ಸಾರಾಂಶ
-ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಸಂಜೀವಮೂರ್ತಿ ಸಲಹೆ । ಬೆಳಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ೧.೫೦ಲಕ್ಷ ಚೆಕ್ ವಿತರಣೆ
--ಕನ್ನಡಪ್ರಭವಾರ್ತೆ ಚಳ್ಳಕೆರೆ: ಶಿವಮೊಗ್ಗ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲುಒಕ್ಕೂಟ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ಸಹಾಯ, ಸಂಘಗಳ ಬಲವರ್ಧನೆಗೆ ಅಗತ್ಯ ಸೌಲಭ್ಯ ನೀಡುವ ಜೊತೆಗೆ ಏಕರೂಪ ತಂತ್ರಾಂಶವನ್ನು ಅಳವಡಿಸುವ ಮೂಲಕ ಪಾರದರ್ಶಕತೆ ಕಾಪಾಡಿಕೊಳ್ಳುತ್ತಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಹೇಳಿದರು.
ಅವರು ನಗರದ ಕಚೇರಿಯಲ್ಲಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕು ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಗೆ ತಂತ್ರಾಂಶ ಅಳವಡಿಕೆ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ತರಬೇತಿಯಲ್ಲಿ ಪಾಲ್ಗೊಂಡ ಎರಡೂ ತಾಲೂಕಿನ ಕಾರ್ಯದರ್ಶಿಗಳು ತರಬೇತಿ ನಂತರ ತಮ್ಮ, ತಮ್ಮ ಕೇಂದ್ರಗಳಲ್ಲಿ ತಂತ್ರಾಂಶವನ್ನು ಅಳವಡಿಸಿಕೊಂಡು ರೈತರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಪಾರದರ್ಶಕವಾಗಿ ಕಾರ್ಯಗಳನ್ನು ನಿಬಾಯಿಸಬಹುದು. ಒಕ್ಕೂಟಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಮತ್ತು ಪ್ರಾಮಾಣಿಕತೆ ಅಗತ್ಯವಿದ್ದು, ಒಗ್ಗೂಡಿ ಕೆಲಸ ಮಾಡಿದರೆ ಉತ್ತಮ ಲಾಭದತ್ತ ನಡೆಯಬಹುದು ಎಂದರು.
ಬೆಳಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ಬಿಡುಗಡೆಯಾದ ಮೊದಲನೇ ಹಂತದ ೧.೫೦ಲಕ್ಷ ಚೆಕನ್ನು ಸಂಘದ ಕಾರ್ಯದರ್ಶಿ ಮಂಜುನಾಥಗೆ ಹಸ್ತಾಂತರಿಸಿದರು. ಒಕ್ಕೂಟದಿಂದ ಬಿಡುಗಡೆಯಾಗುವ ಹಣವನ್ನು ಸದುಪಯೋಗ ಪಡಿಸಿಕೊಂಡು ಹಾಲು ಉತ್ಪಾದಕರ ಸಹಕಾರ ಸಂಘ ಬಲಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ವಿಭಾಗೀಯ ಅಧಿಕಾರಿ ಎಂ.ಪುಟ್ಟರಾಜು, ಒಕ್ಕೂಟದ ವ್ಯವಸ್ಥಾಪಕಿ ಅನುಷಾ, ವಿಸ್ತರಣಾಧಿಕಾರಿ ನಯಾಜ್‌ಬೇಗ್, ಪ್ರಹ್ಲಾದ್, ರಾಘವೇಂದ್ರ, ಸುರೇಶ್‌ಬಾಬು ಉಪಸ್ಥಿತರಿದ್ದರು.
--ಪೋಟೊ: ಚಳ್ಳಕೆರೆ ನಗರದ ಶಿವಮೊಗ್ಗ ಹಾಲು ಉತ್ಪಾದಕರ ಸಹಕಾರ ಸಂಘದ ಶಾಖಾ ಕಚೇರಿಯಲ್ಲಿ ನಡೆದ ಕಾರ್ಯಗಾರದಲ್ಲಿ ಬೆಳಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಚೆಕ್ ವಿತರಿಸಲಾಯಿತು.