ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಪಟ್ಟಣದ ಪುರಸಭೆಗೆ ಸೇರಿದ 72 ವಾಣಿಜ್ಯ ಮಳಿಗೆಗಳನ್ನು ಫೆ. 29 ರಂದು ಆನ್ ಲೈನ್ ಮೂಲಕ ಹರಾಜು ಮಾಡಿದ್ದು ಈವರೆಗೆ ಬಿಡ್ಡುದಾರರಿಗೆ ಮಳಿಗೆಗಳನ್ನು ನೀಡದೆ 36 ವರ್ಷಗಳಿಂದ ಬಾಡಿಗೆಗೆ ಪಡೆದಿದ್ದ ಹಳೆ ಮಳಿಗೆದಾರರಿಗೆ ಕೊಡಲು ಹುನ್ನಾರ ನಡೆದಿದೆ ಎಂದು ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಜಿಲ್ಲಾಧಿಕಾರಿಗೆ ದೂರು ನೀಡಿದರು.ಪಟ್ಟಣ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು, ಯಶಸ್ವಿ ಬಿಡ್ಡುದಾರರಿಗೆ ಮಳಿಗೆ ಹಸ್ತಾಂತರ ಮಾಡದೆ ಪುರಸಭೆ ಆಡಳಿತ ಮಂಡಳಿ ಅನ್ಯಾಯ ಮಾಡಿರುವುದರಿಂದ ಒಂದು ತಿಂಗಳಿಗೆ 24 ಲಕ್ಷ ಪುರಸಭೆಗೆ ಬಾಡಿಗೆ ಹಣ ನಷ್ಠವಾಗುತ್ತಿದ್ದು ಇದಕ್ಕೆ ಯಾರು ಹೊಣೆ ಎಂದು ದೂರಿದರು.
ಈ ಸಂಬಂಧ ಅಧಿಕಾರಿಗಳು ಮತ್ತು ಹಿಂದಿನ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಅವರು, ಇ -ಪ್ರಕ್ಯೂರ್ ಮೆಂಟ್ ಹರಾಜಿನ ನಿಯಮದಲ್ಲಿ ಇಲ್ಲದ ಹೊಸ ಕಾನೂನು ಹೇಳಿ ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಅವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.ಕಾನೂನು ಬದ್ದವಾಗಿ ಹರಾಜು ಮಾಡಿದ್ದು ಅದರಲ್ಲಿ ನಾವು ಯಶಸ್ವಿ ಬಿಡ್ಡುದಾರರಾಗಿದ್ದು ಇ- ಪ್ರಕ್ಯೂರ್ ಮೆಂಟಿನ ಎಲ್ಲಾ ಷರತ್ತಿಗೆ ಬದ್ಧರಾಗಿದ್ದು ಕೇವಲ ಆರು ದಿನಗಳಲ್ಲಿ ಮಳಿಗೆಗಳನ್ನು ಹಸ್ತಾಂತರಿಸುವುದಾಗಿ ಹೇಳಿ ಈಗ ಮಳಿಗೆಗಳನ್ನು ನೀಡದೆ ನೀತಿ ಸಂಹಿತೆಯ ಕಾರಣದ ನೆಪ ಹೇಳಿಕೊಂಡು ಕಾಲ ಹರಣ ಮಾಡುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಬೀಗ ಹಾಕಿರುವ ಮಳಿಗೆಗಳ ಮುಂದೆ ವ್ಯಾಪಾರ ವಹಿವಾಟು ಮಾಡಲು ಅನುಕೂಲ ಮಾಡಿಕೊಟ್ಟು ಹಾಗೂ ವಿದ್ಯುತ್ ಸಂಪರ್ಕದ ಜೊತೆಗೆ ಆ ಮಳಿಗೆಗೆ ಬೀಗ ಹಾಕಿರುವ ಹಾಗೆ ನಾಟಕ ಮಾಡಿ ಬೀಗದ ಕೈಗಳನ್ನು ಆಯಾ ಮಳಿಗೆದಾರರಿಗೆ ಕೊಡಲಾಗಿದೆ. ಇದರ ಉದ್ದೇಶವೇನು ಎಂಬುದು ಪುರಸಭೆ ಅಧಿಕಾರಿಗಳು ಬಹಿರಂಗವಾಗಿ ಪಟ್ಟಣದ ಜನತೆ ತಿಳಿಸಿ ಎಂದರು.ಪುರಸಭೆ ಆಡಳಿತ ಮಂಡಳಿಯವರು ಬಿಡ್ ದಾರರಿಗೆ ಮಳಿಗೆ ನೀಡಲು ಸತಾಯಿಸುತ್ತಿದ್ದನ್ನು ನೋಡಿದರೆ ಹಳೆ ಮಳಿಗೆದಾರದಿಂದ 2.70 ಕೋಟಿ ಹಣ ವಸೂಲಿ ಮಾಡಿ ಲಂಚದ ರೂಪದಲ್ಲಿ ಆಯ್ದ ಅಧಿಕಾರಿಗಳಿಗೆ ಮತ್ತು ಕೆಲವು ಪುರಸಭೆ ಸದಸ್ಯರು ಕೂಡ ನೀಡಿರುವ ಬಗ್ಗೆ ಗಾಳಿಸುದ್ದಿ ಹರಡಿದೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡರಾದ ನಟೇಶ್, ಬಂಗಾರಿ, ಮಳಿಗೆ ಬಿಡ್ಡುದಾರಾರಾದ ಹರೀಶ್, ಅನುಷ್, ಪ್ರದೀಪ್, ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಕೃಷ್ಣಚಾರಿ, ಎಚ್.ಡಿ. ಸುನಿಲ್, ಮಂಜುನಾಥ್, ಕೆ. ಸುನೀಲ್, ವಿಜಯ್ ಮೊದಲಾದವರು ಇದ್ದರು.