ಕಾರ್ಖಾನೆ ಕಾಂಪೌಂಡ್ ಗೆ ರಂದ್ರ ಮಾಡಿಕೊಂಡು ರಾತ್ರಿ ಹತ್ತು ಗಂಟೆಯ ನಂತರ ಪೈಪ್‌ಗಳನ್ನು ಅಳವಡಿಸಿಕೊಂಡು ಕಾರ್ಖಾನೆ ಹಿಂಭಾಗದ ಬಯಲು ಪ್ರದೇಶಕ್ಕೆ ನಿರಂತರವಾಗಿ ಹರಿಯಬಿಡಲಾಗುತ್ತಿದೆ.

ರ್ಯಾಕ್ಸ್ ಫಾರ್ಮ ಕೆಮ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಔಷಧಿಯಿಂದ ಅನಾರೋಗ್ಯ । ಜನ, ಪ್ರಾಣಿ ಪಕ್ಷಿಗಳಿಗೆ ಉಸಿರುಗಟ್ಟುವ ವಾತಾವರಣ

ಅರುಣ್ ಕುಮಾರ್ ಎಸ್.ವಿ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ರ್ಯಾಕ್ಸ್ ಫಾರ್ಮ ಕೆಮ್ ಪ್ರೈವೇಟ್ ಲಿಮಿಟೆಡ್ (RACS)ಎಂಬ ಔಷಧಿ ಕಾರ್ಖಾನೆ ಔಷಧಿ ತಯಾರಿಸಿದ ಬಳಿಕ ಬರುವ ರಾಸಾಯನಿಕ ತ್ಯಾಜ್ಯವನ್ನು ಬಯಲು ಜಾಗದಲ್ಲಿ ಬಿಡುತ್ತಿರುವುದರಿಂದ ಕುಡುಮಲಕುಂಟೆ ಪ್ರದೇಶದಲ್ಲಿ ರಾತ್ರಿ ವೇಳೆ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ಕಾರ್ಖಾನೆಯಯವರು ರಾಸಾಯನಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಕಾರ್ಖಾನೆ ಕಾಂಪೌಂಡ್ ಗೆ ರಂದ್ರ ಮಾಡಿಕೊಂಡು ರಾತ್ರಿ ಹತ್ತು ಗಂಟೆಯ ನಂತರ ಪೈಪ್‌ಗಳನ್ನು ಅಳವಡಿಸಿಕೊಂಡು ಕಾರ್ಖಾನೆ ಹಿಂಭಾಗದ ಬಯಲು ಪ್ರದೇಶಕ್ಕೆ ನಿರಂತರವಾಗಿ ಹರಿಯಬಿಡಲಾಗುತ್ತಿದೆ, ಇದರಿಂದ ಈ ಭಾಗದ ವಾತಾವರಣ ವಿಷಪೂರಿತವಾಗಿ ಮಾರ್ಪಟ್ಟಿದೆ.ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಮಲಗಿದ್ದಾಗ ರಾಸಾಯನಿಕ ಹೊರಬಿಡುವುದರಿಂದ ಕೆಟ್ಟ ಮತ್ತು ಘಾಟು ವಾಸನೆ ಬರುತ್ತಿದೆ, ಇದರಿಂದ ಉಸಿರು ಕಟ್ಟುವ ಹಾಗೇ ವಾಸನೆ ಬರುತ್ತಿದೆ, ಈ ವಿಷ ಗಾಳಿಯ ಪರಿಣಾಮ ಕುಡುಮಲಕುಂಟೆ ಗ್ರಾಮದ ಮಕ್ಕಳು, ವೃದ್ಧರು ಸೇರಿದಂತೆ ಇಲ್ಲಿನ ಜನರ ಪ್ರಾಣಕ್ಕೆ ಕುತ್ತು ಬರುತ್ತಿದೆ. ಈ ಬಗ್ಗೆ ಕಾರ್ಖಾನೆ ಮುಂದೆ ಹಲವು ಬಾರಿ ಪ್ರತಿಭಟನೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಕಾರ್ಖಾನೆ ಹಿಂಭಾಗದ ಪ್ರದೇಶದಲ್ಲಿ ನಿರಂತರವಾಗಿ ರಾಸಾಯನಿಕ ಬಿಡುತ್ತಿರುವ ಪರಿಣಾಮ ಎಕರೆಗಟ್ಟಲೆ ಬಯಲು ಪ್ರದೇಶದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಮರುಭೂಮಿಯಂತಾಗಿದೆ. ಹುಲ್ಲು ಕಡ್ಡಿ ಸಹ ಬೆಳೆಯುವ ಲಕ್ಷಣಗಳಿಲ್ಲ. ರಾಸಾಯನಿಕ ವ್ಯಾಪಿಸಿದ ಜಾಗದ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳು ಒಣಗಿವೆ, ಈ ವಿಷ ರಾಸಾಯನಿಕದ ಅಗಾಧ ಪರಿಣಾಮಕ್ಕೆ ಕಲ್ಲುಗಳು ಸಹ ಕರಗುತ್ತಿವೆ. ರಾಸಾಯನಿಕ ನಿರಂತವಾಗಿ ಬಿಡುತ್ತಿರುವುದರಿಂದ ಕಾರ್ಖಾನೆ ಹೊರ ಭಾಗದ ಖಾಲಿ ಜಾಗದಲ್ಲಿ ನಿರಂತರವಾಗಿ ರಾಸಾಯನಿಕ ಜಿನುಗಿ ಹಳ್ಳಕ್ಕೆ ಸೇರುತ್ತಿದೆ, ಮಳೆ ಬಂದಾಗ ಪಕ್ಕದಲ್ಲಿರುವ ಕೆರೆಯ ಒಡಲಿಗೆ ಸೇರಿ ಪ್ರಾಣಿ ಪಕ್ಷಿಗಳ ಸಾವಿಗೆ ಕಾರಣವಾಗುವುದಲ್ಲದೆ, ಇದು ಅಂತರ್ಜಲ ಸೇರುತ್ತಿರುವುದರಿಂದ, ಸುತ್ತಮುತ್ತಲಿನ ಗ್ರಾಮಸ್ಥರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದನ್ನು ಮರೆಮಾಚಲು ಕಾರ್ಖಾನೆಯವರು ಪಕ್ಕದಲ್ಲಿರುವ ಮಣ್ಣಿನ ಗುಡ್ಡಗಳನ್ನು ಅಗೆದು ಮಣ್ಣಿನಿಂದ ರಾಸಾಯನಿಕವನ್ನು ಮುಚ್ಚುವ ಕೆಲಸ ನಿರಂತವಾಗಿ ಮಾಡುತ್ತಿದ್ದಾರೆ, ಆದರೆ ಇದನ್ನು ನಿಯಂತ್ರಿಸಬೇಕಾದ ಪರಿಸರ ನಿಯಂತ್ರಣ ಮಂಡಳಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸಣ್ಣ ನೀರಾವರಿ, ಸೇರಿದಂತೆ ಸಂಬಂಧಪಟ್ಟ ಯಾವುದೇ ಇಲಾಖೆ ಈವರೆಗೆ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.ಕೋಟ್‌***

