ಸಾರಾಂಶ
ಶಿಗ್ಗಾಂವಿ: ಜಿಲ್ಲೆಯಲ್ಲೇ ಉಗಮವಾಗುವ ಬೆಣ್ಣೆಹಳ್ಳ ಯೋಜನೆ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ದುಂಡಶಿ ಗ್ರಾಮದಲ್ಲಿ ₹75 ಲಕ್ಷ ವೆಚ್ಚದ ಅಂಬೇಡ್ಕರ್ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿರುವ ಡೋಣಿ ನದಿ ತನ್ನ ಪಥ ಬದಲಿಸಿ ಹರಿಯುವ ಕಾರಣ ರೈತರು ಸಮಸ್ಯೆಗೀಡಾಗುತ್ತಿದ್ದಾರೆ. ಶಾಸಕ ಯಾಸಿರ್‌ಖಾನ್ ಪಠಾಣ್ ಅವರು ಬೆಳ್ಳೆಹಳ್ಳ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದು, ಈ ಬಗ್ಗೆ ವಿವರ ಪಡೆದು ನಂತರ ನಿರ್ಣಯಕ್ಕೆ ಬರಲಾಗುವುದು ಎಂದು ಹೇಳಿದರು.ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಲವು ಭರವಸೆಗಳನ್ನು ನೀಡಿದ್ದು, ಈ ಭರವಸೆಗಳ ಪೈಕಿ ಮೊದಲನೆಯ ಯೋಜನೆಗೆ ಭೂಮಿಪೂಜೆ ಮಾಡಲಾಗಿದೆ ಎಂದು ಹೇಳಿದರು.
ಸಮುದಾಯ ಭವನವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಸಚಿವರು, ಸಮುದಾಯ ಭವನಗಳು ಗ್ರಾಮದಲ್ಲಿ ಉಪಯುಕ್ತ ಕಾರ್ಯಗಳಿಗೆ ಬಳಕೆಯಾಗಬೇಕು. ನಿರ್ವಹಣೆ ಕೊರತೆಯಿಂದ ಮತ್ತೊಂದು ಸ್ವರೂಪ ಪಡೆದುಕೊಳ್ಳಬಾರದು ಎಂದು ಹೇಳಿದರು.ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ ಪರಿಣಾಮ ಇಂದು ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ, ದುರ್ಬಲರಿಗೆ ಬಲ ಸಿಕ್ಕಿದೆ. ಸವಲತ್ತುಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಇದಕ್ಕೆ ಪೂರಕವಾಗಿಯೇ ಸಂವಿಧಾನ ರಚನೆ ಮಾಡಿದ್ದಾರೆ ಎಂದರು.
ಶಾಸಕ ಯಾಸೀರ್‌ಖಾನ್ ಪಠಾಣ್ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ಶ್ರಮ ಸಾಕಷ್ಟಿದೆ. ಶಿಗ್ಗಾಂವಿ ಕ್ಷೇತ್ರವನ್ನು ಪ್ರತಿನಿಧಿಸಿದ ಬಿಜೆಪಿ ಶಾಸಕರು ಮುಖ್ಯಮಂತ್ರಿಯಾದರೂ ಕ್ಷೇತ್ರ ಹಿಂದುಳಿದಿರುವುದನ್ನು ಗಮನಿಸಿ ನೂರು ಕೋಟಿ ರು. ವಿಶೇಷ ಅನುದಾನ ಮಂಜೂರು ಮಾಡಿಸಿಕೊಂಡು ಬಂದರು. ಈ ಅನುದಾನದ ಮೊದಲ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದೇವೆ ಎಂದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ತಂಡ ಇದೆ. ಯಾವುದೇ ಸಮಸ್ಯೆ ಇದ್ದರೂ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು. ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಮಾತನಾಡಿ, ಸಮುದಾಯ ಭವನಗಳು ದುಶ್ಚಟಗಳ ತಾಣವಾಗದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಗ್ರಾಪಂ ಅಧ್ಯಕ್ಷೆ ಹಸೀನಾ ಬೇಗಂ, ಉಪಾಧ್ಯಕ್ಷ ಮಹಮದ್ ರಫೀಕ್, ಹನುಮಂತ ಬಂಡಿವಡ್ಡರ, ಗ್ರಾಪಂ ಸದಸ್ಯರು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.