ಸಾರಾಂಶ
- ಮಳೆ ಬಂದಾಗ ಕೆಮಿಕಲ್ ತ್ಯಾಜ್ಯ ಡ್ರೈನೇಜ್ ಮೂಲಕ ಹೊರಬಿಡುತ್ತಿರುವ ಕಂಪನಿಗಳು !
- ಹಳ್ಳಕೊಳ್ಳಗಳಿಗೆ ಸೇರುವ ವಿಷಯುಕ್ತ ತ್ಯಾಜ್ಯ : ಜನಚರ, ಸಾವುನೋವುಗಳಿಗೆ ಕಾರಣ !- ಕನ್ನಡಪ್ರಭ ಸರಣಿ ವರದಿ ಭಾಗ : 106ಆನಂದ ಎಂ.ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ವಿಷಕಾರಿ ಹೊರಸೂಸುವ ಕೆಮಿಕಲ್ ಕಂಪನಿಗಳಿಗೆ ಮಳೆ ಬಂದರೆ ಸುಗ್ಗೀಕಾಲವಿದ್ದಂತೆ. ಅಪಾಯಕಾರಿ ರಾಸಾಯನಿಕ ಕಂಪನಿಗಳು ಇಂತಹ ಸಮಯದಲ್ಲೇ ಸಂಗ್ರಹವಾಗಿರುವ ತ್ಯಾಜ್ಯವನ್ನು ಡ್ರೈನೇಜ್ ಮೂಲಕ ಹೊರಬಿಡುತ್ತಾರೆ. ಕೈಗಾರಿಕಾ ಪ್ರದೇಶದಲ್ಲಿನ ಈ ಚಟುವಟಿಕೆ ಬಹುತೇಕ ಸಾರ್ವಜನಿಕವಾಗಿ ಕಂಡುಬರುವುದಿಲ್ಲ.
ಮಳೆ ಕೆಲವು ಕೆಮಿಕಲ್ ಕಂಪನಿಗಳ ಪಾಲಿಗೆ ವರವಾಗಿ ಪರಿಣಮಿಸಿದಂತಿದೆ. ಅಪಾಯಕಾರಿ ವಸ್ತುವಿನ ಅರಿವಿದ್ದರೂ, ಸಂಗ್ರಹವಾಗಿರುವ ತ್ಯಾಜ್ಯವನ್ನು ಅಲ್ಲಿನ ಡ್ರೈನೇಜ್‌ಗೆ ನೇರವಾಗಿ ಬಿಡುತ್ತಿರುವ ಈ ಕಂಪನಿಗಳು, ಕೈಗಾರಿಕಾ ಪ್ರದೇಶದಲ್ಲಿ ಇದು ಸಹಜವೇನೋ ಎಂಬಂತೆ ವರ್ತಿಸುತ್ತಿದ್ದಾರೆ.ಡ್ರೈನೇಜ್ ಮೂಲಕ ಸಾಗುವ ಈ ಅಪಾಯಕಾರಿ ತ್ಯಾಜ್ಯ, ಮುಂದೆ ಹಳ್ಳಕೊಳ್ಳಗಳಿಗೆ ಸಾಗಿ ಅಲ್ಲಿಂದ ನದಿ ಸೇರುತ್ತಿದೆ. ಜಲಚರಗಳ ಸಾವಿಗೆ ಕಾರಣವಾಗುವುದಲ್ಲದೆ, ನದಿಪಾತ್ರದಲ್ಲಿನ ನೀರು ಕುಡಿಯಲು ಆಗಮಿಸುವ ಜಾನುವಾರುಗಳು ಹಾಗೂ ದೆಕೆಲವೆಡೆ ಕುಡಿಯಲು ಹಾಗೂ ಬಳಕೆಗೆಂದು ಸಂಗ್ರಹಿಸುವ ಗ್ರಾಮೀಣರ ಬದುಕಿಗೂ ಇದು ಮಾರಕವಾಗಿ ಪರಿಣಮಿಸುವ ಆತಂಕ ಎದುರಾಗಿದೆ. ಕಂಪನಿಗಳ ಇಂತಹುದ್ದೇ ಕಳ್ಳಾಟದಿಂದಾಗಿ, ತಿಂಗಳ ಹಿಂದಷ್ಟೆ ಇಲ್ಲಿನ ಹಳ್ಳದ ಬಳಿ ಸಾವಿರಾರು ಮೀನುಗಳ ಮಾರಣಹೋಮಕ್ಕೆ ಸಾಕ್ಷಿಯಾಗಿತ್ತು. ಹಳ್ಳದ ನೀರು ನದಿಗೆ ಸೇರಿ ಆತಂಕಕ್ಕೂ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಜನರು, ಆ ವೇಳೆ ಅಲ್ಲಿನ ನೀರು ಸಂಗ್ರಹಕ್ಕೆ ಮುಂದಾಗಿರಲಿಲ್ಲ. ಜಲಚರಗಳ ಮಾರಣಹೋಮದ ಅರಿವಿದ್ದೂ, ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು. ಕೆಲವು ಕೆಮಿಕಲ್ ಕಂಪನಿಗಳೊಡನೆ ಸಂಬಂಧಿಕರ ಹೆಸರಲ್ಲಿ ಪಾಲುದಾರಿಕೆ ಹೊಂದಿರುವ ಅಧಿಕಾರಿಗಳು, ದೂರು ದಾಖಲಿಸಿಕೊಳ್ಳಲು ಅಥವಾ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗಲು ಹಿಂದೇಟು ಹಾಕುತ್ತಿದ್ದಾರೆಂಬ ಆರೋಪಗಳಿವೆ.
