ಉಡುಪಿಯಿಂದ ಆಗಮಿಸಿದ ರಥಗಳು

| Published : Jun 28 2025, 12:18 AM IST

ಸಾರಾಂಶ

ಗೋಕಾಕ ಗ್ರಾಮ ದೇವತೆಯರ ದೇವಸ್ಥಾನಗಳ ಜೀರ್ಣೋದ್ಧಾರವಾಗಿದ್ದು, ಈಗ ಉಡುಪಿಯ ಶ್ರೀ ಕೊಟ್ಟೇಶ್ವರದಿಂದ ನೂತನ ರಥಗಳು ಆಗಮಿಸಿವೆ.

ಕನ್ನಡಪ್ರಭ ವಾರ್ತೆ ಗೋಕಾಕ

ಐದು ವರ್ಷಗಳಿಗೊಮ್ಮೆ ನಡೆಯುವ ಗೋಕಾಕ ಗ್ರಾಮ ದೇವತೆಯರ ಜಾತ್ರೆ ಈ ಬಾರಿ ಕೋವಿಡ್ ಕಾರಣದಿಂದ 10ವರ್ಷಗಳ ನಂತರ ನಡೆಯುತ್ತಿದೆ. ಗೋಕಾಕ ಗ್ರಾಮ ದೇವತೆಯರ ದೇವಸ್ಥಾನಗಳ ಜೀರ್ಣೋದ್ಧಾರವಾಗಿದ್ದು, ಈಗ ಉಡುಪಿಯ ಶ್ರೀ ಕೊಟ್ಟೇಶ್ವರದಿಂದ ನೂತನ ರಥಗಳು ಆಗಮಿಸಿವೆ.

ಗುರುವಾರ ಬೆಳಗ್ಗೆ 8ಗಂಟೆಗೆ ದೇವರನಾಡು ಎಂದು ಪ್ರಸಿದ್ಧಿ ಪಡೆದ ಕೊಟ್ಟೇಶ್ವರದ ವಿಶ್ವಕರ್ಮ ಕಲಾವಿದರಿಂದ ತಯಾರಿಸಲಾದ ನೂತನ ಗ್ರಾಮ ದೇವತೆಯರ ರಥಗಳನ್ನು ಜಾತ್ರಾ ಕಮಿಟಿಗೆ ಹಸ್ತಾಂತರಿಸಲಾಗಿದೆ. ಕೊಟ್ಟೇಶ್ವರದಿಂದ ಕಂಟೈನರ್‌ ಲಾರಿಗಳ ಮೂಲಕ ಗೋಕಾಕ ನಗರಕ್ಕೆ ಶುಕ್ರವಾರ ಬೆಳಗಿನ ಜಾವ 4ಗಂಟೆಗೆ ಆಗಮಿಸಿದ್ದು, ನಗರದ ಸೋಮವಾರ ಪೇಠೆಯಲ್ಲಿ ನೂತನ ರಥಗಳ ಪೂಜೆ ಸಲ್ಲಿಸಿ ರಥಗಳ ಜೋಡನೆ ಕಾರ್ಯ ಭರದಿಂದ ಸಾಗಿದೆ.

ಉಡುಪಿ ಜಿಲ್ಲೆಯ ಕುಂದಾಪೂರ ತಾಲೂಕಿನ ಕೊಟ್ಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಬಾಶಿಯ ರಥ ಶಿಲ್ಪಿ ರಾಜಗೋಪಾಲ ಆಚಾರ್ಯ ಹಾಗೂ ಅವರ ಮಗ ಲಕ್ಷ್ಮೀನಾರಾಯಣ ಆಚಾರ್ಯ ಅವರು ನಿರ್ಮಿಸಿದ ಈ ರಥಗಳು ಸುಮಾರು 15ಟನ್ ಭಾರ ಹೊಂದಿವೆ. ರಥಗಳ ನಿರ್ಮಾಣಕ್ಕೆ 9 ತಿಂಗಳು ಕಳೆದಿದ್ದು ಸುಮಾರು 45 ಜನ ಸಹ ಶಿಲ್ಪಿಗಳ ಕೈಚಳಕದಲ್ಲಿ ರಥಗಳು ಮೂಡಿಬಂದಿವೆ.