ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ವಿಶ್ವವಿಖ್ಯಾತ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಕಿರೀಟಧಾರಣ ಮಹೋತ್ಸವ ಏಪ್ರಿಲ್ 7ರಂದು ಅದ್ಧೂರಿಯಾಗಿ ನಡೆಯಲಿದೆ.ವರ್ಷದಲ್ಲಿ ಒಂದು ರಾತ್ರಿ ಮಾತ್ರ ಶ್ರೀಚೆಲುವನಾರಾಯಣಸ್ವಾಮಿಯ ಮುಡಿಗೇರುವ ವೈರಮುಡಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ವೈರಮುಡಿ ಉತ್ಸವ ಮಹಾ ಮಂಗಳಾರತಿ ನಂತರ ರಾತ್ರಿ 8 ಗಂಟೆಗೆ ಆರಂಭವಾಗಿ ಬೆಳಗಿನ ಜಾವ 2 ಗಂಟೆವರೆಗೆ ನಡೆಯಲಿದೆ. ಬ್ರಹ್ಮೋತ್ಸವದಲ್ಲಿ ನಾಲ್ಕನೇ ತಿರುನಾಳ್ ದಿನವಾದ ಸೋಮವಾರ ರಾತ್ರಿ ಶ್ರೀದೇವಿ- ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣನಿಗೆ ವೈರಮುಡಿ ಕಿರೀಟ ಧರಿಸಿ ಉತ್ಸವ ನೆರವೇರಿಸಲಾಗುತ್ತದೆ.ವೈರಮುಡಿ ಉತ್ಸವ ಮುಗಿದ ತಕ್ಷಣ ಸ್ವಾಮಿಗೆ ವಜ್ರಖಚಿತ ರಾಜಮುಡಿ ಉತ್ಸವ ನೆರವೇರಲಿದೆ. ಭಾರತದ ದೇಗುಲಗಳ ಪೈಕಿ ಚೆಲುವನಾರಾಯಣನಿಗೆ ಮಾತ್ರ ಒಂದೇ ರಾತ್ರಿ ಎರಡು ವಜ್ರಖಚಿತ ಕಿರೀಟಗಳ ಉತ್ಸವ ನಡೆಯುವುದೇ ಅತ್ಯಂತ ವಿಶೇಷ. ಜಾತ್ರಾ ಮಹೋತ್ಸವದಲ್ಲಿ ಪುರಾತನ ಮುತ್ತುಮುಡಿ ಚೆಲುವನನ್ನು ಅಲಂಕರಿಸಲಾಗುತ್ತದೆ.
ವಿವಿಧ ಉತ್ಸವಗಳು ಆರಂಭ:ಮಾರ್ಚ್ 31ರಿಂದ ಮೊದಲ ತೆಪ್ಪೋತ್ಸವದೊಂದಿಗೆ ವೈರಮುಡಿ ಜಾತ್ರಾ ಮಹೋತ್ಸವ ಆರಂಭವಾಗಿ ಏ.14 ಶೇರ್ತಿ ಸೇವೆಯವರೆಗೆ 14 ದಿನಗಳ ಕಾಲ ನಡೆಯಲಿದೆ. ಬ್ರಹ್ಮೋತ್ಸವದಲ್ಲಿ ಏ.10 ರಂದು ಬೆಳಗ್ಗೆ ಮಹಾರಥೋತ್ಸವ, ಏ.11 ರಂದು ರಾತ್ರಿ 7 ಗಂಟೆಗೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ಏ.12 ರಂದು ಬೆಳಗ್ಗೆ ತೀರ್ಥಸ್ನಾನ, ಸಂಜೆ ಪಟ್ಟಾಭಿಷೇಕ ಮಹೋತ್ಸವಗಳು ಜರುಗಲಿವೆ.
ಇದಕ್ಕೂ ಮುನ್ನ ಏ.3ರಂದು ಸಂಜೆ ಕಲ್ಯಾಣಿಯ ಧಾರಾ ಮಂಟಪದಲ್ಲಿ ಕಲ್ಯಾಣೋತ್ಸವ, ಏ.4 ರಂದು ಬೆಳಗ್ಗೆ ಗಂಟೆಗೆ ದ್ವಜಾರೋಹಣ, ರಾಮಾನುಜಾಚಾರ್ಯರಿಗೆ ಅಭಿಷೇಕ, ಏ.6 ರಂದು ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲಿ ಮಹೋತ್ಸವ, ಏ.8 ರಂದು ಸಂಜೆ 5 ಗಂಟೆಗೆ ನಡೆಯುವ ಪ್ರಹ್ಮಾದ ಪರಿಪಾಲನೋತ್ಸವ, ಏ.9ರಂದು ಸಂಜೆ 6.30ಕ್ಕೆ ನಡೆಯುವ ಗಜೇಂದ್ರ ಮೋಕ್ಷ ಉತ್ಸವ, ಏ.13 ರಂದು ಮಹಾಭಿಷೇಕ ಜಾತ್ರಾಮಹೋತ್ಸವದ ಉತ್ಸವಗಳಾಗಿವೆ.ಸ್ವಾಮಿಗೆ ವಾಹನೋತ್ಸವ ವೈಭವ:
ವಿಶೇಷ ಉತ್ಸವಗಳ ಜೊತೆಗೆ ವೈಭವದ ವಾಹನೋತ್ಸವಗಳಲ್ಲಿ ಚೆಲುವನಾರಾಯಣ ದರ್ಶನ ನೀಡುತ್ತಾನೆ. ಪ್ರತಿದಿನ ರಾತ್ರಿ 7ಗಂಟೆನಂತರ ವಾಹನೋತ್ಸವಗಳು ನಡೆಯಲಿವೆ. ಏ.4 ರಂದು ಹಂಸವಾಹನ, ಏ.5 ರಂದು ಶೇಷವಾಹನ, ಏ.6 ರಂದು ಚಂದ್ರಮಂಡಲವಾಹನ, ಏ.8ರಂದು ಗರುಡವಾಹನ, ಏ.9ರಂದು ಗಜ ಮತ್ತು ಅಶ್ವವಾಹನ, ಏ.10 ರಂದು ರಾತ್ರಿ ಬಂಗಾರದ ಪಲ್ಲಕ್ಕಿ, ಏ.11 ರಂದು ಅಶ್ವವಾಹನೋತ್ಸವ, ಏ.12 ರಂದು ಪುಷ್ಪ ಮಂಟಪ ವಾಹನ, ಏ.13ರಂದು ಹನುಮಂತ ವಾಹನೋತ್ಸವಗಳು ಪಡಿಯೇತ್ತಗಳು ನಡೆಯಲಿವೆ.ಭಕ್ತರಿಗೆ ವಿಶೇಷ ವ್ಯವಸ್ಥೆ:
