ನಾಳೆ ರಾತ್ರಿ 8 ಗಂಟೆಗೆ ಚೆಲುವನಾರಾಯಣನಿಗೆ ವೈರಮುಡಿ ಕಿರೀಟಧಾರಣೆ

| Published : Apr 06 2025, 01:49 AM IST

ಸಾರಾಂಶ

ಬ್ರಹ್ಮೋತ್ಸವದ 4ನೇ ತಿರುನಾಳ್ ಅಂಗವಾಗಿ ಏ.7ರಂದು ರಾತ್ರಿ 8 ಶ್ರೀದೇವಿಭೂದೇವಿ ಸಮೇತ ಗರುಢಾರೂಢನಾದ ಚೆಲುವನಾರಾಯಣನಿಗೆ ಅಪೂರ್ವ ನಾಗಮಣಿ ಇರುವ ವೈರಮುಡಿ ಕಿರೀಟಧಾರಣೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಬ್ರಹ್ಮೋತ್ಸವದ 4ನೇ ತಿರುನಾಳ್ ಅಂಗವಾಗಿ ಏ.7ರಂದು ರಾತ್ರಿ 8 ಶ್ರೀದೇವಿಭೂದೇವಿ ಸಮೇತ ಗರುಢಾರೂಢನಾದ ಚೆಲುವನಾರಾಯಣನಿಗೆ ಅಪೂರ್ವ ನಾಗಮಣಿ ಇರುವ ವೈರಮುಡಿ ಕಿರೀಟಧಾರಣೆ ನಡೆಯಲಿದೆ.

ಮಹಾ ಮಂಗಳಾರತಿ ನೆರವೇರಿಸಿ ದೇವಾಲಯದಿಂದ ರಾತ್ರಿ 8.30ಕ್ಕೆ ಆರಂಭವಾಗುವ ವೈರಮುಡಿ ಉತ್ಸವ ಬೆಳಗಿನ 4ರ ಸುಮಾರಿಗೆ ವಾಹನೋತ್ಸವ ಮಂಟಪದಲ್ಲಿ ಮುಕ್ತಾಯವಾಗಲಿದೆ. ನಂತರ ವಜ್ರಖಚಿತ ರಾಜಮುಡಿ ಧರಿಸಲಾಗುತ್ತದೆ.

ಇದಕ್ಕೂ ಮುನ್ನ ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ, ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಬೆಳಗ್ಗೆ 7 ಗಂಟೆಗೆ ಮಂಡ್ಯ ಬೆಂಗಳೂರು- ಮೈಸೂರು ಹೆದ್ದಾರಿ ಶ್ರೀರಂಗಪಟ್ಟಣ ಬನ್ನಿಮಂಟಪ ಕಿರಂಗೂರು ಮೂಲಕ ಪಾಂಡವಪುರ, ಹರಳಹಳ್ಳಿ, ಟಿ.ಎಸ್.ಛತ್ರ, ಅಮೃತಿ, ಜಕ್ಕನಹಳ್ಳಿ ಮಾರ್ಗವಾಗಿ ಪೊಲೀಸರ್ ಬಂದೋಬಸ್ತ್ ನಲ್ಲಿ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುತ್ತದೆ.

ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಪೂಜೆ ಮಾಡಿ ನಂತರ ಚಿನ್ನದಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತರಲಾಗುತ್ತದೆ. ವೈರಮುಡಿ ಪೆಟ್ಟಿಗೆಗೆ ಮಂಡ್ಯದ ಲಕ್ಷ್ಮೀಜನಾರ್ಧನಸ್ವಾಮಿ ಸನ್ನಿಧಿಯಲ್ಲಿ ಪ್ರಥಮ ಪೂಜೆ ನಡೆದರೆ ದೇವಾಲಯದ ಮುಂಭಾಗ ಯತಿರಾಜದಾಸರ್ ಗುರುಪೀಠದಿಂದ ಕೊನೆಯಪೂಜೆ ನಡೆಯಲಿದೆ. ನಂತರ ಸ್ಥಾನೀಕರು,ಅರ್ಚಕ, ಪರಿಚಾರಕರಿಗೆ ಪಾರ್ಕಾವಣೆಮಾಡಿ ಹಸ್ತಾಂತರ ಮಾಡಲಾಗುತ್ತಿದೆ.

ಗಮನ ಸೆಳೆಯುತ್ತಿರುವ ದೀಪಾಲಂಕಾರ:

ವೈರಮುಡಿ ಉತ್ಸವದ ವಿಧಿವಿಧಾನಗಳು 9 ಬೃಹತ್ ಪರದೆಗಳ ಮೂಲಕ ಉತ್ಸವ ಬೀದಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಜಕ್ಕನಹಳ್ಳಿಯಿಂದ 7 ಕಿ ಮೀ ದೀಪಾಲಂಕಾರ ತೋರಣ ಅಳವಡಿಸಲಾಗಿದೆ. ಸುಮಾರು 2 ಕಿ.ಮಿವರೆಗೂ ವೈವಿಧ್ಯಮಯ ದೀಪಾಲಂಕಾರದಿಂದ ರಾಜಬೀದಿ, ಉತ್ಸವಬೀದಿಗಳು ನಯನಮನೋಹರವಾಗಿ ಕಂಗೊಳಿಸುತ್ತಿದೆ.

