ಅನ್ನ ಅಕ್ಷರದ ಜೊತೆಗೆ ಧರ್ಮ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ

ಹರಪನಹಳ್ಳಿ: ಇಲ್ಲಿಯ ಪ್ರಸಿದ್ದ ತೆಗ್ಗಿನಮಠ ಸಂಸ್ಥೆಯಿಂದ ಅನ್ನ ಅಕ್ಷರದ ಜೊತೆಗೆ ಧರ್ಮ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ ಎಂದು ಸಂಸದ ಇ.ತುಕಾರಾಂ ಹೇಳಿದ್ದಾರೆ.ಅವರು ನಗರದ ತೆಗ್ಗಿನಮಠದ ಸಮೀಪ ಚಂದ್ರಶೇಖರ ಶಿವಾಚಾರ್ಯರ 79ನೇ ಪುಣ್ಯಾರಾಧನೆ ಅಂಗವಾಗಿ ಸಾಮೂಹಿಕ ವಿವಾಹ, ಧರ್ಮಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಸರ್ಕಾರ ಮಾಡುವ ಕೆಲಸಗಳನ್ನು ಮಠ ಮಾನ್ಯಗಳು ಮಾಡುತ್ತಿವೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ದಂಪತಿಗಳು ಪರಸ್ಪರ ಅರ್ಥ ಮಾಡಿಕೊಂಡು ಸಹಬಾಳ್ವೆ ನಡೆಸಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಮಾತನಾಡಿ, ಸಾಮೂಹಿಕ ವಿವಾಹಗಳು ನಮ್ಮ ಋಷಿ ಸಂಸ್ಕೃತಿಯ ಪುನರ್ಜೀವನವಾಗಿದೆ. ಇಂದು ನಡೆಯುತ್ತಿರುವ ಸಾಮೂಹಿಕ ವಿವಾಹಗಳು ಅನೇಕ ಜೋಡಿಗಳ ಮದುವೆಯಲ್ಲ. ಅದು ಅನೇಕ ಕುಟುಂಬಗಳ ಕನಸುಗಳಿಗೆ ದೀಪ ಹಚ್ಚುವ ಪುಣ್ಯ ಕಾರ್ಯ ಎಂದು ಹೇಳಿದರು.

ಇಂದು ಆಭರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಸಂಬಂಧಗಳ ಸಂಖ್ಯೆ ಕಡಿಮೆಯಾಗಿದೆ. ಜಾತಿ, ಧರ್ಮ, ಮತ- ಪಂಥ, ಹಣದ ಗೋಡೆಗಳನ್ನು ಮೀರಿದೆ. ಸಾಮೂಹಿಕ ವಿವಾಹಗಳು ಎಂದು ಅರ್ಥೈಸಿದರು.

ಶಾಸಕಿ ಎಂ.ಪಿ.ಲತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ದಂಪತಿಗಳು ಹಾಲು ಜೇನಿನಂತೆ ಸಮಭಾವ ಸಮಚಿತ್ತದಿಂದ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೆಶಕ ವೈ.ಡಿ. ಅಣ್ಣಪ್ಪ ಮಾತನಾಡಿ, ಇಂದಿನ ದಿನಮಾನದಲ್ಲಿ ಹೆಚ್ಚು ಮಕ್ಕಳ ಅಗತ್ಯತೆ ಇದ್ದು, ನೂತನ ದಂಪತಿಗಳು 5-6 ಮಕ್ಕಳನ್ನು ಹೆತ್ತು ಉತ್ತಮ ಶಿಕ್ಷಣ ಕೊಡಿ ಎಂದು ತಿಳಿಸಿದರು.

ಆಸ್ಟ್ರೇಲಿಯಾದಲ್ಲಿರುವ ಫಾರ್ಮಸುಟಿಕಲ್‌ ವ್ಯವಸ್ಥಾಪಕಿ ನಿರ್ದೇಶಕಿಯಾಗಿರುವ ಡಾ.ಜ್ಯೋತಿ ಕಿರಣಕುಮಾರ ಅವರಿಗೆ ತೆಗ್ಗಿನಮಠದಿಂದ ಪ್ರೇರಣಾದಾಯಕ ಮಹಿಳಾ ನಾಯಕಿ ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಮಘಟ್ಟದ ರೇವಣಸಿದ್ದ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು.

ತೆಗ್ಗಿನಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯನವರು ಪ್ರಾಸ್ತಾಕವಾಗಿ ಮಾತನಾಡಿದರು. 21 ಜೋಡಿ ವಧು-ವರರು ದಾಂಪತ್ಯಕ್ಕೆ ಕಾಲಿಟ್ಟರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಉದಯಶಂಕರ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಲಕ್ಷ್ಮಿ, ಮುಖಂಡ ಎನ್.ಎಂ. ನೂರ ಅಹ್ಮದ್‌, ಡಾ.ಟಿ.ಎಂ. ಶಿವಶಂಕರಯ್ಯ, ಟಿ.ಎಂ. ಪ್ರತೀಕ, ಟಿ.ಎಂ. ವಿರೇಂದ್ರ, ಪಿ.ಅಜ್ಜಯ್ಯ, ಎಚ್.ಎಂ. ಕೊಟ್ರಯ್ಯ, ವಿದ್ಯುತ್‌ ಗುತ್ತಿಗೆದಾರ ಎ.ಕರಿಬಸಪ್ಪ, ಡೀನ್‌ ಟಿ.ಎಂ. ರಾಜಶೇಖರ, ಸಿ.ಎಂ. ಕೊಟ್ರಯ್ಯ, ಕೆ.ಎಂ. ಗುರುಸಿದ್ದಯ್ಯ, ಕೆ.ಎಂ. ಶಿವಕುಮಾರಸ್ವಾಮಿ, ಡಾ.ಟಿ.ಎಂ. ವಿಶ್ವನಾಥ, ಜಿ.ಎಂ. ವಾಗೀಶ, ವೈ.ಎಂ. ನಾಗರಾಜಯ್ಯ, ಟಿ.ಎಂ. ನಾಗರಾಜ, ಟಿ.ಎಂ. ಕೊಟ್ರೇಶ, ರೆಡ್ಡಿ ಶಾಂತಕುಮಾರ, ಪ್ರಕಾಶ, ಲಿಂಗನಾಯಕನಹಳ್ಳಿ ರಾಜಣ್ಣ, ಮಡಿವಾಳಸ್ವಾಮಿ ಇದ್ದರು.