-ಕೋಟ್ - 1 : ಕೆಲವು ಕೆಮಿಕಲ್ ಕಂಪನಿಗಳು ತ್ಯಾಜ್ಯವನ್ನು ಡ್ರೈನೇಜ್‌ಗೆ ಬಿಡುತ್ತಾರೆ. ಇದು ನೇರವಾಗಿ ಹಳ್ಳಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ನದಿ ಸೇರುವ ಈ ವಿಷಕಾರಿ ತ್ಯಾಜ್ಯದಿಂದಾಗಿ ಜಲಚರಗಳು, ಜಾನುವಾರುಗಳ ಸಾವಿಗೂ ಕಾರಣವಾಗುತ್ತವೆ. ಈ ಹಿಂದೆ ಅನೇಕ ಪ್ರಕರಣಗಳು ನಡೆದಿರುವ ಉದಾಹರಣೆಗಳಿವೆ. ಮಳೆ ಬಂದಾಗ ಮಾತ್ರ ಇಂತಹ ತ್ಯಾಜ್ಯವನ್ನು ಕಂಪನಿಗಳು ಹೊರಬಿಟ್ಟು, ಜನ-ಜಲ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕಾದವರು ಮೌನವಾಗಿದ್ದಾರೆ. : ಮಲ್ಲಿಕಾರ್ಜುನ ಕಾವಲಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ (ರಿ.,) ಯಾದಗಿರಿ. (22ವೈಡಿಆರ್10)
-ಕೋಟ್-2 : ಮಳೆ ಸಂದರ್ಭಗಳಲ್ಲಿ ಈ ಕೆಮಿಕಲ್ ಕಂಪನಿಗಳು ರಾತೋರಾತ್ರಿ ಹೊಗೆ ಹೊರಬಿಡುತ್ತಾರೆ, ಜೊತೆಗೆ, ಕೆಮಿಕಲ್ ತ್ಯಾಜ್ಯವನ್ನು ಡ್ರೈನೇಜ್ ಮೂಲಕ ಹಳ್ಳಕ್ಕೆ ಸಾಗಿಸುತ್ತಾರೆ. ಇದು ನಿಜಕ್ಕೂ ಆಘಾತಕಾರಿ ಹಾಗೂ ಅಪಾಯಕಾರಿಯೂ ಹೌದು. ಮಂಗಳವಾರ ನಾವು ಕೆಮಿಕಲ್ ಕಂಪನಿ ಕಡೆಗೆ ಹೋದಾಗ, ಅಲ್ಲಿನ ಪೈಪೊಂದರ ಮೂಲಕ ತ್ಯಾಜ್ಯ ಡ್ರೈನೇಜ್ ಹೊರಬಿಡಲಾಗುತ್ತಿತ್ತು. ಇದು ಹಳ್ಳಕ್ಕೆ ಸೇರುತ್ತಿದೆ. ಮೀನು ಮುಂತಾದ ಜಲಚರಗಳಿಗೆ ಇದು ಆಪತ್ತು. ಜನ-ಜಾನುವಾರುಗಳೂ ನದಿಗೆ ಸೇರುವ ಈ ನೀರನ್ನು ಗೊತ್ತಿಲ್ಲದೆ ಬಳಸವುದರಿಂದ ಜೀವಕ್ಕೂ ಅಪಾಯವಿದೆ. : ಕಾಶೀನಾಥ, ಸಾಮಾಜಿಕ ಕಾರ್ಯಕರ್ತ, ಶೆಟ್ಟಿಹಳ್ಳಿ. (22ವೈಡಿಆರ್11)
-ಕೋಟ್-3 : ಕೆಮಿಕಲ್ ಕಂಪನಿಗಳು ಮಳೆ ಬಂದಾಗ ಮಾಡುವ ಇಂತಹ ಕಳ್ಳಾಟದ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕಾಣದಂತೆ ವರ್ತಿಸುತ್ತಾರೆ. ಕೆಲವು ದಿನಗಳ ಹಿಂದೆ ಇಂತಹ ತ್ಯಾಜ್ಯ ಹಳ್ಳಕ್ಕೆ ಸೇರಿ ಸಾವಿರಾರು ಮೀನುಗಳು ಸತ್ತು ಹೋದವು. ಇದೇ ನೀರು ಹಳ್ಳದ ಮೂಲಕ ನದಿ ಸೇರಿ ಜನರ ಜೀವಕ್ಕೆ ಅಪಾಯ ತರುವ ಆತಂಕವಿದೆ. ಕೆಲವು ಕಂಪನಿಗಳೊಡನೆ ವ್ಯವಹಾರದಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಇಂತಹ ಪ್ರಕರಣಗಳು/ಅವಘಡಗಳು ಸಂಭವಿಸಿದಾಗ ದೂರು ದಾಖಲಿಸುವ ಬದಲು, ಒಳ ಒಪ್ಪಂದದ ಮೂಲಕ, ಎಲ್ಲವೂ ಸರಿಯಾಗಿದೆ ಎಂಬ ಮಾಹಿತಿ ಮೇಲಧಿಕಾರಿಗಳಿಗೆ ನೀಡಿ, ವಾಸ್ತವಾಂಶ ಮರೆ ಮಾಚುತ್ತಾರೆ. : ವೀರೇಶ ಸಜ್ಜನ್, ಕನ್ನಡಪರ ಸಂಘಟನೆ ಹೋರಾಟಗಾರ, ