ಉಚಿತ ಯೋಜನೆ ಘೋಷಿಸುವ ಮುನ್ನ ಆರ್ಥಿಕ ಸ್ಥಿತಿ ಅರಿವಿರಬೇಕು: ನಿರ್ಮಲಾ ಸೀತಾರಾಮನ್

| Published : Mar 25 2024, 12:53 AM IST

ಉಚಿತ ಯೋಜನೆ ಘೋಷಿಸುವ ಮುನ್ನ ಆರ್ಥಿಕ ಸ್ಥಿತಿ ಅರಿವಿರಬೇಕು: ನಿರ್ಮಲಾ ಸೀತಾರಾಮನ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದಿಂದ ಹಣ ಬಂದಿಲ್ಲ ಎಂದು ಆಧಾರ ರಹಿತವಾಗಿ ಆರೋಪಿಸುತ್ತಿದೆ. ಆದರೆ ನಾವು ರಾಜ್ಯಕ್ಕೆ ನೀಡಬೇಕಾದ ಸಂಪೂರ್ಣ ಹಣ ನೀಡಲಾಗಿದೆ. ಈ ಸಂಬಂಧ ಆಡಿಟ್ ಪತ್ರ ನಮಗೆ ತಲುಪಿದೆ. ಅದನ್ನು ಬಿಡುಗಡೆ ಮಾಡುತ್ತೇವೆ. ಆ ದಾಖಲೆ ನಮಗೆ ತಲುಪದ ಕಾರಣ ಅದನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಉಚಿತ ಯೋಜನೆಗಳನ್ನು ಘೋಷಿಸುವ ಮುನ್ನ ಆರ್ಥಿಕ ಸ್ಥಿತಿಯ ಬಗ್ಗೆ ಅರಿವಿರಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಮೈಸೂರಿನ ಥಿಂಕರ್ಸ್ ಫೋರಂ ಸಂಘಟನೆ ಜತೆ ಭಾನುವಾರ ಸಂವಾದ ನಡೆಸಿದ ಅವರು, ಆರ್ಥಿಕ ಪರಿಸ್ಥಿತಿ ಪರಿಶೀಲಿಸದೆ ಏಕಾಏಕಿ ಉಚಿತ ಗ್ಯಾರಂಟಿ ಯೋಜನೆ ಘೋಷಿಸುವುದು ತಪ್ಪು. ಏನೂ ನೋಡದೆ ಯೋಜನೆ ಘೋಷಿಸಿ, ಈಗ ಕೇಂದ್ರ ಸರ್ಕಾರದ ಮೇಲೆ ಆರೋಪಿಸುವುದು ಸರಿಯಲ್ಲ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದಿಂದ ಹಣ ಬಂದಿಲ್ಲ ಎಂದು ಆಧಾರ ರಹಿತವಾಗಿ ಆರೋಪಿಸುತ್ತಿದೆ. ಆದರೆ ನಾವು ರಾಜ್ಯಕ್ಕೆ ನೀಡಬೇಕಾದ ಸಂಪೂರ್ಣ ಹಣ ನೀಡಲಾಗಿದೆ. ಈ ಸಂಬಂಧ ಆಡಿಟ್ ಪತ್ರ ನಮಗೆ ತಲುಪಿದೆ. ಅದನ್ನು ಬಿಡುಗಡೆ ಮಾಡುತ್ತೇವೆ. ಆ ದಾಖಲೆ ನಮಗೆ ತಲುಪದ ಕಾರಣ ಅದನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ತಾವು ಘೋಷಿಸಿದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದೆ, ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈ ಮುಂಚೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಸ್ಥಿಯಲ್ಲಿತ್ತು. ಆರ್ಥಿಕ ಮಂತ್ರಿಯಾಗಿ ಹೇಳುವುದೆಂದರೆ, ಉಚಿತ ಯೋಜನೆ ನೀಡುವುದರಲ್ಲಿ ತಪ್ಪಿಲ್ಲ. ಆದರೆ ಅದಕ್ಕೂ ಮುನ್ನ ಉಚಿತ ಯೋಜನೆಗಳನ್ನು ಘೋಷಿಸುವ ಮುನ್ನ ಅದಕ್ಕೆ ಅಗತ್ಯವಿರುವ ಬಜೆಟ್ ನಮ್ಮಲ್ಲಿ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ರಾಜ್ಯ ಸರಕಾರ ಇದ್ಯಾವುದನ್ನೂ ಪರಿಗಣಿಸದೆ 60 ಸಾವಿರ ಕೋಟಿ ರೂ. ಅಗತ್ಯವಿರುವ ಗ್ಯಾರಂಟಿ ಘೋಷಿಸಿತು ಎಂದರು.

ಕರ್ನಾಟಕ ಸರ್ಕಾರ ಎನ್.ಡಿ.ಆರ್.ಎಫ್ಅನುದಾನ ಬಂದಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ನಾವು ಅದಕ್ಕೆ ಬೇಕಾದ ಎಲ್ಲಾ ದಾಖಲೆಯನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು. ಈ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎಂದು ನ್ಯಾಯಾಲಯವೇ ತೀರ್ಮಾನಿಸಲಿ ಎಂದರು.

ದೇಶದಲ್ಲಿ ಈಗ ಡಿಜಿಟಲ್ ಕ್ರಾಂತಿಯಾಗಿದೆ. ಉತ್ಪಾದನೆ ಹಾಗೂ ವಿದೇಶಿ ಹೂಡಿಕೆ ಹೆಚ್ಚಳದಿಂದ ಭಾರತ ಜಾಗತಿಕವಾಗಿ ಐದನೇ ದೊಡ್ಡ ಅರ್ಥವ್ಯವಸ್ಥೆ ಹೊಂದಿದ ದೇಶವಾಗಿದೆ. ಮುಂದಿನ ಕೆಲವೇ ವರ್ಷದಲ್ಲಿ ನಾವು 3ನೇ ಸ್ಥಾನ ಪಡೆಯಲಿದ್ದೇವೆ. ಮುಂದಿನ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ಅವರು ಹೇಳಿದರು.

ಬಿಜೆಪಿ ಕಳೆದ ಹತ್ತು ವರ್ಷದಲ್ಲಿ ಭ್ರಷ್ಟ ರಹಿತ ಆಡಳಿತ ನೀಡಿದೆ. ರೆಲ್ ಖರೀದಿ ಬಗ್ಗೆ ಟೀಕೆ ಮಾಡಿದವರಿಗೆ ನ್ಯಾಯಾಲಯವೇ ತಕ್ಕ ಉತ್ತರ ನೀಡಿದೆ. ಈಗ ಕೆಲವರು ಚುನಾವಣ ಬಾಂಡ್ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಹೆಸರಿಗೆ ಚ್ಯುತಿ ತರಲು ಹೀಗೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಕೈಗಾರಿಕೆ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರದ ಪರಿಣಿತರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಸೂಕ್ತ ದಾಖಲೆ, ಮಾಹಿತಿ ಇಲ್ಲದೇ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಮುಂಚಿತವಾಗಿ ಸಾಕಷ್ಟು ಸಮನ್ಸ್ ನೀಡಿದ ನಂತರವೇ ಕೇಜ್ರಿವಾಲ್ ಬಂಧನವಾಗಿದೆ. ಇದಕ್ಕೆ ನ್ಯಾಯಾಲಯದ ಸಮ್ಮತಿಯೂ ಇತ್ತು. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.

- ನಿರ್ಮಲಾ ಸೀತಾರಾಮನ್, ಕೇಂದ್ರ ವಿತ್ತ ಸಚಿವೆ