣಿ ಸೇರಿದಂತೆ ವಿಶ್ವದ ಎಲ್ಲಾ ಧರ್ಮದ ಗ್ರಂಥಗಳನ್ನು ರಥದಲ್ಲಿಟ್ಟು ಪೂಜಿಸಿ ಭಕ್ತಿ ಭಾವದಿಂದ ಎಳೆಯಲಾಯಿತು. ಮೇನ್ ಬಜಾರಿಗೆ ಹೊಂದಿಕೊಂಡಿರುವ ಮಠದ ಹೆಬ್ಬಾಗಿಲಿನಿಂದ ಆರಂಭವಾದ ರಥೋತ್ಸವವೂ ನಂತರ ಪಾದಗಟ್ಟಿ ಆಂಜನೇಯ ದೇವಸ್ಥಾನದವರೆಗೆ ಸಾಗಿದ್ದು ಅಲ್ಲಿಂದ ಮರಳಿ ಕೊಟ್ಟೂರು ಸ್ವಾಮಿ ಮಠವನ್ನು ತಲುಪಿತು.ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂ. ಜಗದ್ಗುರು ಡಾ. ಶ್ರೀ ಸಂಗನಬಸವ ಸ್ವಾಮೀಜಿಗಳು ಎಂಟು ವರ್ಷಗಳ ಹಿಂದೆ ಸರ್ವಧರ್ಮ ರಥೋತ್ಸವವನ್ನು ಆರಂಭಿಸುವ ಮೂಲಕ ಮಠವು ಯಾವುದೇ ಜಾತಿ, ಧರ್ಮ, ಜನಾಂಗದ ಸಮುದಾಯಗಳಿಗೆ ಸೀಮಿತವಾಗಿಲ್ಲ, ಮಠವೆಂದರೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಸಾರಿದ್ದರು. ಅವರು ಹಾಕಿಕೊಟ್ಟ ಮಾರ್ಗದಂತೆ ಶ್ರೀ ಕೊಟ್ಟೂರು ಶ್ರೀ ಬಸವಲಿಂಗ ಸ್ವಾಮೀಜಿಗಳು ಮಠದ ಪರಂಪರೆಯನ್ನು ಯಥಾವತ್ತಾಗಿ ಪಾಲಿಸುತ್ತಿದ್ದಾರೆ.
ರಥೋತ್ಸವದಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು ಸೇರಿದಂತೆ ಹಲವಾರು ಸಮುದಾಯದವರು, ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಮಠದ ಅನುಯಾಯಿಗಳು, ಭಕ್ತರು, ಉದ್ಯಮಿಗಳು, ಮಹಿಳೆಯರು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.