ವಸ್ತುಗಳನ್ನು ಖರೀದಿಗೂ ಮುನ್ನ ಗುಣಮಟ್ಟ ಪರಿಶೀಲಿಸಿ: ನ್ಯಾಯಾಧೀಶ ಮಾಯಣ್ಣ ಬಿ.ಎಲ್.

| Published : Mar 20 2024, 01:24 AM IST

ವಸ್ತುಗಳನ್ನು ಖರೀದಿಗೂ ಮುನ್ನ ಗುಣಮಟ್ಟ ಪರಿಶೀಲಿಸಿ: ನ್ಯಾಯಾಧೀಶ ಮಾಯಣ್ಣ ಬಿ.ಎಲ್.
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕರು ಈ ಜಾಹೀರಾತುಗಳಿಗೆ ಮಾರುಹೋಗದೆ ಎಚ್ಚರದಿಂದ ಇರಬೇಕು

ಕಾರವಾರ: ಗ್ರಾಹಕರು ವಸ್ತುವಿನ ಗುಣಮಟ್ಟ, ಅವಧಿ, ಉತ್ಪನ್ನದ ವಿವರಗಳನ್ನು ಜವಾಬ್ದಾರಿ ನಾಗರಿಕನಾಗಿ ಪರಿಶೀಲಿಸಿ ಖರೀದಿಸಿದಾಗ ಮೋಸ ಹೋಗುವುದನ್ನು ತಡೆಗಟ್ಟಬಹುದು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್. ತಿಳಿಸಿದರು.

ನಗರದ ನಂದನಗದ್ದಾದ ಪ್ರಿಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಗ್ರಾಹಕರಿಗೋಸ್ಕರ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ಗ್ರಾಹಕರ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ಪಾದಕರು ಮತ್ತು ವ್ಯಾಪಾರಿಗಳು ಗ್ರಾಹಕರಿಗೆ ತಮ್ಮ ವಸ್ತುಗಳನ್ನು ಶೀಘ್ರವಾಗಿ ತಲುಪಿಸುವ ಅವಸರದಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿ ಆಕರ್ಷಕ ಜಾಹೀರಾತುಗಳನ್ನು ನೀಡುವ ಮೂಲಕ ಕಡಿಮೆ ಗುಣಮಟ್ಟದ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಗ್ರಾಹಕರು ಈ ಜಾಹೀರಾತುಗಳಿಗೆ ಮಾರುಹೋಗದೆ ಎಚ್ಚರದಿಂದ ಇರಬೇಕು ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ಗ್ರಾಹಕರು ಖರೀದಿಗೂ ಮುನ್ನ ಎಚ್ಚರ ವಹಿಸುವದು ಅಗತ್ಯ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ. ರಾಯ್ಕರ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅತ್ಯಂತ ಎಚ್ಚರದಲ್ಲಿರಬೇಕು. ಮಾರಕಟ್ಟೆಯಲ್ಲಿ ಈಗಲೂ ಕೆಲವು ಅಂಗಡಿಗಳಲ್ಲಿ ಅವಧಿ ಮುಗಿದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಪ್ರತಿಯೊಬ್ಬ ಗ್ರಾಹಕರು ವಸ್ತುಗಳನ್ನು ಖರೀದಿಸುವ ಮುನ್ನ ಎಲ್ಲವನ್ನು ಪರಿಶೀಲಿಸಿ ಖರೀದಿಸುವುದು ಉತ್ತಮ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ, ಆನ್‌ಲೈನ್‌ನಲ್ಲಿ ಆಕರ್ಷಕ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ ಎಂದು ಖರೀದಿ ಮಾಡುವ ಮುಂಚೆ ಅವರು ಅಲ್ಲಿ ನೀಡಿರುವ ನಿಬಂಧನೆಗಳನ್ನು ಪೂರ್ತಿಯಾಗಿ ತಿಳಿದುಕೊಳ್ಳದೇ ಖರೀದಿಸಿದಾಗ ಮೋಸ ಹೋಗುವುದು ಹೆಚ್ಚು. ಹೀಗಾಗಿ ಯಾರೇ ಆದರೂ ವಸ್ತುಗಳನ್ನು ಖರೀದಿಸುವಾಗ ಎಲ್ಲವನ್ನು ಪರಿಶೀಲಿಸುವ ಜಾಗೃತ ನಾಗರಿಕರಾಗಬೇಕು ಎಂದರು.

ನ್ಯಾಯವಾದಿ ವಿ.ಎಂ. ಕುವಾಳೇಕರ ಮತ್ತು ಅಧ್ಯಾಪಕ ವಿಷ್ಣು ಕೆ. ಪಟಗಾರ ಗ್ರಾಹಕರಿಗೊಸ್ಕರ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಸಂಬಂಧ ಕರಪತ್ರ ಬಿಡುಗಡೆಗೊಳಿಸಲಾಯಿತು.

ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.