ಸಾರಾಂಶ
ಕೆಲವು ವರ್ಷಗಳಿಂದ ಈ ಭಾಗದ ರೈತರ ವಿರೋಧದ ನಡುವೆಯೂ ಕಂಪನಿ ಸೌತೆಕಾಯಿ ಸಂಸ್ಕರಣ ಘಟಕ ಆರಂಭಿಸಿದೆ.
ಕೊಟ್ಟೂರು: ತಾಲೂಕಿನ ಚಿರಿಬಿ ಗ್ರಾಮ ಸಮೀಪ ಬ್ಲೊಸ್ಸಂ ಶೋರ್ವಸ್ ಆಗ್ರೋ ಸೌತೆ ಸೀಡ್ಸ್ ಕಂಪನಿ ದಿನನಿತ್ಯ ವಿಷಯುಕ್ತ ತ್ಯಾಜ್ಯದ ನೀರನ್ನು ಹೊರಬಿಡುತ್ತಿರುವುದರಿಂದ ಫಲವತ್ತಾದ ಭೂಮಿಗಳು ಕಸುವನ್ನು ಕಳೆದುಕೊಳ್ಳುತ್ತಿವೆ ಎಂದು ಗ್ರಾಮದ ರೈತ ಎಂ.ಎಂ.ಜೆ. ಸ್ವತಂತ್ರ ಆರೋಪಿಸಿದ್ದಾರೆ.ಕೆಲವು ವರ್ಷಗಳಿಂದ ಈ ಭಾಗದ ರೈತರ ವಿರೋಧದ ನಡುವೆಯೂ ಕಂಪನಿ ಸೌತೆಕಾಯಿ ಸಂಸ್ಕರಣ ಘಟಕ ಆರಂಭಿಸಿದೆ. ಸಂಸ್ಕರಣೆವಾದ ತ್ಯಾಜ್ಯನೀರು ಹೊರಬಿಡುತ್ತಿರುವುದರ ಪರಿಣಾಮ ಹೊಲಗಳೆಲ್ಲ ವಿಷಯುಕ್ತವಾಗುತ್ತಿವೆ. ಈ ಭೂಮಿಗಳಲ್ಲಿ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ದುರ್ವಾಸನೆಯಿಂದ ಕೃಷಿ ಚಟುವಟಿಕೆಗೆ ಬರುವ ರೈತರು ತತ್ತರಿಸಿದ್ದಾರೆ. ಈ ಬಗ್ಗೆ ಸ್ಥಳೀಯ ರೈತರು ಕ್ರಮಕ್ಕೆ ತಹಶೀಲ್ದಾರ, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗೆ ದೂರು ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಯಾರೊಬ್ಬರೂ ನಮ್ಮ ನೋವಿಗೆ ಸ್ಪಂದಿಸಿಲ್ಲ ಎನ್ನುತ್ತಾರೆ ಗ್ರಾಮದ ರೈತರು.
ಈ ವಿಷಯುಕ್ತ ನೀರಿನಿಂದ ಚಿರಿಬಿ ಸುತ್ತಮುತ್ತಲ ಪ್ರದೇಶಗಳಲ್ಲಿನ ಕೊಳವೆಬಾವಿಗಳು ಕೂಡ ವಿಷಕಾರಿಯಾಗುತ್ತಿವೆ. ಕಂಪನಿ ಆ್ಯಸಿಡ್‌ಯುಕ್ತ ನೀರನ್ನು ಹೊರ ಹಾಕುತ್ತಿದೆ. ಭೂಮಿಗಳು, ಬೋರ್‌ವೆಲ್ ಬಹುತೇಕ ಕಲುಷಿತಗೊಂಡಿವೆ. ಜುಲೈ ತಿಂಗಳಲ್ಲಿ ಪಟ್ಟಣದಲ್ಲಿ ನಡೆಸಿದ ಜನತಾ ದರ್ಶನದಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿ, ಅನ್ಯಾಯ ಸರಿಪಡಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ ಅವರ ಗಮನ ಸೆಳೆಯಲಾಗಿದೆ.ಪ್ರಯೋಗಾಲಯಕ್ಕೆ ನೀರು ಸಂಗ್ರಹ:
ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಪರಿಣಾಮ ಗುರುವಾರ ಜಿಲ್ಲಾ ಪರಿಸರ ನಿಯಂತ್ರಣ ಅಧಿಕಾರಿ ಮೀನಾಕ್ಷಿ, ತಹಶೀಲ್ದಾರ ಅಮರೇಶ್ ಜಿ.ಕೆ. ಮತ್ತಿತರರ ಅಧಿಕಾರಿಗಳ ತಂಡ ಬ್ಲೊಸ್ಸಂ ಶೋರ್ವಸ್ ಕಂಪನಿಯ ಕಾರ್ಯಾಲಯಕ್ಕೆ ಭೇಟಿ ನೀಡಿದೆ. ಅಲ್ಲಿದ್ದ ತ್ಯಾಜ್ಯ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ, ಅದರಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳುದಾಗಿ ತಿಳಿಸಿದ್ದಾರೆ.