ವೈರಮುಡಿ ಉತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಮೇಲುಕೋಟೆಗೆ ಆಕರ್ಷಕ ದೀಪಾಲಂಕಾರ ಮಾಡಲಾಗುತ್ತಿದೆ. ಸ್ವಾಮಿ ಉತ್ಸವಕ್ಕೆ ವಿಶೇಷ ತೋಮಾಲೆಗಳ ಅಲಂಕಾರ, ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ಚನ್ನರಾಯಪಟ್ಟಣ, ನಾಗಮಂಗಲ ಮುಂತಾದ ಸ್ಥಳಗಳಿಂದ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದೆ.ಅನ್ನದಾನ ಭವನದಲ್ಲಿ ಪ್ರತಿದಿನ ಪ್ರಸಾದ ವಿತರಣೆ, ಸುಸಜ್ಜಿತ ವೈದ್ಯಕೀಯ ಸೇವೆ, ನಿರಂತರ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ವೈರಮುಡಿ, ರಥೋತ್ಸವ ನಾಗವಲ್ಲಿ ಉತ್ಸವಗಳಂದು ದೇವಾಲಯದ ಆವರಣಗಳಿಗೆ ಪುಷ್ಪಾಲಂಕಾರ, ಪ್ರತಿ ಉತ್ಸವ ಹಾಗೂ ವಾಹನೋತ್ಸವಗಳಿಗೆ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜನೆ ಹಾಗೂ ಎಸ್.ಎಸ್. ಐ. ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಾದೋಪಾಸನ ಸೇವೆಯಡಿ ಮಂಗಳವಾದ್ಯದಂತಹ ಕಾರ್ಯಕ್ರಮಗಳು ಜರುಗಲಿವೆ.
ವೈರಮುಡಿ, ರಾಜಮುಡಿ ಕಿರೀಟಗಳಿಗೆ ಪೂಜೆ:ಏ.7ರಂದು ಬೆಳಗ್ಗೆ 7.30ಕ್ಕೆ ಮಂಡ್ಯ ನಗರದ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ವೈರಮುಡಿ, ರಾಜಮುಡಿ ಕಿರೀಟಗಳಿಗೆ ಪ್ರಥಮ ಪೂಜೆ ನಂತರ ದಾರಿಯುದ್ದಕ್ಕೂ ವಿವಿಧ ಹಳ್ಳಿಗಳಲ್ಲಿ ಪೂಜೆ ನಡೆಯಲಿದೆ. ನಂತರ ಸಂಜೆ 5.30ರವರೆಗೆ ಕಿರೀಟಗಳು ಮೇಲುಕೋಟೆ ತಲುಪಲಿವೆ.
ಅಲ್ಲಿಂದ ಚಿನ್ನದ ಪಲ್ಲಕ್ಕಿಯಲ್ಲಿ ತಿರುವಾಭರಣ ಪೆಟ್ಟಿಗೆಗಳ ಮೆರವಣಿಗೆ, ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳಿಂದ ಕಿರೀಟಗಳಿಗೆ ಪೂಜೆ, ಪೇಟೆ ಆಂಜನೇಯ ಸನ್ನಿಧಿ ಬಳಿ ಒಕ್ಕಲಿಗ ಜನಾಂಗದವರ ಪೂಜೆ ನಡೆದು ಮೇಲುಕೋಟೆ ಉತ್ಸವ ಬೀದಿ ಪ್ರದಕ್ಷಿಣೆ ನಂತರ ಯತಿರಾಜ ದಾಸರ್ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಗುರುಪೀಠದ ಕೊನೆ ಪೂಜೆ ನಂತರ ದೇಗುಲ ಪ್ರವೇಶಿಸುವ ಕಿರೀಟಗಳ ಪೈಕಿ ರಾಜಮುಡಿ ಕಿರೀಟ ಮತ್ತು ಆಭರಣಗಳ ಪರಿಶೀಲನೆ ನಂತರ ಗರುಡದೇವನ ಉತ್ಸವ ಆಗಿ ರಾತ್ರಿ 8ಕ್ಕೆ ಮಹಾಮಂಗಳಾರತಿಯೊಂದಿಗೆ ವೈರಮುಡಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.)
;Resize=(128,128))
;Resize=(128,128))
;Resize=(128,128))
;Resize=(128,128))