ಜಾತಿಗಣತಿ ಮತ್ತೊಮ್ಮೆ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಿ : ಎನ್. ಆರ್. ಇಂದೂಧರ್

| N/A | Published : Apr 17 2025, 12:53 AM IST / Updated: Apr 17 2025, 01:08 PM IST

ಸಾರಾಂಶ

 ಭಾರತದಲ್ಲಿನ ರಾಜ್ಯ ಸರ್ಕಾರಗಳು ಜಾತಿಗಣತಿ ಸೇರಿದಂತೆ ಜನಗಣತಿ ನಡೆಸಲು ಸಂವಿಧಾನಾತ್ಮಕ ಅಧಿಕಾರ ಹೊಂದಿಲ್ಲ. ಈ ಗಣತಿ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ ಎಂದು ನೊಳಂಬ ಸಮಾಜ ಮುಖಂಡ ಹಾಗೂ ನಂದಿ ಸೌಹಾರ್ದ ಸಹಕಾರಿ ಬ್ಯಾಂಕ್‌ ನಿರ್ದೇಶಕ ಎನ್.ಆರ್. ಇಂದೂಧರ್ ಹೇಳಿದ್ದಾರೆ.

 ಮಲೇಬೆನ್ನೂರು : ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿಯು ಸಂವಿಧಾನದ ೨೧ನೇ ವಿಧಿಯಡಿ ಕಾನೂನು ಬಾಹಿರವಾಗಿದೆ. ಭಾರತದಲ್ಲಿನ ರಾಜ್ಯ ಸರ್ಕಾರಗಳು ಜಾತಿಗಣತಿ ಸೇರಿದಂತೆ ಜನಗಣತಿ ನಡೆಸಲು ಸಂವಿಧಾನಾತ್ಮಕ ಅಧಿಕಾರ ಹೊಂದಿಲ್ಲ. ಈ ಗಣತಿ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ ಎಂದು ನೊಳಂಬ ಸಮಾಜ ಮುಖಂಡ ಹಾಗೂ ನಂದಿ ಸೌಹಾರ್ದ ಸಹಕಾರಿ ಬ್ಯಾಂಕ್‌ ನಿರ್ದೇಶಕ ಎನ್.ಆರ್. ಇಂದೂಧರ್ ಹೇಳಿದರು.

ಪಟ್ಟಣದ ನಂದಿ ಸೌಹಾರ್ದ ಸಹಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ೨೧ನೇ ವಿಧಿಯು ಜನಸಾಮಾನ್ಯರ ಗೌಪ್ಯತೆ, ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಒಳಗೊಂಡಿದೆ, ೨೦೧೧ರ ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿ ಗಣತಿಯಲ್ಲಿ ೫೪ ಅಂಶಗಳಿವೆ. ಆ ಕಾರಣಕ್ಕಾಗಿ ವರದಿ ಬಹಿರಂಗಪಡಿಸಿಲ್ಲ. ಪ್ರಸ್ತುತ ಜಾತಿ ಗಣತಿ ಸಮೀಕ್ಷೆದಾರರು ಮನೆಗಳಿಗೆ ಬಾರದೇ ನೊಳಂಬ ಸಮಾಜದ ಅಂಕಿ ಅಂಶಗಳು ಲೋಪದಿಂದ ಕೂಡಿದೆ ಎಂದರು.

ಈ ಜಾತಿಗಣತಿಯನ್ನು ಮತ್ತೊಮ್ಮೆ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಬೇಕು. ಬಿಜೆಪಿಯೇತರ ಕೆಲ ರಾಜ್ಯಗಳಷ್ಟೇ ಜಾತಿಗಣತಿ ನಡೆಸುತ್ತಿವೆ. ಹನಿ ಟ್ರ್ಯಾಪ್, ಬೆಲೆ ಏರಿಕೆ, ಬಣ ಬಡಿದಾಟ, ಅಭಿವೃಧ್ದಿ ಇಲ್ಲದೇ ಜನರ ಮನಸ್ಸನ್ನು ಬೇರೆಡೆ ಪರಿವರ್ತಿಸಲು, ತಿಂಗಳು ತಳ್ಳುವುದಕ್ಕೆ ಮಾತ್ರ ಜಾತಿ ಗಣತಿ ಅಸ್ತ್ರವಾಗಿದೆ ಎಂದು ಆರೋಪಿಸಿದರು.

ವಕೀಲ, ಸಮಾಜದ ಮುಖಂಡ ಎನ್‌.ಪಿ. ತಿಮ್ಮನಗೌಡ ಮಾತನಾಡಿ, ನಮ್ಮ ಸಮುದಾಯವು ಕರ್ನಾಟಕದ ಹಾಸನ, ಮೈಸೂರು, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದೆ. ರಾಜ್ಯದಲ್ಲಿ ನೊಳಂಬರು ಒಟ್ಟು ೨೦ ಲಕ್ಷ ಸಂಖ್ಯೆಯಲ್ಲಿದ್ದಾರೆ. ಸಮೀಕ್ಷೆಯಲ್ಲಿ ಸರ್ಕಾರ ೧,೪೮,೮೯೪ ಮಾತ್ರ ತೋರಿಸಿದೆ. ತಿಪಟೂರು ಮತ್ತು ಗುಬ್ಬಿ ತಾಲೂಕಲ್ಲಿಯೇ ಈ ಸಂಖ್ಯೆ ಹೊಂದಿರುವ ಕಾರಣ ಅಂಕಿ ಸಂಖ್ಯೆಗಳಿಗೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.

ನೊಳಂಬ ಸಮಾಜದ ಕೇಂದ್ರ ಸಮಿತಿ ಮುಖಂಡರಾದ ಬಿ.ಕೆ. ಚಂದ್ರಶೇಖರ್, ಎಸ್.ಆರ್. ಪಾಟೀಲ್, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ನ್ಯಾಯವಾದಿ ಸಂದೀಪ್ ಪಾಟೀಲ್ ಶೀಘ್ರವೇ ಈ ಕುರಿತು ಸಭೆ ನಡೆಸಿ ಜಾತಿ ಗಣತಿ ಸಂಬಂಧ ಮುಂದಿನ ಹೋರಾಟದ ಕುರಿತು ಚರ್ಚಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಂದಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಚ್.ಟಿ. ಪರಮೆಶ್ವರಪ್ಪ ಉಪಾಧ್ಯಕ್ಷ ರವಿ, ಮುಖಂಡ ನಿರ್ದೇಶಕ ಎಚ್.ವೀರನಗೌಡ, ಜಿ.ಆಂಜನೇಯ, ರುದ್ರಗೌಡ ಇದ್ದರು.