ಡಂಬಳ: ಹೋಬಳಿಯ ಪೇಠಾಆಲೂರು ಗ್ರಾಮದ ಆರಾಧ್ಯ ದೇವರಾದ ಹಾಲೇಶ್ವರ ಕೃಪಾ ಪೋಷಿತ ಶಿವಯೋಗಾಶ್ರಮದ 48ನೇ ಜಾತ್ರಾ ಮಹೋತ್ಸವ ಪ್ರಯುಕ್ತ ರಥೋತ್ಸವ ಸಂಭ್ರಮದಿಂದ ಗುರುವಾರ ನೆರವೇರಿತು.
ಹಾಲೇಶ್ವರ ಶಿವಶರಣರು ಮತ್ತು ನೆಗಳೂರಿನ ಗುರುಶಾಂತೇಶ್ವರ ಶ್ರೀಗಳು ಪೂಜಾ ವಿಧಾನಗಳ ಮೂಲಕ ರಥೋತ್ಸಕ್ಕೆ ಚಾಲನೆ ನೀಡಿದರು.ಗ್ರಾಮದಲ್ಲಿ ಗುರುವಾರ ಸಂಜೆ 5.30ಕ್ಕೆ ರಥೋತ್ಸವ ವಿವಿಧ ವಾದ್ಯಮೇಳಗಳ ಮೂಲಕ ವಿಜೃಂಭಣೆಯಿಂದ ಜರುಗಿತು. ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಜಾತ್ರಾ ಸಮಿತಿ ಸದಸ್ಯರು, ಮಹಿಳೆಯರು, ಯುವಕರು ಇದ್ದರು.
ಜಾತ್ರಾ ಮಹೋತ್ಸವದ ನಿಮಿತ್ತ ಹಾಲಸ್ವಾಮಿ ಮುಳ್ಳು ಗದ್ದುಗೆ ಉತ್ಸವ ಬುಧವಾರ ರಾತ್ರಿ ಸಂಭ್ರಮದಿಂದ ಜರುಗಿತು. ಹಾಲಸ್ವಾಮಿ ಮಠದ ಧಾರ್ಮಿಕ ಪರಂಪರೆಯಂತೆ ಪೂಜಾ ಅನುಷ್ಠಾನ ಕೈಗೊಂಡಿದ್ದ ಹಾಲೇಶ್ವರ ಶಿವಶರಣರು ಸ್ವಾಮಿಯ ಗದ್ದುಗೆಗೆ ಪೂಜೆ ನೆರವೇರಿಸಿ ಮುಳ್ಳಿನ ಮಂಟಪ ಆರೋಹಣ ಮಾಡಿದರು.ಹಾಲಸ್ವಾಮಿ ದೊರೆಯೇ ನಿನಗಾರು ಸರಿಯೇ ಬಹುಪರಾಕ್, ಹರ ಹರ ಮಹಾದೇವ ಎಂಬ ಭಕ್ತರ ಜಯಘೋಷ, ಹರ್ಷೋದ್ಗಾರದ ನಡುವೆ ಉತ್ಸವ ಪ್ರಾರಂಭವಾಗಿ ಶ್ರೀಮಠದ ಬಳಿ ರಾತ್ರಿ 10.30 ಗಂಟೆಗೆ ಆರಂಭವಾದ ಮುಳ್ಳು ಗದ್ದುಗೆ ಉತ್ಸವ, ಗ್ರಾಮದ ಮುಖ್ಯ ಬೀದಿಯ ಮೂಲಕ ಸಾಗಿ ಬೆಳಗಿನ ಜಾವ ಮೂಲ ಸ್ಥಳದಲ್ಲಿ ಸಂಪನ್ನಗೊಂಡಿತು.
ಸಮಾಳ, ನಂದಿಕೋಲು, ಮಂಗಳವಾದ್ಯ, ಡೊಳ್ಳು ಕುಣಿತ ವಾದ್ಯ ವೈಭವ ಉತ್ಸವದ ಮೆರುಗನ್ನು ಹೆಚ್ಚಿಸಿದ್ದವು. ಪೇಠಾಆಲೂರಿನ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.ಮುಂಡರಗಿ 110 ಕೆವಿ ಸ್ಟೇಶನ್‌ನಲ್ಲಿ ಹನುಮ ಜಯಂತಿ
ಮುಂಡರಗಿ: ಪಟ್ಟಣದ ಗದಗ ರಸ್ತೆಯಲ್ಲಿರುವ 110 ಕೆವಿ ಸ್ಟೇಶನ್‌ನಲ್ಲಿರುವ ಹನುಮ ಮಂದಿರದಲ್ಲಿ ಅಲ್ಲಿನ ಎಲ್ಲ ನೌಕರರ ಸಿಬ್ಬಂದಿ ಸೇರಿಕೊಂಡು ಅದ್ಧೂರಿಯಾಗಿ ಹನುಮ ಜಯಂತಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಚರಿಸಿದರು.ಈ ಸಂದರ್ಭದಲ್ಲಿ 110 ಕೆವಿ ಸ್ಟೇಶನ್‌ನಲ್ಲಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಹೇಶಕುಮಾರ ಎಂ. ಹರಪನಹಳ್ಳಿ ಅವರು ವರ್ಗಾವಣೆಗೊಂಡ ಹಿನ್ನೆಲೆ ಅವರಿಗೆ ಹಾಗೂ ಇದೇ ಸ್ಟೇಶನ್ನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವರಾಜ ಬಂಡಿವಡ್ಡರ್ ಪದೋನ್ನತಿ ಹೊಂದಿ ಬೇರೆಡೆ ವರ್ಗಾವಣೆ ಹೊಂದಿದ ಹಿನ್ನೆಲೆ ಇಬ್ಬರನ್ನೂ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ 110 ಕೆವಿ ಸ್ಟೇಶನ್‌ನ ಜೆಇ ಶ್ರೀಕಾಂತ ಮಾತನಾಡಿದರು.ಹೆಸ್ಕಾಂ ಎಇಇ ಸಂತೋಷ ಆನೇಕಲ್, ಎಇ ಶೇಖ್ ಮುಜಾಮಿಲ್, ಜೆಇಗಳಾದ ಸಂತೋಷ ಹವಳೆ, ಹರಿಪ್ರಸಾದ್, ಪ್ರವೀನ ಕಂಚಗಾರ, ಎಲ್.ಎಂ. ಭಾವಿಮನಿ, ಗೋಣೇಶ ಮುಂಡವಾಡ, ಕಾಶೀನಾಥ ಹಾಗೂ ಗಿರೀಶ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.