ಸಾರಾಂಶ
ಹಾವೇರಿ:ನಗರದ ಜಿನ ಮಂದಿರದಲ್ಲಿ ಬಹಳ ವರ್ಷಗಳ ನಂತರ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಚಾತುರ್ಮಾಸ ಆಚರಣೆ ಆರಂಭವಾಗಿದ್ದು, ವಿವಿಧ ಜಿಲ್ಲೆಗಳಿಂದ ಶಾವಕ ಶ್ರಾವಕಿಯರು ಆಗಮಿಸುತ್ತಿದ್ದಾರೆ. ಪ್ರತಿನಿತ್ಯ ವಿವಿಧ ಪೂಜಾ ಕಾರ್ಯಗಳು ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಮುನಿಶ್ರೀಗಳ ದರ್ಶನಕ್ಕೆ ಆಗಮಿಸುತ್ತಿರುವವರಿಗೆ ಶುದ್ಧ ಆಹಾರ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಭಗವಂತರ ಅಭಿಷೇಕಮಾಡಲು ಸಹ ಅವಕಾಶ ಕಲ್ಪಿಸಲಾಗುತ್ತಿದೆ. ಗುರುಪಾಸ್ತಿ, ಸ್ವಾಧ್ಯಾಯ, ಸಂಯಮ, ತಪ ಮತ್ತು ದಾನ ಇವುಗಳು ಗೃಹಸ್ಥರ ಷಟ್ ಕ್ರಿಯೆಗಳಾಗಿವೆ. ಈ ಷಟ್ ಕ್ರಿಯೆಗಳಲ್ಲಿ ದೇವಪೂಜೆ ಮೊದಲನೆಯದು, ವೀತರಾಗ ಭಗವಂತರ ಪೂಜೆಯನ್ನು ಶ್ರವಾಕರು ಸ್ವತಃ ಪ್ರತಿದಿನ ಮಾಡಬೇಕು. ಈ ಎಲ್ಲ ವಿಷಯಗಳ ಬಗ್ಗೆ ಮುನಿಗಳು ಅತ್ಯಂತ ಮನಮುಟ್ಟುವಂತೆ ತಿಳಿಸುತ್ತಿದ್ದಾರೆ. ಪ್ರತಿಯೊಬ್ಬರೂ ಪ್ರತಿದಿನ ಜಿನಮಂದಿರಕ್ಕೆ ಆಗಮಿಸಬೇಕು ಹಾಗೂ ಶ್ರಾವಕರು ಭಗವಂತರ ಅಭಿಷೇಕ ಮಾಡಬೇಕು ಎಂದು ತಿಳುವಳಿಕೆ ನೀಡುತ್ತಿದ್ದಾರೆ. ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗಾರ ಮಹಾರಾಜರ ಸಾನ್ನಿಧ್ಯದಲ್ಲಿ ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಜಿನಭಗವಂತರಿಗೆ ಅಭಿಷೇಧಕ, ಶಾಂತಿಧಾರೆ ಸೇರಿದಂತೆ ವಿವಿಧ ಪೂಜಾ ವಿಧಾನಗಳು ನಡೆಯುತ್ತಿವೆ. ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರ: ಜಿನ ಮಂದಿರದಲ್ಲಿ ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರ ಸೆ. 29ರ ವರೆಗೆ ನಡೆಯಲಿದೆ. ಮುನಿಶ್ರೀ 108 ವಿದಿತಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಹಾಗೂ ಪ್ರತಿಮಾಧಾರಿಗಳಾದ ಸಿದ್ಧಗೌಡ ಪಾಟೀಲ, ಹಾರೋಗೇರಿ, ಬ್ರ.ಸಾಧನ ದೀದಿ, ಪರಿಮಳ ಮೋಹನ, ಬೆಳ್ಳೂರು, ಜಯಕುಮಾರ ಬಯ್ಯಾಜಿ, ಮಹಾವೀರ ಬಯ್ಯಾಜಿ ಅವರ ನೇತೃತ್ವದಲ್ಲಿ ಜೈನ ಧರ್ಮದ ತತ್ವಗಳನ್ನು ಶ್ರಾವಕರ ಆಚಾರ, ವಿಚಾರಗಳ ಸಂಸ್ಕಾರ, ಜ್ಞಾನ, ಪೂಜೆ, ಶ್ರಾವಕ-ಶ್ರಾವಕಿ ಸಂಸ್ಕಾರಾದಿ ಕಾರ್ಯಕ್ರಮಗಳನ್ನು ಮಕ್ಕಳದಿಂದ ಹಿಡಿದು ಎಲ್ಲ ವಯೋಮಾನದವರಿಗೆ ನೀಡಲಾಗುತ್ತಿದೆ. 135ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದು, ಜಿನಧರ್ಮದ ಜ್ಞಾನವನ್ನು ತುಂಬಾ ಉತ್ಸಾಹದಿಂದ ಪಡೆದುಕೊಳ್ಳುತ್ತಿದ್ದಾರೆ. ಈ ಶಿಬಿರದಲ್ಲಿ ನಡೆಯುವ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮೂರು ಹಂತಗಳಲ್ಲಿ ನೀಡಲಾಗುತ್ತಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ಇರುತ್ತದೆ. ಸಿದ್ದಚಕ್ರ ಆರಾಧನೆ: ನಗರದಲ್ಲಿ ಮೊದಲಬಾರಿಗೆ ಸಿದ್ಧಚಕ್ರ ಮಹಾಮಂಡಲ ಆರಾಧನೆ ಡಿ. 12ರಿಂದ ಡಿ. 20ರ ವರೆಗೆ ಜರುಗಲಿದೆ. ಸಿದ್ಧಚಕ್ರ ಆರಾಧನೆಗೆ ಅಗತ್ಯ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಪೂಜಾ, ಆಹಾರ, ವಸತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ, ಆಯಾ ಸಮಿತಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾವೇರಿಯ ಭಗವಾನ ಶ್ರೀ 1008 ನೇಮಿನಾಥ ದಿಗಬಂದ ಜೈನ ಮಂದಿರ ಕಮೀಟಿ, ರತ್ನತ್ರಯ ಮಹಿಳಾ ಸಮಾಜ ಹಾಗೂ ವಿವಿಧ ಸಮಿತಿಗಳ ಸಹಯೋಗದಲ್ಲಿ, ಮುನಿಗಳ ಸಾನ್ನಿಧ್ಯದಲ್ಲಿ ನಡೆಯುವ ಎಲ್ಲಾ ಧರ್ಮದ ಕಾರ್ಯಕ್ರಮದಲ್ಲಿ ಹಾವೇರಿ ಸೇರಿದಂತೆ ಸುತ್ತಮುತ್ತಲ ನಗರ, ಪಟ್ಟಣ, ಗ್ರಾಮಗಳ ಶ್ರಾವಕ, ಶ್ರಾವಕಿಯರು ಪಾಲ್ಗೊಳ್ಳುತ್ತಿದ್ದಾರೆ.