ಸಿಂದೂರಕ್ಕೆ ಎಲ್ಲೆಡೆ ಜೈಕಾರ, ಸಂಭ್ರಮ

| Published : May 08 2025, 12:31 AM IST

ಸಾರಾಂಶ

ಭಾರತೀಯ ಸೇನಾಪಡೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗೆ ನುಗ್ಗಿ ಏರ್ ಸ್ಟ್ರೈಕ್ ಮಾಡಿ ಉಗ್ರಗಾಮಿಗಳ 9 ಅಡಗು ತಾಣಗಳನ್ನು ದ್ವಂಸ ಮಾಡಿದ್ದು, ಭಾರತೀಯರಿಗೆ ಸಂದ ಗೌರವವಾಗಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಾಕಿಸ್ತಾನದ ಗಡಿಯಲ್ಲಿರುವ 9 ಉಗ್ರಗಾಮಿ ನೆಲೆಗಳ ಮೇಲೆ ಭಾರತೀಯ ಸೈನಿಕರು ಮಿಡ್ ನೈಟ್ ಏರ್ ಸ್ಟ್ರೈಕ್ ಮಾಡಿ ಅವುಗಳನ್ನು ನೆಲಸಮ ಮಾಡಿದ ಸುದ್ದಿ ಬಿತ್ತರವಾಗುತ್ತಿದ್ದಂತೆ ಬುಧವಾರ ಬೆಳಗ್ಗೆ ಪಟ್ಟಣದ ಕಾಲೇಜ್ ಕ್ರಾಸ್‌ನಲ್ಲಿ ಸಾರ್ವಜನಿಕರು, ಕರವೇ ಕಾರ್ಯಕರ್ತರು, ಬಿಜೆಪಿ ಪ್ರಮುಖರು ಜಮಾಯಿಸಿ, ಭಾರತ ಮಾತೆಗೆ ಜೈಕಾರ ಹಾಕುತ್ತ, ಭಾರತೀಯ ಸೈನಿಕರಿಗೆ ಜಯವಾಗಲಿ ಎಂದು ಕೂಗುತ್ತ ಪಟಾಕಿ ಸಿಡಿಸಿ, ಸಿಹಿ ಹಂಚಿದರು.

ಸಾಮಾಜಿಕ ಹೋರಾಟಗಾರ ಅಶೋಕ ಹೆಗಡಿ ಮಾತನಾಡಿ, ಮಂಗಳವಾರ ಮಧ್ಯರಾತ್ರಿಯ ನಂತರ ಬುಧವಾರ ರಾತ್ರಿ 1.44 ಸಮಯಕ್ಕೆ ಭಾರತೀಯ ಸೇನಾಪಡೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗೆ ನುಗ್ಗಿ ಏರ್ ಸ್ಟ್ರೈಕ್ ಮಾಡಿ ಉಗ್ರಗಾಮಿಗಳ 9 ಅಡಗು ತಾಣಗಳನ್ನು ದ್ವಂಸ ಮಾಡಿದ್ದು, ಭಾರತೀಯರಿಗೆ ಸಂದ ಗೌರವವಾಗಿದೆ. ಪಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿ ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡು, ಅವರ ಸಿಂಧೂರ ಅಳಕಿಸಿದ ಉಗ್ರರನ್ನು ಮತ್ತು ಅವರನ್ನು ಸಾಕುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಹೆಡೆಮುರಿ ಕಟ್ಟಲು ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರ ಇಡೀ ಭಾರತೀಯರೆಲ್ಲ ಹೆಮ್ಮೆಪಡುವಂತದ್ದಾಗಿದೆ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ತಾನವನ್ನು ಭೂಪಟದಲ್ಲಿ ಇಲ್ಲದಂತೆ ಮಾಡಬೇಕು. ಈ ಸಮಯವನ್ನು ಪ್ರಧಾನಿಗಳು ಸಮರ್ಪಕವಾಗಿ ಬಳಸಿಕೊಂಡು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲಿ ಎಂದರು.

