ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ಇತ್ತೀಚೆಗೆ ಅಕ್ಷರಗಳು ವಿಕೃತಿಯ ಅಭಿವ್ಯಕ್ತಿ ಮತ್ತು ಅಗ್ಗದ ಮನರಂಜನೆಯ ಮಾಧ್ಯಮವಾಗಿ ವಿಜೃಂಬಿಸುತ್ತಿರುವುದು ಈ ಕಾಲದ ದುರಂತ ಎಂದು ಖ್ಯಾತ ರಂಗಕರ್ಮಿ ಬಾಬು ಹಿರಣ್ಣಯ್ಯ ವಿಷಾದಿಸಿದರು.ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸುವ್ವಿಮಲ್ಲ ವೇದಿಕೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಇತಿಹಾಸವನ್ನು ಸೃಷ್ಟಿ ಮಾಡುವ, ಜನರನ್ನು ಜಾಗೃತಿಗೊಳಿಸಿ ಹೊಸ ಕ್ರಾಂತಿಗೆ ಮುನ್ನುಡಿ ಹಾಡುವ ಚೈತನ್ಯ ಅಕ್ಷರಗಳಿಗೆ ಇದೆ. ಮೌಲ್ಯಗಳ ಮೂಲಕ ಕಟ್ಟಿ ಕೊಟ್ಟ ಅಕ್ಷರ ತಲೆತಲಾಂತರಕ್ಕೂ ಸಂಸ್ಕೃತಿ ಹಾಗೂ ಜೀವನ ಕ್ರಮಗಳ ದಾಖಲೆಯಾಗಿ ಉಳಿಯುತ್ತವೆ ಎಂದರು. ಹಿಂದೆ ಕುವೆಂಪು, ಮಾಸ್ತಿ, ಕಾರಂತರಂತಹ ಮಹನೀಯರ ಪರಂಪರೆ ನಮ್ಮ ಪೀಳಿಗೆಗೆ ಮೌಲ್ಯಯುತ ಸಾಹಿತ್ಯವನ್ನು ಬಿಟ್ಟು ಹೋಗಿತ್ತು. ಆದರೆ ಇವತ್ತು ಅಕ್ಷರ ಮತ್ತು ಜ್ಞಾನ ಸುಳ್ಳು ಹಾಗೂ ಚರ್ವಿತ ಚರ್ವಣ ಕಥನಗಳ ಸೃಷ್ಟಿಗಾಗಿ ಉಪಯೋಗವಾಗುತ್ತಿದೆ. ಸಾವಿರ ಸಾವಿರ ಪುಸ್ತಕಗಳು ಮಾರಾಟವಾಗುತ್ತಿದೆ ಎಂದು ಖುಷಿಪಡಬೇಕಾ ಅಥವಾ ಇವುಗಳ ಮಧ್ಯೆ ಲಕ್ಷ ಲಕ್ಷ ಸುಳ್ಳುಗಳು, ವಿಕೃತಗಳು ಬಿಕರಿಯಾಗುತ್ತಿವೆ ಎಂದು ವಿಷಾದಿಸಬೇಕಾ ಎಂಬ ತ್ರಿಶಂಕು ಸ್ಥಿತಿಯಲ್ಲಿ ನಿಂತಿದ್ದೇವೆ. ಅಕ್ಷರ ಮತ್ತು ಜ್ಞಾನವನ್ನೂ ಕಲಬೆರೆಕೆ ಮಾಡುವ ಘೋರ ಪಾಪ ಮಾಡಿರುವ ನಮ್ಮನ್ನು ಮುಂದಿನ ಪೀಳಿಗೆ ಖಂಡಿತಾ ಕ್ಷಮಿಸುವುದಿಲ್ಲ. ಈಗಲಾದರೂ ನಾವು ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮುಕ್ಕಾಗಿಸದೆ ಸಮಗ್ರವಾಗಿ, ಶುದ್ಧವಾಗಿ, ಪವಿತ್ರವಾಗಿ ಉಳಿಸುವ ಸಂಕಲ್ಪ ಮಾಡಬೇಕು ಎಂದು ಬಾಬು ಹಿರಣ್ಣಯ್ಯ ಹೇಳಿದರು.ಸಮ್ಮೇಳನದ ಸರ್ವಾಧ್ಯಕ್ಷರಾದ ಸಂಪಿಗೆ ತೋಂಟದಾರ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಾಹಿತ್ಯಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಸಮಾರಂಭದಲ್ಲಿ ತಾಲೂಕು ಘಟಕದ ರಂಗಕರ್ಮಿ ಬಾಬು ಹಿರಣ್ಣಯ್ಯ, ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ಕೆ. ಪುಟ್ಟರಂಗಪ್ಪ, ಲೇಖಕ ತುರುವೇಕೆರೆ ಪ್ರಸಾದ್, ಡಾ.ಚೌದ್ರಿ ನಾಗೇಶ್, ಟಿ.ಎಸ್. ಬೋರೇಗೌಡ, ಡಾ, ನವೀನ್, ನಿಕಟಪೂರ್ವ ಅಧ್ಯಕ್ಷ ನಂ.ರಾಜು, ಶೌರ್ಯ ಪ್ರಶಸ್ತಿ ಪುರಸ್ಕೃತ ಧರಣೀಶ್, ಎಸ್. ಬಿ.ಶಿವಣ್ಣ, ಕಲಾವಿದ ಸಾಗರ್ ತಳವಾರನಹಳ್ಳಿ, ಕೊಂಡಜ್ಜಿ ವೆಂಕಟೇಶ್, ಹಡವನಹಳ್ಳಿ ವೀರಣ್ಣಗೌಡ, ಎಸ್. ಎಂ. ಕುಮಾರಸ್ವಾಮಿ ಇತರರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಸಂಪೂರ್ಣ ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕು ಘಟಕದ ಅಧ್ಯಕ್ಷ ಡಿ.ಪಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಗಂಗಾಧರ ದೇವರಮನೆ, ವಿಜಯಕುಮಾರ್, ಲೋಕೇಶ್, ಕಾರ್ಯದರ್ಶಿ ದಿನೇಶ್ ಕುಮಾರ್, ಸಿ.ಪಿ. ಪ್ರಕಾಶ್, ಗುರುರಾಜ್ ಇತರರು ಉಪಸ್ಥಿತರಿದ್ದರು. ಪರಶಿವಮೂರ್ತಿ ಸ್ವಾಗತಿಸಿದರು. ಲೋಕೇಶ್ ಕುಮಾರ್ ವಂದಿಸಿದರು. ಹಂಸಲೇಖ, ರೂಪಶ್ರೀ ವಿಶ್ವನಾಥ್, ಲತಾ ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
;Resize=(128,128))
;Resize=(128,128))
;Resize=(128,128))