ಛಾಯಾಗ್ರಾಹಕರಿಗೆ ಛಾಯಾ ಮಿಲನ್ ಕಾರ್ಯಕ್ರಮ

| Published : Aug 09 2024, 12:30 AM IST / Updated: Aug 09 2024, 12:31 AM IST

ಸಾರಾಂಶ

ಅಮರಗಿರಿ ಮಾಲೇಕಲ್ಲು ತಿರುಪತಿಯಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಕುಟುಂಬದ ಸದಸ್ಯರಿಗೆ "ಛಾಯಾ ಮಿಲನ್ " ಕಾರ್ಯಕ್ರಮ ಏರ್ಪಡಿಸುವುದರ ಮೂಲಕ ಕ್ರೀಡೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ತಾಲೂಕಿನ ಛಾಯಗ್ರಾಹಕರ ಪರಸ್ಪರ ಭೇಟಿಯು ಒಂದು ಕುಟುಂಬ ಎಂಬ ಭಾವನಾತ್ಮಕ ಬೆಸುಗೆ ನಿರ್ಮಾಣ ಮಾಡಿದೆ. ಕಾರ್ಯಕ್ರಮದಲ್ಲಿ ಪುರುಷರು , ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿ ಎಲ್ಲರಿಗೂ ಹೊಸತನ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಕುಟುಂಬದ ಸದಸ್ಯರಿಗೆ "ಛಾಯಾ ಮಿಲನ್ " ಕಾರ್ಯಕ್ರಮ ಏರ್ಪಡಿಸುವುದರ ಮೂಲಕ ಕ್ರೀಡೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಗದೀಶ್ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ಛಾಯಗ್ರಾಹಕರು ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಗುಣಮಟ್ಟದ ಸೇವೆ ನೀಡುವುದು ವೃತ್ತಿನಿರತ ಛಾಯಗ್ರಾಹಕರ ಧ್ಯೇಯೋದ್ದೇಶವಾಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಮದುವೆ, ಸಮಾರಂಭ ಎಂದು ಕುಟುಂಬದ ಸದಸ್ಯರೊಂದಿಗೆ ವೈಯಕ್ತಿಕ ಜೀವನದಿಂದ ನಮ್ಮ ಛಾಯಗ್ರಾಹಕರು ವಂಚಿತರಾಗುತ್ತಿದ್ದಾರೆ. ಕೆಲವೊಂದು ಸಲ ಛಾಯಗ್ರಾಹಕರು ಅಹಿತಕರ ಘಟನೆಗಳನ್ನು ಅನುಭವಿಸುವಂತಾಗಿದ್ದು, ನೊಂದ ಫೋಟೋಗ್ರಾಫರ್‌ ಜೊತೆ ನಮ್ಮ ಸಂಘವು ಸದಾ ಇರುತ್ತದೆ. ಇಂದು ಆಯೋಜಿಸಲಾಗಿರುವ ಕುಟುಂಬ ಮಿಲನ್ ಕಾರ್ಯಕ್ರಮವು ಛಾಯಾಗ್ರಾಹಕರು ಮತ್ತು ಸದಸ್ಯರು ಒಂದೆಡೆ ಸೇರಿ ಮಾನಸಿಕ ಮತ್ತು ದೈಹಿಕವಾಗಿ ಚೇತೋಹಾರಿಯಾಗಿರಲು ಅನುವುಮಾಡಿಕೊಟ್ಟಿದೆ. ತಾಲೂಕಿನ ಛಾಯಗ್ರಾಹಕರ ಪರಸ್ಪರ ಭೇಟಿಯು ಒಂದು ಕುಟುಂಬ ಎಂಬ ಭಾವನಾತ್ಮಕ ಬೆಸುಗೆ ನಿರ್ಮಾಣ ಮಾಡಿದೆ. ಕಾರ್ಯಕ್ರಮದಲ್ಲಿ ಪುರುಷರು , ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿ ಎಲ್ಲರಿಗೂ ಹೊಸತನ ನೀಡಿದ್ದಾರೆ.ಪ್ರಕೃತಿ ಮಡಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವು ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಕುಟುಂಬದ ಎಲ್ಲಾ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಐಶ್ವರ್ಯ ಡಿಜಿಟಲ್ ಪ್ರೆಸ್ ಮಾಲೀಕರಾದ ಸಂಪತ್ ಕುಮಾರ್, ಅಂಬರೀಷ್ ಹಾಗೂ ಹಿರಿಯ ಛಾಯಾಗ್ರಾಹಕರಾದ ರಾಜಣ್ಣ, ರಂಗನಾಥ್, ಕಾರ್ಯದರ್ಶಿ ಟಿ.ವಿ ಅರುಣ್ ಕುಮಾರ್, ಖಜಾಂಚಿ ಸತೀಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬೈರೇಶ್, ಯೋಗೇಶ್, ವಿರೂಪಾಕ್ಷ, ವಿಜಯ್, ಚೇತನ್ ಧನಂಜಯ, ಜಯರಾಮ್, ಕಿರಣ್ ಕಶ್ಯಪ್, ಅಶೋಕ್, ಹಾಗೂ ಸಂಘದ ಎಲ್ಲಾ ಸದಸ್ಯರು ತಮ್ಮ ಕುಟುಂಬದೊಂದಿಗೆ ಭಾಗವಹಿಸಿದ್ದರು.