ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚೆಕ್ಕಡಿ, ಟ್ರ್ಯಾಕ್ಟರ್‌ ರ್ಯಾಲಿ

| Published : Aug 12 2025, 12:30 AM IST

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚೆಕ್ಕಡಿ, ಟ್ರ್ಯಾಕ್ಟರ್‌ ರ್ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹದಾಯಿ ಯೋಜನೆ ಜಾರಿ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಮಾಡುತ್ತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿವೆ. ಹಲವಾರು ವರ್ಷಗಳಿಂದ ಈ ಯೋಜನೆ ಜಾರಿಗೆ ಹೋರಾಟಗಳು ನಿರಂತರವಾಗಿ ನಡೆದರೂ ಸರ್ಕಾರಗಳು ಮಾತ್ರ ಪೊಳ್ಳು ಭರವಸೆ ನೀಡುತ್ತ ಕಾಲಹರಣ ಮಾಡುತ್ತಿವೆ.

ಹುಬ್ಬಳ್ಳಿ: ಮಹದಾಯಿ ಯೋಜನೆ ಅನುಷ್ಠಾನ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಕ್ರಾಂತಿ ಹಾಗೂ ಶಿವಾನಂದ ಕರಿಗಾರ ಗೆಳೆಯರ ಬಳಗದ ವತಿಯಿಂದ ಬ್ಯಾಹಟ್ಟಿ ಗ್ರಾಮದಿಂದ ಚಕ್ಕಡಿ, ಟ್ರ್ಯಾಕ್ಟರ್‌ಗಳೊಂದಿಗೆ ಹುಬ್ಬಳ್ಳಿಯ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ರ್ಯಾಲಿ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿದ ಪ್ರತಿಭಟನಾಕಾರರು ಕೆಲಸಮಯ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ಯೋಜನೆ ಜಾರಿ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಮಾಡುತ್ತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿವೆ. ಹಲವಾರು ವರ್ಷಗಳಿಂದ ಈ ಯೋಜನೆ ಜಾರಿಗೆ ಹೋರಾಟಗಳು ನಿರಂತರವಾಗಿ ನಡೆದರೂ ಸರ್ಕಾರಗಳು ಮಾತ್ರ ಪೊಳ್ಳು ಭರವಸೆ ನೀಡುತ್ತ ಕಾಲಹರಣ ಮಾಡುತ್ತಿವೆ ಎಂದು ದೂರಿದರು.

ರೈತರ ಟ್ರ್ಯಾಕ್ಟರ್ ಸಾಲ ಹಾಗೂ ರೈತರ ಇತರೆ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ರೈತರ 2023-24 ಹಾಗೂ 2024-25ನೇ ಸಾಲಿನ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಶೀಘ್ರವಾಗಿ ಬಿಡುಗಡೆ ಮಾಡಬೇಕು, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಳ್ಳದ ನೀರಿನಿಂದ ಅಕ್ಕಪಕ್ಕದ ಜಮೀನಿನ ರೈತರ ಬೆಳೆಹಾನಿಯಾಗಿದ್ದು, ಇದಕ್ಕೆ ಶೀಘ್ರ ಪರಿಹಾರ ಒದಗಿಸುವುದು ಸೇರಿದಂತೆ ಮುಂತಾದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಗ್ರಾಮಗಳ ರಸ್ತೆ ನಿರ್ಮಾಣವಾಗಿ ಎರಡು ತಿಂಗಳು ಕಳೆದಿವೆ, ಅದಾಗಲೇ ರಸ್ತೆಗಳು ಹದಗೆಟ್ಟು ಹೋಗಿವೆ. ರಸ್ತೆಗಳು ಸಂಪೂರ್ಣವಾಗಿ ಕಳಪೆಯಾಗಿವೆ ಇವುಗಳನ್ನು ಪುನಃ ನಿರ್ಮಾಣ ಮಾಡಬೇಕು. ಅಲ್ಲದೇ ರೈತರ ಬೆಳೆಗಳು ಮಳೆಯಿಂದಾಗಿ ಹಾನಿಯಾಗಿದ್ದು, ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಹೆಚ್ಚಾಗಿ ರೈತರ ಸಾಲಮನ್ನಾ ಮಾಡಿ ರಾಜ್ಯ ಸರ್ಕಾರ ರೈತಪರವಾದ ಸರ್ಕಾರವೆಂದು ತಿಳಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗುರು ರಾಯನಗೌಡ್ರ, ಅಶೋಕ, ಬಸವರಾಜ ಮತ್ತಿಹಳ್ಳಿ, ಪ್ರಕಾಶ ಸೇರಿದಂತೆ ಮುಂತಾದವರು ಇದ್ದರು.