ಸಾರಾಂಶ
ಹುಬ್ಬಳ್ಳಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮತ್ತೊಮ್ಮೆ ತಮಗೆ ದೂರು ಕೊಡದೇ ನಾವೇನೂ ಮಾಡುವುದಕ್ಕೆ ಬರುವುದಿಲ್ಲ. ಅವರು ದೂರು ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಈಗಲೂ ಮಾತುಕತೆ ಮಾಡಿ ಪ್ರಕರಣ ಇತ್ಯರ್ಥ ಪಡಿಸಲು ಸಿದ್ಧ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ. 19ರಂದು ಸದಸ್ಯ ಸಿ.ಟಿ. ರವಿ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆಗ ದೂರು ಕೊಟ್ಟಿದ್ದರು. ಅದರಂತೆ ರವಿ ಕೂಡ ಕೊಟ್ಟಿದ್ದರು. ಆ ದೂರಿಗೆ ಸಂಬಂಧಪಟ್ಟಂತೆ ಈಗಾಗಲೇ ತಾವು ರೂಲಿಂಗ್ ಕೊಟ್ಟಾಗಿದೆ. ಮತ್ತೇನೂ ಮಾಡುವುದಕ್ಕೆ ಬರುವುದಿಲ್ಲ ಎಂದರು.ರವಿ ನಿಂದಿಸಿರುವ ಬಗ್ಗೆ ತಮ್ಮಲ್ಲಿ ಸಾಕ್ಷ್ಯ ಇವೆ. ಸಭಾಪತಿಗಳಿಗೆ ದೂರು ನೀಡುವುದಾಗಿ ಸಚಿವೆ ಲಕ್ಷ್ಮೀಹೆಬ್ಬಾಳಕರ್ ಹೇಳಿಕೆ ನೀಡಿದ್ದರು. ಆದರೆ, ಈ ವರೆಗೆ ಯಾವುದೇ ದೂರನ್ನು ಕೊಟ್ಟಿಲ್ಲ. ದೂರು ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸಾಕ್ಷ್ಯ ಕೊಟ್ಟರೆ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಪರಿಶೀಲಿಸಲಾಗುವುದು. ಈ ವರೆಗೂ ದೂರನ್ನು ಮಾತ್ರ ಕೊಟ್ಟಿಲ್ಲ ಎಂದರು.
ಆದರೆ ಸಿ.ಟಿ. ರವಿ ಅವರು ಈ ವರೆಗೆ ಡಿ. 19, 24 ಹಾಗೂ 27ರಂದು ಹೀಗೆ ಮೂರು ದೂರು ಕೊಟ್ಟಿದ್ದಾರೆ. ಇದರಲ್ಲಿ ಒಂದು ತಮ್ಮ ವಿರುದ್ಧದ ಆರೋಪ ಸತ್ಯಕ್ಕೆ ದೂರ ಎಂಬುದಾಗಿದ್ದರೆ, ಅವಾಚ್ಯ ಶಬ್ದಗಳಿಂದ ಬೈದಿಲ್ಲ ಎಂಬುದಾಗಿತ್ತು. ಮತ್ತೊಂದು ಹಕ್ಕು ಚ್ಯುತಿಯದ್ದಾಗಿತ್ತು ಎಂದು ಸ್ಪಷ್ಟಪಡಿಸಿದರು. ಹಕ್ಕುಚ್ಯುತಿಗೆ ಸಂಬಂಧಪಟ್ಟಂತೆ ಮುಂದಿನ ಕ್ರಮಕ್ಕೆ ಕಳುಹಿಸಲಾಗಿದೆ ಎಂದರು.ಮಹಜರ್:
ಸಿಒಡಿ ಹಾಗೂ ಬೆಳಗಾವಿ ಕಮಿಷನರೇಟ್ ಎರಡು ಕಡೆಗಳಿಂದಲೂ ಮಹಜರ್ ಮಾಡಲು ಅನುಮತಿ ಕೊಡಿ ಎಂದು ಪತ್ರ ಬಂದಿವೆ. ಯಾವ ರೀತಿ ಮಹಜರ್ ಮಾಡುತ್ತೀರಿ? ಏನೇನು ಮಹಜರ್ ಮಾಡುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳಿದ್ದೇವೆ. ಆದರೆ ಈ ಬಗ್ಗೆ ಅಲ್ಲಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಅಲ್ಲೇನು ಮಹಜರು ಮಾಡುತ್ತಾರೆ ಎಂಬುದು ನಮಗೆ ಗೊತ್ತಾಗಬೇಕು. ಇದಕ್ಕಾಗಿ ಈ ಪ್ರಶ್ನೆ ಕೇಳಿದ್ದೇವೆ. ಒಂದು ವೇಳೆ ಅವರು ಸ್ಪಷ್ಟನೆ ನೀಡಿದರೂ ಪರಿಷತ್‌ನಲ್ಲಿ ಮಹಜರ್ ನಡೆಸಲು ಕೊಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಅಧಿಕಾರ ನಮ್ಮದೇ ಇರುತ್ತದೆ ಎಂದರು.ಇಬ್ಬರನ್ನೂ ಕರೆದು ಮಾತನಾಡಿಸಿ ಪ್ರಕರಣವನ್ನು ಇತ್ಯರ್ಥ ಪಡಿಸಲು ಸಿದ್ಧವಿರುವುದಾಗಿ ತಿಳಿಸಿದ ಅವರು, ವಿಧಾನಪರಿಷತ್ ಇತಿಹಾಸದಲ್ಲೇ ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಇದೇ ಮೊದಲು, ಇದನ್ನು ಇತ್ಯರ್ಥ ಪಡಿಸಬೇಕು ಎಂಬುದಾಗಿದೆ ಎಂದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ. ಯಾರೂ ಒತ್ತಡವನ್ನೂ ಹೇರುವುದೂ ಇಲ್ಲ. ಒಂದು ವೇಳೆ ಒತ್ತಡ ಹೇರಿದರೂ ನಡೆಯಲ್ಲ. ಕಾನೂನು ಬದ್ಧವಾಗಿ ಏನು ಮಾಡಬೇಕೋ ಅದನ್ನೇ ಮಾಡುತ್ತೇನೆ. ಮೂರು ಸಲ ಸಭಾಪತಿಯಾಗಿದ್ದೇನೆ. 45 ವರ್ಷದಿಂದ ಪರಿಷತ್‌ನಲ್ಲಿದ್ದೇನೆ. ಇಂಥ ಘಟನೆ ಮಾತ್ರ ನೋಡಿಲ್ಲ ಎಂದರು.