ಆಂಜನೇಯ ಸ್ವಾಮಿ ಜಯಂತಿ ನಿಮಿತ್ತ ರಥೋತ್ಸವ

| Published : Dec 14 2024, 12:46 AM IST

ಸಾರಾಂಶ

ಗ್ರಾಮದ ಬೀದಿ ಬೀದಿಗಳನ್ನು ಗುಡಿಸಿ ರಂಗೋಲಿ ಹಾಕಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಪ್ರವೇಶ ದ್ವಾರಗಳಲ್ಲಿಯೇ ಹನುಮನ ಸ್ವಾಗತ ಕಮಾನುಗಳನ್ನು ನಿರ್ಮಿಸಿ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು. ಹರಿಹರಪುರದಲ್ಲಿ ಹನುಮ ಜಯಂತಿ ಅಂಗವಾಗಿ ರಥೋತ್ಸವ ನಡೆಯಿತು.

ಕೆ.ಆರ್.ಪೇಟೆ: ತಾಲೂಕಿನಾದ್ಯಂತ ಆಂಜನೇಯ ಸ್ವಾಮಿ ಜಯಂತಿ ಮಹೋತ್ಸವದ ಅಂಗವಾಗಿ ಪೂಜಾ ಕಾರ್ಯಕ್ರಮ ನಡೆದವು. ತಾಲೂಕಿನ ಹರಿಹರಪುರ, ಮಲ್ಕೋನಹಳ್ಳಿ, ಅಘಲಯ, ಮೋದೂರು, ಚಿಕ್ಕಸೋಮನಹಳ್ಳಿ, ಹೇಮಗಿರಿ ಹಾಗೂ ಕೆ.ಆರ್.ಪೇಟೆ ಪಟ್ಟಣದ ಪಡುವಲ ಬಾಗಿಲು ಆಂಜನೇಯ ದೇವಾಲಯ ಮತ್ತು ಹೊಸಹೊಳಲಿನ ಕೋಟೆ ಆಂಜನೇಯ ದೇವಾಲಯಗಳಿಗೆ ಭಕ್ತರ ದಂಡೇ ನೆರೆದಿತ್ತು. ಹನುಮ ಜಯಂತಿಯ ಅಂಗವಾಗಿ ಬಹುತೇಕ ಕಡೆ ಹನುಮ ದೇವಾಲಯದಲ್ಲಿ ಕಳೆದ ಎರಡು ದಿನಗಳ ಹಿಂದೆಯೇ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಗ್ರಾಮದ ಬೀದಿ ಬೀದಿಗಳನ್ನು ಗುಡಿಸಿ ರಂಗೋಲಿ ಹಾಕಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಪ್ರವೇಶ ದ್ವಾರಗಳಲ್ಲಿಯೇ ಹನುಮನ ಸ್ವಾಗತ ಕಮಾನುಗಳನ್ನು ನಿರ್ಮಿಸಿ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು. ಹರಿಹರಪುರದಲ್ಲಿ ಹನುಮ ಜಯಂತಿ ಅಂಗವಾಗಿ ರಥೋತ್ಸವ ನಡೆಯಿತು. ಹೇಮಗಿರಿಯ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದ ಬೆಟ್ಟದ ಮೇಲಿರುವ ಹನುಮ ದೇವಾಲಯದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಸೇರಿದಂತೆ ಗ್ರಾಮೀಣ ಪ್ರದೇಶದ ಅಧಿಕಾರಿಗಳು ವಿವಿಧ ಗ್ರಾಮಗಳಲ್ಲಿ ಘಟಿಸಿ ಹನುಮ ಉತ್ಸವದಲ್ಲಿ ಭಾಗವಹಿಸಿದ್ದರು. ಭಕ್ತಾದಿಗಳಿಗೆ ಕೆ.ಆರ್.ಪೇಟೆ ಪಟ್ಟಣ, ಹರಿಹರಪುರ, ಹೊಸಹೊಳಲು, ಮೋದೂರು, ಮಲ್ಕೋನಹಳ್ಳಿ ಹಾಗೂ ಅಘಲಯ ಮುಂತಾದ ಗ್ರಾಮದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.