ಚಾರುಕೀರ್ತಿ ಭಟ್ಟಾರಕರ ನಿಷಿಧಿ ಮಂಟಪ ಲೋಕಾರ್ಪಣೆ

| Published : Dec 01 2024, 01:32 AM IST

ಸಾರಾಂಶ

ಜೈನಕಾಶಿ ಶ್ರೀ ಶ್ರವಣಬೆಳಗೊಳದ ಪ್ರಾತಃಸ್ಮರಣೀಯರಾದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ನೆನಪಿಗಾಗಿ ಶ್ರವಣಬೆಳಗೊಳದ ಚಿಕ್ಕಬೆಟ್ಟದ ಪಕ್ಕದಲ್ಲೇ ಇರುವ ನಿಷಿಧಿ ಬೆಟ್ಟದಲ್ಲಿ "ನಿಷಿಧಿ ಮಂಟಪ " ನಿರ್ಮಾಣ ಮಾಡಲಾಗಿದ್ದು, ಡಿಸೆಂಬರ್‌ ೬ರಂದು ಈ ಮಂಟಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶ್ರವಣಬೆಳಗೊಳ ಜೈನ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ ಜೈನಕಾಶಿ ಶ್ರೀ ಶ್ರವಣಬೆಳಗೊಳದ ಪ್ರಾತಃಸ್ಮರಣೀಯರಾದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ನೆನಪಿಗಾಗಿ ಶ್ರವಣಬೆಳಗೊಳದ ಚಿಕ್ಕಬೆಟ್ಟದ ಪಕ್ಕದಲ್ಲೇ ಇರುವ ನಿಷಿಧಿ ಬೆಟ್ಟದಲ್ಲಿ "ನಿಷಿಧಿ ಮಂಟಪ " ನಿರ್ಮಾಣ ಮಾಡಲಾಗಿದ್ದು, ಡಿಸೆಂಬರ್‌ ೬ರಂದು ಈ ಮಂಟಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶ್ರವಣಬೆಳಗೊಳ ಜೈನ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕರು ತಿಳಿಸಿದರು. ಶ್ರವಣಬೆಳಗೊಳದ ಮಠದಲ್ಲಿ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಈ ಕ್ಷೇತ್ರದ ಏಳಿಗೆಯಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಅವರ ಕೊಡುಗೆ ಬಹಳಷ್ಟಿದೆ. ಹಾಗಾಗಿ ಅವರ ಸ್ಮರಣಾರ್ಥವಾಗಿ ಈ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ದೊಡ್ಡಬೆಟ್ಟ ಎಂದರೆ ವಿಂದ್ಯಗಿರಿ, ಚಿಕ್ಕಬೆಟ್ಟ ಎಂದರೆ ಚಂದ್ರಗಿರಿ ಮಾತ್ರ ಈವರೆಗೆ ಪ್ರಚಲಿತದಲ್ಲಿವೆ. ಚಿಕ್ಕಬೆಟ್ಟದ ಪಕ್ಕದಲ್ಲೇ ಅದಕ್ಕಿಂತ ಚಿಕ್ಕದಾದ ಇನ್ನೊಂದು ಪುಟ್ಟ ಬೆಟ್ಟ ಇದೆ. ಅಲ್ಲಿಯೇ ಚಾರುಕೀರ್ತಿ ಭಟ್ಟಾರಕರ ಅಂತ್ಯಕ್ರಿಯೆ ನಡೆದಿದ್ದು. ಹಾಗಾಗಿ ಅದೇ ಬೆಟ್ಟದ ಮೇಲೆ ಈ ಮಂಟಪ ನಿರ್ಮಾಣ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಶ್ರವಣಬೆಳಗೊಳದಲ್ಲಿ ವಿಂದ್ಯಗಿರಿ, ಚಂದ್ರಗಿರಿಯಂತೆ ನಿಷಿಧಿ ಬೆಟ್ಟ ಕೂಡ ಪ್ರಚಲಿತವಾಗಲಿದೆ ಎಂದು ಹೇಳಿದರು. ಡಿ.೬ರಂದು ಬೆಳಗ್ಗೆ ೯ಕ್ಕೆ ನಿಷಿಧಿ ಮಂಟಪದ ಲೋಕಾರ್ಪಣೆ ಕಾಯಕ್ರಮ ನಡೆಯಲಿದ್ದು, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಉಡುಪಿಯ ಪೇಜಾವರ ಮಠದ ಶ್ರೀ ಪ್ರಸನ್ನತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆಯವರು ಸಾನಿಧ್ಯ ವಹಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜತೆಗೆ ಕಾಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಸಂಸದರಾದ ಶ್ರೇಯಸ್‌ ಪಟೇಲ್‌, ಶಾಸಕರಾದ ಎಚ್‌.ಡಿ.ರೇವಣ್ಣ ಹಾಗೂ ಇನ್ನಿತರೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು. ವಿಶೇಷ ಸ್ಮಾರಕವಾಗಲಿದೆ: ನಿಷಿಧಿ ಬೆಟ್ಟದ ಮೇಲೆ ಲೋಕಾರ್ಪಣೆಯಾಗಲಿರುವ ನಿಷಿಧಿ ಮಂಟಪ ಈಗಾಗಲೇ ಇರುವ ದೊಡ್ಡ ಹಾಗೂ ಚಿಕ್ಕ ಬೆಟ್ಟಗಳಷ್ಟೇ ಪ್ರಾಮುಖ್ಯತೆಯ ಸ್ಮಾರಕವಾಗಿ ಬೆಳೆಯಲಿದೆ. ಹಾಗಾಗಿ ಈ ಬೆಟ್ಟದ ಬಂಡೆಗೆ ೧೨೪ ಮೆಟ್ಟಿಲುಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹೋಗಿಬರಲು ಅನುಕೂಲವಾಗಲಿದೆ ಎಂದರು.

