ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾವು ಮತ್ತು ನಾಯಿ ಕಡಿತಕ್ಕೆ ಸಂಬಂಧಿಸಿದ ಚುಚ್ಚುಮದ್ದು ಅಥವಾ ಔಷಧಗಳ ದಾಸ್ತಾನು ಸದಾ ಇರುವಂತೆ ಆಯಾ ಆರೋಗ್ಯ ಕೇಂದ್ರದ ಮುಖ್ಯಸ್ಥರು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚೆಗೆ ನಾಯಿ ಕಡಿತಕ್ಕೆ ಔಷಧ ಪಡೆಯಲು ಮಿಮ್ಸ್ ಆಸ್ಪತ್ರೆಗೆ ತೆರಳುವ ವೇಳೆ ಸಂಭವಿಸಿದ ಅಪಘಾತದಲ್ಲಿ ಮಗುವೊಂದು ಮೃತಪಟ್ಟಿದೆ. ಬಾಲಕಿಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಈ ಅಪಘಾತ ಸಂಭವಿಸುತ್ತಿರಲಿಲ್ಲ ಎಂದರು.
ತುರ್ತು ಸಂದರ್ಭಗಳಲ್ಲಿ ಬೇಕಿರುವ ಔಷಧಗಳು ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನಿರಬೇಕು. ಇದನ್ನು ಪರಿಶೀಲಿಸಲು ಆಯಾ ತಾಲೂಕು ಆರೋಗ್ಯಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಅವರು ನಿಗದಿತವಾಗಿ ತಮ್ಮ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು ಎಂದರು.ಔಷಧಗಳ ದಾಸ್ತಾನು ಕುರಿತು ಮೊಬೈಲ್‌ನಲ್ಲೇ ವೈದ್ಯರು ಮಾಹಿತಿ ಪಡೆಯಬಹುದು. ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಳ್ಳಿ. ಪ್ರತಿ ಜೀವವೂ ಅಮೂಲ್ಯ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುವಂತೆ ಹೇಳಿದರು.
ಮಳೆಗಾಲ ಪ್ರಾರಂಭವಾಗಿದ್ದು, ಡೆಂಘೀ, ಮಲೇರಿಯಾ, ಚಿಕನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕಟ್ಟಡಗಳ ನಿರ್ಮಾಣ ಸ್ಥಳಗಳಲ್ಲಿ ಹೆಚ್ಚು ನೀರು ನಿಲ್ಲುವ ಸಾಧ್ಯತೆಗಳಿವೆ. ಇಂತಹ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಒಂದು ಕೋವಿಡ್ ಪ್ರಕರಣ ವರದಿಯಾಗಿದ್ದು, ಹೋಮ್ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಮಿಮ್ಸ್‌ನಲ್ಲಿ ಎಸ್‌ಎಆರ್‌ಐ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳಲ್ಲಿ ಎಸ್‌ಎಆರ್‌ಐ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಸಾಂಕ್ರಮಿಕ ರೋಗವಲ್ಲದ ಮಧುಮೇಹ. ರಕ್ತದ ಒತ್ತಡ ಹಾಗೂ ಕ್ಯಾನ್ಸರ್ ರೋಗಗಳನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡಲು ಎನ್‌ಸಿಡಿ ಸ್ಕ್ರೀನಿಂಗ್ ನಡೆಸುತ್ತಿರುವುದು ಸರಿಯಷ್ಟೇ. ಆದರೆ, ಮಧುಮೇಹ, ರಕ್ತದ ಒತ್ತಡ ಹಾಗೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ಎಷ್ಟು, ಅವರು ಚಿಕಿತ್ಸೆಗೆ ಒಳಪಡೆಯುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಹೆಚ್ಚಿನ ರೋಗಿಗಳು ಇರುವ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹೆಚ್ಚು ಆಯೋಜಿಸಬೇಕು ಎಂದರು.ಜಿಲ್ಲೆಯಲ್ಲಿ ಹೃದಾಯಘಾತದಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತಂತೆ ವಯೋಮಿತಿವಾರು ಸಮೀಕ್ಷೆ ನಡೆಸಿ. ಹೃದಯ ವೈಶಾಲ್ಯ ಯೋಜನೆಯಡಿ ಎಷ್ಟು ಜನರ ಸ್ಕ್ರೀನಿಂಗ್ ನಡೆಯುತ್ತಿದೆ. ಹೃದಯ ಸಂಬಂಧಿ ಕಾಯಿಲೆ ಇದ್ದಲ್ಲಿ ಮುಂದಿನ ಚಿಕಿತ್ಸೆಗೆ ರೆಫರ್ ಮಾಡುತ್ತಿರುವ ಬಗ್ಗೆ ವರದಿ ನೀಡಬೇಕು ಎಂದರು.
ಸಭೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಾಗೂ ತಾಯಿ ಮರಣ ವರದಿಯನ್ನು ಪರಿಶೀಲಿಸಲಾಯಿತು.ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ -೨ ಟಿ.ಲಕ್ಷ್ಮೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಕೆ. ಮೋಹನ್, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಂ.ಎನ್.ಆಶಾಲತಾ, ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಟಿ.ಎನ್ ಮರೀಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))