ಜೂನ್ ತಿಂಗಳಲ್ಲಿ ಸೊರಗಿದ್ದ ಜಲಪಾತಗಳಿಗೀಗ ಜೀವ ಕಳೆ ಬಂದಿದೆ. ಮಳೆ ಬಿರುಸು ಪಡೆದ ಕಾರಣ ಜಲಪಾತಗಳು ಭೋರ್ಗರೆಯುತ್ತಿವೆ. ಮಡಿಕೇರಿ ಸಮೀಪದ ಅಬ್ಬಿ ಜಲಪಾತಕ್ಕೆ ವಿಶೇಷ ಆಕರ್ಷಣೆಯಾದರೆ ಇತ್ತ ನಾಪೋಕ್ಲು ಬಳಿಯ ಚೇಲಾವರ ಜಲಪಾತವು ಅಸಂಖ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ದುಗ್ಗಳ ಸದಾನಂದ ನಾಪೋಕ್ಲು: ಜೂನ್ ತಿಂಗಳಲ್ಲಿ ಸೊರಗಿದ್ದ ಜಲಪಾತಗಳಿಗೀಗ ಜೀವ ಕಳೆ ಬಂದಿದೆ. ಮಳೆ ಬಿರುಸು ಪಡೆದ ಕಾರಣ ಜಲಪಾತಗಳು ಭೋರ್ಗರೆಯುತ್ತಿವೆ. ಮಡಿಕೇರಿ ಸಮೀಪದ ಅಬ್ಬಿ ಜಲಪಾತಕ್ಕೆ ವಿಶೇಷ ಆಕರ್ಷಣೆಯಾದರೆ ಇತ್ತ ನಾಪೋಕ್ಲು ಬಳಿಯ ಚೇಲಾವರ ಜಲಪಾತವು ಅಸಂಖ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಈ ಜಲಪಾತವು ಚೆಯ್ಯಂಡಾಣೆಯಿಂದ 5 ಕಿ.ಮೀ ದೂರದ ಚೇಲಾವರ ಗ್ರಾಮದಲ್ಲಿದೆ. ದಟ್ಟ ಹಸಿರು ಕಾಣದ ನಡುವೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಜಲಪಾತದ ಸೌಂದರ್ಯ ಅವರ್ಣನೀಯ. ಇಲ್ಲಿ ಸುತ್ತಮುತ್ತಲ ಹೋಂಸ್ಟೆ ಗಳಲ್ಲಿ ತಂಗುವ ಪ್ರವಾಸಿಗರಿಗೆ ಇದೊಂದು ವಿಶೇಷ ಆಕರ್ಷಣೆ. ಸ್ಥಳೀಯರು ಕೂಡ ಜಲಪಾತದ ಸೌಂದರ್ಯ ಆಸ್ವಾದಿಸುತ್ತಾರೆ. ಬೃಹತ್ ಬಂಡೆಗಳ ಮೇಲೆ ನೀರು ಧುಮ್ಮಿಕ್ಕುವಾಗ ಅದರ ಚೆಲವು ಆಸ್ವಾದಿಸಲು ಅಹ್ಲಾದಕರ. ಸ್ಥಳೀಯರು ಈ ಜಲಪಾತವನ್ನು ಏಮೆಪಾರೆ ಎಂದು ಕರೆಯುತ್ತಾರೆ. ಎಡಬದಿಯಲ್ಲಿರುವ ಕಾಫಿಯ ತೋಟಗಳ ನಡುವೆ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದು. ಸುಮಾರು 100 ಅಡಿ ಎತ್ತರದಿಂದ ಧುಮುಕುವ ಜಲಧಾರೆ ಶ್ವೇತ ವೈಭವದಿಂದ ಕಂಗೊಳಿಸುತ್ತದೆ. ಅಲ್ಲಿ ಮಂಜಿನಂತೆ ತೇಲಿ ಬರುವ ನೀರ ಹನಿಗಳು ಮೈಮನವನ್ನು ಸ್ಪರ್ಶಿಸಿ ಹಿತಕರ ಅನುಭವವನ್ನುಂಟುಮಾಡುತ್ತದೆ. ಅನತಿ ದೂರದಲ್ಲಿ ಮತ್ತೊಂದು ಜಲಪಾತವಿದೆ. ಇದಕ್ಕೆ ಬಲಿಯಟ್ರ ಜಲಪಾತ ಎಂದು ಹೆಸರು. ಸುಮಾರು 50 ಅಡಿಗಳಷ್ಟು ಎತ್ತರದಿಂದ ಮೂರು ಹಂತಗಳಲ್ಲಿ ಬಲಿಯಟ್ರ ಜಲಪಾತ ಧುಮುಕುತ್ತದೆ. ಹರಿವ ಜಲಧಾರೆಯಿಂದಾಗಿ ಸದಾ ತಂಪು ಇರುವ ತೋಟಗಳಲ್ಲಿ ಜಿಗಣೆಗಳ ಚಿಂತೆಯಿಲ್ಲವೆಂದಾದರೆ ಆರಾಮವಾಗಿ ಜಲಧಾರೆಗಳ ಸೊಬಗು ಸವಿಯಬಹುದು. ಎಚ್ಚರ ಅಗತ್ಯ: ಈ ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ 20 ಕ್ಕೂ ಅಧಿಕ ಯುವಜನರು ಮೃತಪಟ್ಟಿದ್ದಾರೆ. ಹೀಗಾಗಿ ಜಲಪಾತದ ಸೌಂದರ್ಯವನ್ನು ದೂರದಿಂದಲೇ ವೀಕ್ಷಿಸಿ. ಪರಿಸರ ಮಾಲಿನ್ಯ ಮಾಡಬೇಡಿ ಎಂಬುದು ಸಂಘ ಸಂಸ್ಥೆಗಳು ಹಾಗೂ ಸ್ಥಳೀಯರ ಕಳಕಳಿಯ ಮನವಿಯಾಗಿದೆ.