ಬಿಜೆಪಿ ನಗರ ಘಟಕದ ಉಪಾಧ್ಯಕ್ಷ, ಕರವೇ ಅಧ್ಯಕ್ಷ ರವಿ ಅಂಗಡಿ, ಕರವೇ ಉಪಾಧ್ಯಕ್ಷ ಶ್ರೀಕಾಂತ ಹುನಗುಂದ ಮಾತನಾಡಿ, ದೇಶದ ಪ್ರಧಾನಿಗಳಿಗೆ, ಕೇಂದ್ರದ ಗೃಹಸಚಿವರಿಗೆ, ಸೈನ್ಯ ಪಡೆಗಳ ಮುಖ್ಯಸ್ಥರಿಗೆ ನಾವು ಇಂದು ಅಭಿನಂದಿಸಬೇಕು. ಏಕೆಂದರೆ ತುಂಬಾ ರಿಸ್ಕ್ ತೆಗೆದುಕೊಂಡು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದು ಜಗತ್ತೇ ಭಾರತದ ಕಡೆ ತಿರುಗಿ ನೋಡುವಂತಾಗಿದೆ. ಪಾಕಿಸ್ತಾನದ ಒಳಗಡೆ 100 ಕಿಮೀ ಹೋಗಿ ಉಗ್ರರ 9 ನೆಲೆಗಳನ್ನು ಹೊಡೆದುರುಳಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.ಭಾರತವನ್ನು ಕೆಣಕಿದ ಪಾಕಿಸ್ತಾನ ಇನ್ನು ಮುಂದೆ ನೆಮ್ಮದಿಯಿಂದ ಇರುವುದೇ ಕಷ್ಟ. ಇದು ಆರಂಭದ ಪ್ರತೀಕಾರದ ದಾಳಿ ಅಷ್ಟೆ. ಪಾಕಿಸ್ತಾನ ಮತ್ತೇ ಭಾರತದ ಮೇಲೆ ಏನಾದರೂ ಕ್ರಮಕ್ಕೆ ಮುಂದಾದರೆ, ಇಡೀ ದೇಶದ ಜನತೆ ಪಾಕಿಗಳನ್ನು ಬಿಡುವುದಿಲ್ಲ. ಅವರನ್ನು ಸರ್ವನಾಶ ಮಾಡಬೇಕಾಗುತ್ತದೆ. ಭಾರತೀಯರು ಮುಂದಿನ ಯುದ್ಧಕ್ಕೆ ತಯಾರಿಯಾಗಿದ್ದಾರೆ ಎಂಬ ಸಂದೇಶವನ್ನು ಈ ಮೂಲಕ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಮತ್ತು ಸೇನಪಡೆಗೆ ನಾವು ಬೆಂಬಲಕ್ಕಿದ್ದೇವೆ. ಕರೆದರೆ ನಾವೆಲ್ಲ ಯುದ್ದಕ್ಕೆ ಸಿದ್ಧ ಎಂದರು.

ಈ ವೇಳೆ ಪಟಾಕಿ ಸಿಡಿಸಿದರು, ಸಿಹಿ ಹಂಚಿದರು, ಸೈನಿಕರಿಗೆ, ಆಪರೇಶನ್ ಸಿಂಧೂರಕ್ಕೆ ಜೈಕಾರ ಹಾಕಿದರು. ಪ್ರಧಾನಿ, ಗೃಹಸಚಿವರ ಕ್ರಮವನ್ನು ಸ್ವಾಗತಿಸಿದರು. ಸಾರ್ವಜನಿಕರು, ಕರವೇ ಕಾರ್ಯಕರ್ತರು, ಸಂಗಪ್ಪ ಚಟ್ಟೇರ ಹಾಗೂ ಇತರರು ಈ ಸಂದರ್ಭದಲ್ಲಿ ಇದ್ದರು.