ಸಾರಾಂಶ
ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆಯ ಪಾಲಿಕೆಗೆ ಸೇರಿದ ಸರ್ಕಾರಿ ಜಾಗದ ಅಸಲಿ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರ ಭಕ್ತರ ಬಳಗದ ಸದಸ್ಯರೊಂದಿಗೆ ಸೋಮವಾರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದರು.
ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆಯ ಪಾಲಿಕೆಗೆ ಸೇರಿದ ಸರ್ಕಾರಿ ಜಾಗದ ಅಸಲಿ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರ ಭಕ್ತರ ಬಳಗದ ಸದಸ್ಯರೊಂದಿಗೆ ಸೋಮವಾರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಕ್ಫ್ ಬೋರ್ಡ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮೈದಾನ ತಮ್ಮದೆಂದು ಪ್ರತಿಪಾದಿಸಲು ಹೊರಟಿದ್ದಾರೆ. ಈಗಾಗಲೇ ನಾವು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಆಯುಕ್ತರಿಗೆ ಮನವಿ ನೀಡಿದ್ದೇವೆ. ನ್ಯಾಯಾಲಯ ಕೂಡ ೮ ವಾರಗಳ ಅವಧಿಯನ್ನು ಪಾಲಿಕೆ ಆಯುಕ್ತರಿಗೆ ನೀಡಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಈಗ ಅವಧಿ ಮುಗಿದಿದೆ. ನಾವು ಮತ್ತೆ ಇಂದು ಆಯುಕ್ತರಿಗೆ ಮೂಲ ದಾಖಲೆಗಳ ಯಥಾ ನಕಲು ಪ್ರತಿಗಳನ್ನು ನೀಡಿದ್ದೇವೆ ಎಂದರು. ಅದರ ಜತೆಗೆ ಸರ್ಕಾರದ ಗೆಜೆಟ್ ನೋಟಿಫಿಕೇಷನ್, 1965ರಿಂದ 75ರವರೆಗಿನ ಭೂಕಂದಾಯ ಪುಸ್ತಕ ಸಂಖ್ಯೆ 4ರ 17/18ನೇ ಪುಟ ಮತ್ತು 1990ರಿಂದ 96 ರವರೆಗಿನ ಎಂ.ಆರ್. ನಂ. 19ರ ವಿಭಾಗ -4, ಪುಸ್ತಕ ೫ ಪುಟ ೮೪ ಹಾಗೂ 1995-96ರ ಎಂ.ಆರ್. ನಂ. 29ರ ವಿಭಾಗ 4 ಪುಸ್ತಕ ಸಂಖ್ಯೆ 13, ಕ್ರಮ ಸಂಖ್ಯೆ 1473 ಮತ್ತು ಅಂದಿನ ಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಹಾಗೂ 2031 ರವರೆಗಿನ ಸಿಡಿಪಿ ಯೋಜನೆಯ ನಕ್ಷೆಯನ್ನು ಮನವಿಯೊಂದಿಗೆ ನೀಡಿದರು. ಹಾಗೂ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಆಯುಕ್ತ ಮಾಯಣ್ಣಗೌಡ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
2019-2020-2021ರಲ್ಲಿ ಮೂರು ಬಾರಿ ಈ ವಿಷಯ ನ್ಯಾಯಾಲಯಕ್ಕೆ ಹೋಗಿದ್ದು, ಕರ್ನಾಟಕ ರಾಜ್ಯ ಪಾಲಿಕೆ ನಿಯಮ ೧೧೪ಎ ಅಡಿಯಲ್ಲಿ ಅರ್ಜಿ ದಾಖಲಾಗಿದ್ದು, ಘನ ನ್ಯಾಯಾಲಯ ಕೂಡ ಪುನರ್ ಪರಿಶೀಲನೆಗೆ ಸೂಚಿಸಿ ಗಡುವು ನೀಡಿತ್ತು. ಒಂದು ಪ್ರಕರಣ ನ್ಯಾಯಾಲಯದ ಆದೇಶಕ್ಕೆ ಸಿದ್ಧವಾಗಿದ್ದು, ಇನ್ನೊಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ವಿಚಾರಣೆ ಬಾಕಿ ಇದೆ. ನ್ಯಾಯಾಲಯಕ್ಕೆ ನಾವು ಸೂಕ್ತ ದಾಖಲೆಗಳನ್ನು ಒದಗಿಸುತ್ತೇವೆ. ಅಂತಿಮ ತೀರ್ಪು ನ್ಯಾಯಾಲಯ ನೀಡಲಿದೆ ಎಂದರು.ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ. ಕಾಂತೇಶ್, ಇ. ವಿಶ್ವಾಸ್, ಲೋಕೇಶ್, ಶಿವಾಜಿ, ಸತ್ಯನಾರಾಯಣ ಕಾಚಿನಕಟ್ಟೆ, ಶಂಕರನಾಯ್ಕ್, ಜಾಧವ್, ಅ.ಮ. ಪ್ರಕಾಶ್, ಕುಬೇರಪ್ಪ ಮತ್ತಿತರರು ಇದ್ದರು.