ಇದೇ ಪ್ರಥಮ ಬಾರಿಗೆ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿರುವ ಎಲ್.ಇ.ಡಿ ಪರದೆಗಳು ಹಾಗೂ ಜಕ್ಕನಹಳ್ಳಿ, ಬೆಳ್ಳಾಳೆ, ತೊಣ್ಣುರು, ಕೆನ್ನಾಳು ಗ್ರಾಮಗಳಲ್ಲಿ ಎಲ್.ಇಡಿ ಪರದೆಗಳ ಮೂಲಕ ನೇರಪ್ರಸಾರ ಮಾಡಲಾಗುತ್ತಿದೆ. ದೇವಾಲಯದ ಆವರಣಗಳಿಗೆ ಆಕರ್ಷಕ ಪುಷ್ಪಾಲಂಕಾರ , ವೈರಮುಡಿಯನ್ನು ಮಹಾರಾಜರು ವೀಕ್ಷಿಸುತ್ತಿದ್ದ ಸ್ಥಳದಲ್ಲಿ ಪುಷ್ಪಮಂಟಪ ನಿರ್ಮಾಣ, ಚೆಲುವನಾರಾಯಣನ ಉತ್ಸವಗಳಿಗೆ ವಿಶೇಷ ತೋಮಾಲೆ ಸೇವೆ, ವಿಶೇಷ ಮಂಗಳವಾದ್ಯ ತಂಡ ನಿಯೋಜನೆ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉತ್ಸವದ ಯಶಸ್ಸಿಗಾಗಿ ವಿಶೇಷ ಕಾಳಜಿ ವಹಿಸಿದ್ದು, ಡೀಸಿ ಡಾ.ಕುಮಾರ್, ಎಡೀಸಿ ಶಿವಾನಂದಮೂರ್ತಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆಯಂತೆ ವಿವಿಧ ಇಲಾಖಾಧಿಕಾರಿಗಳು ವೈರಮುಡಿ ಬ್ರಹ್ಮೋತ್ಸವಕ್ಕೆ ಅಗತ್ಯ ಎಲ್ಲಾ ಸಿದ್ಧತೆ ಮಾಡುತ್ತಿದ್ದಾರೆ.

ಇಂದು ನಾಗವಲ್ಲೀ ಮಹೋತ್ಸವ:

ವೈರಮುಡಿ ಜಾತ್ರಾಹೋತ್ಸವದ 3ನೇ ತಿರುನಾಳ್ ಅಂಗವಾಗಿ ಏ.6 ರಂದು ಮಧ್ಯಾಹ್ನ 2 ಗಂಟೆಯಿಂದ ವಿಶೇಷ ಪುಷ್ಪಾಲಂಕೃತ ಚಿನ್ನದಪಲ್ಲಕ್ಕಿ ಉತ್ಸವ ಆರಂಭವಾಗಲಿದೆ. ಕಲ್ಯಾಣಿಯಲ್ಲಿ ನಾಗವಲ್ಲೀ ಮಹೋತ್ಸವ ನಡೆದ ನಂತರ ರಾತ್ರಿ ಚಿನ್ನದ ಪಲ್ಲಕ್ಕಿಯಲ್ಲಿ ಕಲ್ಯಾಣನಾಯಕಿಯೊಂದಿಗೆ ವಿರಾಜಮಾನನಾದ ಚೆಲುವನಾರಾಯಣಸ್ವಾಮಿ ಉತ್ಸವದ ಭವ್ಯಮೆರವಣಿಗೆ ತಿರುವೀದಿಗಳಲ್ಲಿ ನಡೆಯಲಿದೆ. ಇದಾದ ನಂತರ ಚಂದ್ರಮಂಡಲವಾಹನೋತ್ಸವ ಜರುಗಲಿದೆ.

ಶನಿವಾರ 2ನೇ ತಿರುನಾಳ್ ಅಂಗವಾಗಿ ಚೆಲುವನಾರಾಯಣನಿಗೆ ಮುತ್ತುಮುಡಿ ಕಿರೀಟದ ಅಲಂಕಾರದಲ್ಲಿ ರಾತ್ರಿ ದೊಡ್ಡ ಶೇಷವಾಹನೋತ್ಸವ ಅದ್ಧೂರಿಯಾಗಿ ನೆರವೇರಿತು.

ಉಳಿದಂತೆ ಏ.9 ರಂದು ಸಂಜೆ 6.30ಕ್ಕೆ ಗಜೇಂದ್ರಮೋಕ್ಷ , ಏ.10ರ ಬೆಳಗ್ಗೆ 9 ರಿಂದ ಮಹಾರಥೋತ್ಸವ, ಏ.11ರ ರಾತ್ರಿ 7 ಗಂಟೆಗೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ಏ.12 ರಂದು ಬೆಳಗ್ಗೆ 11 ಗಂಟೆಗೆ ತೀರ್ಥಸ್ನಾನ, ಸಂಜೆ ಪಟ್ಟಾಭಿಷೇಕ , ಏ.13 ರಂದು ಬೆಳಗ್ಗೆ 11 ಗಂಟೆಗೆ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ಜರುಗಲಿದೆ.