ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಮತಕ್ಷೇತ್ರದ ಕಲಕೇರಿ ಗ್ರಾಮದ ಆರಾಧ್ಯ ದೈವ ಶ್ರೀಗುರು ವೀರಘಂಟೆ ಮಡಿವಾಳೇಶ್ವರರ ಜಾತ್ರಾ ಮಹೋತ್ಸವದಲ್ಲಿ ಸಂಭ್ರಮ ಮತ್ತು ಸಡಗರದಿಂದ ಅದ್ಧೂರಿಯಾಗಿ ಜೋಡು ತೇರಿನ ರಥೋತ್ಸವ ನಡೆಯಿತು. ಭಾರಿ ಜನಸ್ತೋಮದ ಜಯ ಘೋಷಗಳ ಮಧ್ಯೆ ಜೋಡು ರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಮತಕ್ಷೇತ್ರದ ಕಲಕೇರಿ ಗ್ರಾಮದ ಆರಾಧ್ಯ ದೈವ ಶ್ರೀಗುರು ವೀರಘಂಟೆ ಮಡಿವಾಳೇಶ್ವರರ ಜಾತ್ರಾ ಮಹೋತ್ಸವದಲ್ಲಿ ಸಂಭ್ರಮ ಮತ್ತು ಸಡಗರದಿಂದ ಅದ್ಧೂರಿಯಾಗಿ ಜೋಡು ತೇರಿನ ರಥೋತ್ಸವ ನಡೆಯಿತು. ಭಾರಿ ಜನಸ್ತೋಮದ ಜಯ ಘೋಷಗಳ ಮಧ್ಯೆ ಜೋಡು ರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.
ರವಿವಾರ ಬೆಳಿಗ್ಗೆ ಗದ್ದಿಗೆ ಮಠದ ಶ್ರೀಗಳ ನೇತೃತ್ವದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ಅಗ್ನಿ ಕುಂಡಕ್ಕೆ ವಿವಿಧ ವಾದ್ಯಮೇಳ ಕಳಸಾದಾರತಿಯೊಂದಿಗೆ ಐದು ಸುತ್ತು ಪೂಜಾ ಕೈಂಕರ್ಯವನ್ನು ನಡೆಸಿ ನಂತರ ಅಗ್ನಿ ಹಾಯಲಾಯಿತು. ನಂತರ ಉಚ್ಚಾಯಿ ಉತ್ಸವ ವೀರಂಘಂಟೆ ಮಡಿವಾಳೇಶ್ವರರ ಕತೃ ಗದ್ದಿಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.ಗ್ರಾಮದ ಭಕ್ತರು, ಹಿರಿಯರ ಮಾರ್ಗದರ್ಶನದಲ್ಲಿ ರಥಕ್ಕೆ ಎಣ್ಣೆಯನ್ನು ಹಚ್ಚಿ ನಂತರ ರಥವನ್ನು ಶೃಂಗರಿಸಿ ದೇವರನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ಸಂಎಜ ಶುಭ ಮುಹೂರ್ತದಲ್ಲಿ ಜೋಡು ತೇರಿನ ರಥೋತ್ಸವ ಎಳೆದು ಭಕ್ತರು ಸಂಭ್ರಮಿಸಿದರು.ಇದು ಉತ್ತರ ಕರ್ನಾಟಕದ 2ನೇ ಅತಿ ದೊಡ್ಡ ತೇರು ಎಂದು ಹೆಸರುವಾಸಿಯಾಗಿದೆ. ವಿಶಿಷ್ಟವಾಗಿ ಆಚರಿಸುವ ಜಾತ್ರಾ ಮಹೋತ್ಸವದಲ್ಲಿ ರಾಜ್ಯ ಅಂತರಾಜ್ಯದಿಂದ ಹರಿದು ಬಂದ ಭಕ್ತ ಸಾಗರ, ಭಕ್ತರು ದೇವರಿಗೆ ದೀಡ ನಮಸ್ಕಾರ, ಉರುಳು ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು. ನಂತರ ಸರದಿ ಸಾಲಿನಲ್ಲಿ ನಿಂತು ದೇವಸ್ಥಾನದಲ್ಲಿ ದರ್ಶನ ಪಡೆಯುವ ಮೂಲಕ ಸಂಜೆ ಸಾಂಪ್ರದಾಯದಂತೆ ಗುರು ಶಿಷ್ಯರ ಜೋಡು ರಥಗಳಿಗೆ ಜೋಡು ಕೊಡೆ, ಜೋಡು ಕಳಸವನ್ನಿಟ್ಟು, ಭಕ್ತರು ಜೋಡು ಎಡೆ ಸಲ್ಲಿಸಿ, ಜೋಡು ಪಾದುಗಟ್ಟಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಗದ್ದಿಗೆ ಮಠದ ಶ್ರೀ ಗುರು ಮಡಿವಾಳೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ದೇವಸ್ಥಾನದ ಮುಂದೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಸಂಘಟನೆಗಳು ಜಾತ್ರೆಗೆ ಬಂದ ಯಾತ್ರಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ಜೋಡುಗುಡಿಯ ಪಾದುಗಟ್ಟಿಯವರೆಗೆ ಜೋಡು ರಥಗಳನ್ನು ಎಳೆಯುವ ಮೂಲಕ ಭಕ್ತಿ ಮೆರೆದವರು. ಜೋಡು ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಎರಡು ರಥಗಳನ್ನು ಎಳೆಯುವುದರೊಂದಿಗೆ ಜಯ ಘೋಷಗಳನ್ನು ಮೊಳುಗಿಸಿ ರಥಗಳಿಗೆ ಉತ್ತತ್ತಿ, ಬಾಳೆಹಣ್ಣು ಹಾರಿಸಿ ದೇವರ ಕೃಪೆಗೆ ಪಾತ್ರರಾದರು.ಜಾತ್ರಾ ಮಹೋತ್ಸವದಲ್ಲಿ ನಾಟಕ ಪ್ರದರ್ಶನ: ಜಾತ್ರೆಯಲ್ಲಿ ನಾಟಕ ಪ್ರದರ್ಶನ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ. ಕಲಾವಿದರು ನಾಟಕವನ್ನು ಪ್ರದರ್ಶನ ಮಾಡುವ ಮೂಲಕ ರಂಜಿಸಲಿದ್ದಾರೆ. ಕಳೆದ ಬಾರಿ ಬಾರದ ನಾಟಕ ಕಂಪನಿಯಿಂದ ಜನಸಾಮಾನ್ಯರಿಗೆ ನಿರಾಸೆ ಉಂಟಾಗಿತ್ತು. ಈ ಭಾರಿ ನಾಟಕ ಕಂಪನಿಯವರು ಜಾತ್ರಾ ಮಹೋತ್ಸವದಲ್ಲಿ ತಮ್ಮ ಕಲ ಪ್ರದರ್ಶನ ಮೂಲಕ ಜನರನ್ನು ರಂಜಿಸಲಿದ್ದಾರೆ.