೧೦ ಸಾವಿರ ಮಾವಿನ ಗಿಡಗಳ ವಿತರಣೆ:ಅಂದು ನಡೆಯಲಿರುವ ಲೋಕಾರ್ಪಣೆ ಕಾಯಕ್ರಮದ ವಿಶೇಷತೆ ಎಂದರೆ ಕಾರ್ಯಕ್ರಮದಲ್ಲಿ ೧೦ ಸಾವಿರ ಮಾವಿನ ಗಿಡಗಳನ್ನು ವಿತರಣೆ ಮಾಡಲಾಗುವುದು. ಏಕೆಂದರೆ ಸ್ವಸ್ತಿಶ್ರೀ ಚಾರುಕೀತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳಿಗೆ ಮಾವಿನ ಹಣ್ಣು ಎಂದರೆ ಬಹಳ ಇಷ್ಟ. ಅವರು ತಮ್ಮ ಅತ್ಯಾಪ್ತರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿಕೊಡುತ್ತಿದ್ದರು. ಮಠದ ಆವರಣದಲ್ಲಿರುವ ೫೦೦ ವರ್ಷಗಳಿಗೂ ಹೆಚ್ಚು ಹಳೆಯದಾದ ಮಾವಿನ ಮರ ಎಂದರೆ ಅವರಿಗೆ ಬಹಳ ಕಾಳಜಿ. ಹಾಗಾಗಿ ಅವರ ಅಂತ್ಯಕ್ರಿಯೆ ನಡೆಸಲಾದ ಇದೇ ಬೆಟ್ಟದ ಮೇಲೆ ಬಂಡೆಗಳೇ ಇದ್ದರೂ, ಕಟ್ಟೆ ಕಟ್ಟಿಸಿ ಅಲ್ಲಿ ಮಣ್ಣನ್ನು ತುಂಬಿ ಮಾವಿನ ಗಿಡ ನೆಡಲಾಗಿದೆ. ಈ ಹಿನ್ನೆಲೆಯಲ್ಲಿ ಅಂದಿನ ಕಾಯಕ್ರಮದಲ್ಲಿ ೧೦ ಸಾವಿರ ಮಾವಿನ ಗಿಡಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.

* ಬಾಕ್ಸ್‌ : ದೇಶದ ದೊಡ್ಡ ಶಿಲಾಲೇಖನ:ಇದೇ ಬೆಟ್ಟದ ಮತ್ತೊಂದು ವಿಶೇಷ ಎನ್ನುವಂತೆ ಈ ಮಂಟಪದ ಬಳಿಯೇ ಸ್ವಸ್ತಿಶ್ರೀ ಚಾರುಕೀತಿ ಭಟ್ಟಾರಕ ಸ್ವಾಮೀಜಿಗಳ ಜೀವನ ಚರಿತ್ರೆಯನ್ನು ಒಳಗೊಂಡ ಬೃಹತ್‌ ಆದ ಶಿಲಾ ಲೇಖನ ನಿರ್ಮಾಣ ಮಾಡಲಾಗುವುದು. ಈ ಶಿಲಾಲೇಖನ ಇಡೀ ದೇಶದಲ್ಲಿಯೇ ಬೃಹತ್‌ ಆದ ಶಿಲಾಲೇಖನವಾಗಿದ್ದು, ೬ ಇಂಚು ದಪ್ಪದಾದ ೭ ಅಡಿ ಎತ್ತರದ ೬ ಅಡಿ ಅಗಲದ ಬೃಹತ್‌ ಕಲ್ಲಿನ ಮೇಲೆ ನಡುಗನ್ನಡ ಭಾಷೆಯಲ್ಲಿ ಜೀವನ ಚರಿತ್ರೆಯನ್ನು ಕೆತ್ತಿಸಲಾಗುವುದು. ಪುಸ್ತಕ ಅಥವಾ ಮರದ ಹಲಗೆ ಮೇಲೆ ಇದನ್ನು ಕೆತ್ತಿಸಿದರೂ ಒಂದಷ್ಟು ವರ್ಷಗಳ ನಂತರದ ಅದು ನಶಿಸಿಹೋಗುತ್ತದೆ. ಆದರೆ, ಕಲ್ಲಿನ ಮೇಲೆ ಅದನ್ನು ಕೆತ್ತಿಸಿದಲ್ಲಿ ಅದು ಶಾಶ್ವತವಾಗಿ ಉಳಿಯಲಿದೆ. ಹಾಗೆಯೇ ಇದು ಮುಂದಿನ ಪೀಳಿಗೆಯವರಿಗೂ ಕೂಡ ಅರ್ಥವಾಗಲೆನ್ನುವ ಕಾರಣಕ್ಕೆ ನಡುಗನ್ನಡ ದಲ್ಲಿ ಕೆತ್ತಿಸಲಾಗುತ್ತಿದೆ ಎಂದು ಅಭಿನವ ಚಾರುಕೀರ್ತಿ ಭಟ್ಟಾರಕರು ತಿಳಿಸಿದರು.