ಗ್ರಾಮಸ್ಥರು ಮಲಗಿದ ಮೇಲೆ ಯಾರ್ಕ್ಸ್ ಕಾರ್ಖಾನೆಯವರು ರಾಸಾಯನಿಕವನ್ನು ಬಯಲು ಪ್ರದೇಶದಲ್ಲಿ ಬಿಡುತ್ತಾರೆ, ಗ್ರಾಮದ ಕಡೆ ಗಾಳಿ ಬೀಸುವುದರಿಂದ ರಾಸಾಯನಿಕದ ಗಬ್ಬು ವಾಸನೆ ಬರಲು ಪ್ರಾರಂಭಿಸುತ್ತದೆ, ಈ ವಾಸನೆಗೆ ಉಸಿರು ಕಟ್ಟುವಂತೆ ಭಾಸವಾಗುತ್ತದೆ, ಇದನ್ನು ವಿರೋಧಿಸಿ ಎರಡ್ಮೂರು ಬಾರಿ ಗ್ರಾಮಸ್ಥರೆಲ್ಲ ಕಾರ್ಖಾನೆ ಮುಂದೆ ಪ್ರತಿಭಟನೆ ಸಹ ಮಾಡಿದ್ದೆವು, ಕಾರ್ಖಾನೆಯವರು ಸಬೂಬುಗಳನ್ನು ಹೇಳಿ ಕಳಿಸಿದ್ದರು, ಆದರೆ ರಾಸಾಯನಿಕ ಬಿಡುವುದು ಇಂದಿಗೂ ನಿಂತಿಲ್ಲ.

ಕೃಷ್ಣಪ್ಪ, ಸ್ಥಳೀಯರು.ನನ್ನ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾರ್ಖಾನೆ ಹಿಂಭಾಗದಲ್ಲಿ ನಿಂತಿದ್ದ ರಾಸಾಯನಿಕಯುಕ್ತ ನೀರು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ, ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮೀನಾಕ್ಷಿ, ಪರಿಸರ ಅಧಿಕಾರಿ ಚಿಕ್ಕಬಳ್ಳಾಪುರ ರ್ಯಾಕ್ಸ್ ಕಾರ್ಖಾನೆಯವರು ರಾಸಾಯನಿಕ ತ್ಯಾಜ್ಯವನ್ನು ಬಯಲು ಪ್ರದೇಶಕ್ಕೆ ಬಿಡುತ್ತಿರುವ ಬಗ್ಗೆ ದೂರು ಬಂದಿದೆ, ತಕ್ಷಣ ಸ್ಥಳ ಪರಿಶೀಲನೆ ಮಾಡಿ ರಾಸಾಯನಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ, ಖಾಲಿ ಜಾಗದಲ್ಲಿ ಬಿಡುವುದು ಕಂಡು ಬಂದರೆ ಕಾರ್ಖಾನೆ ವಿರುದ್ಧ ತಕ್ಷಣ ಕಾನೂನುಕ್ರಮ ಕೈಗೊಳ್ಳಲಾಗುವುದು.

ಅರವಿಂದ್ ಕೆ.ಎಂ., ತಹಸೀಲ್ದಾರ್.ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪಂಚಾಯಿತಿ ವತಿಯಿಂದ ಸ್ಥಳ ಪರಿಶೀಲನೆ ಮಾಡಿದಾಗ ರಾಸಾಯನಿಕ ನೀರು ಬಿಟ್ಟಿರುವುದು ಸತ್ಯಾoಶ ಎಂದು ಕಂಡುಬಂದಿದೆ, ಈ ಹಿನ್ನೆಲೆಯಲ್ಲಿ ಮೂರು ದಿನಗಳ ಒಳಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ನೋಟೀಸ್ ನೀಡಲಾಗಿದೆ, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮೀನಾಕ್ಷಿ, ದೊಡ್ಡಕುರುಗೋಡು ಪಿಡಿಒ.