ರಾಸಾಯನಿಕ ತ್ಯಾಜ್ಯ ಸುರಿದು ನಡುವಿನಪುರ ಕೆರೆ ಮಲಿನ

| Published : Oct 19 2023, 12:46 AM IST

ಸಾರಾಂಶ

ಹೊಸಕೋಟೆ: ಗ್ರಾಮೀಣ ಪ್ರದೇಶಗಳ ಜೀವನಾಡಿಯಾಗಿರುವ ಕೃಷಿ, ಜನ, ಜಾನುವಾರು, ಪ್ರಾಣಿ ಸಂಕುಲಕ್ಕೆ ನೀರು ಒದಗಿಸುವ, ಪ್ರಕೃತಿಯನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ತಂಪಾಗಿಡುವ ಬಹುತೇಕ ಕೆರೆಗಳಿಂದು ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ, ಅನುಪಯುಕ್ತ ವಸ್ತುಗಳಿಂದ ಮಲಿನಗೊಂಡು ಜೀವ ಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಹೊಸಕೋಟೆ: ಗ್ರಾಮೀಣ ಪ್ರದೇಶಗಳ ಜೀವನಾಡಿಯಾಗಿರುವ ಕೃಷಿ, ಜನ, ಜಾನುವಾರು, ಪ್ರಾಣಿ ಸಂಕುಲಕ್ಕೆ ನೀರು ಒದಗಿಸುವ, ಪ್ರಕೃತಿಯನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ತಂಪಾಗಿಡುವ ಬಹುತೇಕ ಕೆರೆಗಳಿಂದು ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ, ಅನುಪಯುಕ್ತ ವಸ್ತುಗಳಿಂದ ಮಲಿನಗೊಂಡು ಜೀವ ಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೊಸಕೋಟೆ ತಾಲೂಕಿನಲ್ಲಿ 147 ಕೆರೆಗಳಿವೆ. ಇದರಲ್ಲಿ 26 ದೊಡ್ಡ ಕೆರೆಗಳು ಹಾಗೂ 121 ಸಣ್ಣ ಕೆರೆಗಳಿವೆ. ಜೀವಸಂಕುಲಕ್ಕೆ ಮಾರಕವಾದ ರಾಸಾಯನಿಕ ತ್ಯಾಜ್ಯಗಳನ್ನು ಬಹುತೇಕ ಕಡೆ ಕೆರೆಯಂಗಳ, ಅರಣ್ಯವಲಯ ಹಾಗೂ ಸರ್ಕಾರಿ ಭೂಮಿಗಳಲ್ಲಿ ಸುರಿಯುತ್ತಿರುವ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತ್ಯಾಜ್ಯ ಸುರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ. ನಂದಗುಡಿ ಹೋಬಳಿಯ ನಡುವಿನಪುರ ಕೆರೆ ಸುಮಾರು 77 ಎಕರೆ ವಿಸ್ತೀರ್ಣ ಹೊಂದಿದೆ. ಸುತ್ತಮುತ್ತಲಿನ ಕೊಂಡ್ರಹಳ್ಳಿ, ಎನ್.ಹೊಸಹಳ್ಳಿ, ನಡುವಿನಪುರ, ಬೈಲನರಸಾಪುರ, ಹುಳುವನಹಳ್ಳಿ, ಓಬಳಹಳ್ಳಿಗೆ ವ್ಯಾಪ್ತಿಯನ್ನು ಹಂಚಿಕೊಂಡಿದ್ದು, ರೈತರ ಜೀವನಾಡಿಯಾಗಿದ್ದ ಕೆರೆ ಕಾಲಕ್ರಮೇಣ ರಾಸಾಯನಿಕ ತ್ಯಾಜ್ಯಗಳ ತೊಟ್ಟಿಯಾಗಿ ಮಾರ್ಪಾಡಾಗಿದೆ. ಕೆರೆಯ ಒಡಲಿಗೆ ರಾಸಾಯನಿಕ ದ್ರವ: ವಿವಿಧ ಬಗೆಯ ತ್ಯಾಜ್ಯ, ಅನುಪಯುಕ್ತ ವಸ್ತು ಸೇರಿದಂತೆ ಹಲವು ರೀತಿಯ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯವನ್ನು ಕೆರೆಯಂಗಳದಲ್ಲಿ ರಾಶಿಗಟ್ಟಲೆ ಸುರಿದು ಬೆಂಕಿ ಇಡಲಾಗುತ್ತಿದೆ. ರಾಸಾಯನಿಕ ಹೊಗೆ ಸುತ್ತಮುತ್ತಲ ಗ್ರಾಮಗಳಿಗೆ ಹರಡಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ರಾಸಾಯನಿಕ ದ್ರವ ಕೆರೆಯ ಒಡಲು ಸೇರುತ್ತಿದ್ದು, ಪ್ರಾಣಿಗಳು-ಪಕ್ಷಿಗಳು ಇದೇ ನೀರನ್ನು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಜೀವ ಸಂಕುಲಕ್ಕೆ ಅಪಾಯ: ನಡುವಿನಪುರ ಕೆರೆಯಲ್ಲಿ 10 ಸಾವಿರ ಮೀನು ಸಾಕುತ್ತಿದ್ದು, ನೀರು ಕಲುಷಿತಗೊಂಡು ಜಲಚರಗಳ ಜೀವಹಾನಿಯಾಗಿದೆ. ಪ್ರಾಣಿ-ಪಕ್ಷಿಗಳ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಈ ಕೆರೆಗೆ ಕುಡಿಯವ ನೀರು ಒದಗಿಸುವ ಸಲುವಾಗಿ ಎತ್ತಿನಹೊಳೆ ಯೋಜನೆಯಡಿ ನೀರೂ ಸಹ ಹರಿಯಲಿದ್ದು, ಕೆರೆಯನ್ನು ಸಂರಕ್ಷಿಸಬೇಕಾದ ಅನಿವಾರ‍್ಯತೆ ಎದುರಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ: ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ, ಸಮನ್ವಯತೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿ 3 ತಿಂಗಳು ಕಳೆದರೂ ಯಾವುದೇ ಪ್ರಯೋಜನವಿಲ್ಲ. ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕೆರೆಯ ಸಂರಕ್ಷಣೆಗೆ ಮುಂದಾಗಬೇಕಾಗಿದೆ. ಕೋಟ್....... ಕೆರೆಯಂಗಳದಲ್ಲಿ ರಾಸಾಯನಿಕ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ರಾತ್ರಿ ವೇಳೆ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು. ತ್ವರಿತವಾಗಿ ತ್ಯಾಜ್ಯ ತೆರವುಗೊಳಿಸಿ, ಕೆರೆಯ ಸುತ್ತಲು ತಂತಿ ಬೇಲಿ ಹಾಕಿಸಿ, ಕೆರೆಯ ಪರಿಸರ ಕಾಪಾಡುತ್ತೇವೆ. -ಮುನಿಗಂಗಯ್ಯ, ಪಿಡಿಒ, ಬೈಲನರಸಾಪುರ ಗ್ರಾಪಂ ಕೋಟ್‌......... ಅನುಪಯುಕ್ತ ತ್ಯಾಜ್ಯಗಳನ್ನು ಕೆರೆಯಂಗಳದಲ್ಲಿ ಸುರಿಯುತ್ತಿದ್ದು, ಕೆರೆಯ ಪರಿಸರ ಹಾಳಾಗುತ್ತಿದೆ. ನಳನಳಿಸುತ್ತಿದ್ದ ಕೆರೆ ತನ್ನ ನೈಜತೆ ಕಳೆದುಕೊಳ್ಳುತ್ತಿದೆ. ರಾಸಾಯನಿಕಗಳು ಕೆರೆಯ ಒಡಲಿಗೆ ಸೇರುತ್ತಿದ್ದು, ಜೀವ ಸಂಕುಲಕ್ಕೆ ಮಾರಕವಾಗುತ್ತಿದ್ದರೂ ಅಧಿಕಾರಿಗಳು ತಡೆಯುವ ಗೋಜಿಗೆ ಹೋಗುತ್ತಿಲ್ಲ. - ಎನ್.ಎನ್.ಮಂಜುನಾಥ್, ಗ್ರಾಪಂ ಸದಸ್ಯ, ನಡುವಿನಪುರ ಫೋಟೋ: 18 ಹೆಚ್‌ಎಸ್‌ಕೆ 2 ಮತ್ತು 3 2: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ನಡುವಿನಪುರ ಕೆರೆಯಂಗಳದಲ್ಲಿ ಅನುಪಯುಕ್ತ ತ್ಯಾಜ್ಯ ಸುರಿದಿರುವುದು. 3: ಅನುಪಯುಕ್ತ ತ್ಯಾಜ್ಯ.