ಮಕ್ಕಳು ಮಾನವೀಯತೆ ಬೆಳೆಸಿಕೊಂಡು ಸತ್ಪ್ರಜೆಗಳಾಗಲಿ

| Published : Nov 25 2024, 01:03 AM IST

ಮಕ್ಕಳು ಮಾನವೀಯತೆ ಬೆಳೆಸಿಕೊಂಡು ಸತ್ಪ್ರಜೆಗಳಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದಷ್ಟೇ ಕ್ರೀಡಾ ಚಟುವಟಿಕೆಗಳು ಮುಖ್ಯ, ಸಾಧನೆ ಎನ್ನುವುದು ತಕ್ಷಣ ಬರುವುದಿಲ್ಲ. ಸತತ ಪರಿಶ್ರಮ ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳು ಮಾನವೀಯ ಬಾಂಧವ್ಯಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಚಾರ್ಟೆರ್ಡ್ ಅಕೌಂಟೆಂಟ್ ಆದ ಎ.ಯು. ಪ್ರಕಾಶ್ ಹೇಳಿದರು.

ರಾಮಕೃಷ್ಣ ನಗರದಲ್ಲಿರುವ ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಈ ದೇಶದ ಅತಿ ದೊಡ್ಡ ಆಸ್ತಿ ಮಕ್ಕಳು, ಶಾಲೆಗಳು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಹೊರತರಬೇಕು ಎಂದರು.

ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಪಟು ರೀನಾ ಜಾರ್ಜ್ ಮಾತನಾಡಿ, ಶಿಕ್ಷಣದಷ್ಟೇ ಕ್ರೀಡಾ ಚಟುವಟಿಕೆಗಳು ಮುಖ್ಯ, ಸಾಧನೆ ಎನ್ನುವುದು ತಕ್ಷಣ ಬರುವುದಿಲ್ಲ. ಸತತ ಪರಿಶ್ರಮ ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಶೃಂಗಾರವೇಲು ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು.

ಶ್ರೀ ರಾಮಕೃಷ್ಣ ಸೇವಾಸಂಘದ ಅಧ್ಯಕ್ಷ ಎಂ. ಪಾಪೇಗೌಡ ಮಾತನಾಡಿ, ವಿದ್ಯಾರ್ಥಿಗಳು ಸತ್ಯ, ಧರ್ಮ ಮತ್ತು ನ್ಯಾಯದ ಮಾರ್ಗದಲ್ಲಿ ನಡೆದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಯಶಸ್ಸು ಸಾಧಿಸಬೇಕೆಂದರು.

ಮಕ್ಕಳು ಮತ್ತು ಸಹೋದ್ಯೋಗಿಗಳಿಗೆ ಆದರ್ಶಪ್ರಾಯರಾದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಿ.ಎನ್. ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಕೆ. ಹೆಗಡೆ ಮಾತನಾಡಿದರು.

ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಅಭಿನಂದಿಸಿದರು.

ಶಿಕ್ಷಕ- ಶಿಕ್ಷಕೇತರರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಿ.ಎನ್. ವಿಶ್ವನಾಥ್ ಸ್ವಾಗತಿಸಿದರು. ಪ್ರೊ.ಜಿ. ಚಂದ್ರಶೇಖರ್ ಪರಿಚಯಿಸಿದರು. ಸಹಶಿಕ್ಷಕಿ ಎಂ. ಮಹಾಲಕ್ಷ್ಮೀ ನಿರೂಪಿಸಿದರು. ಸಹ ಶಿಕ್ಷಕಿ ಜಿ. ಉಷಾ ವಂದಿಸಿದರು.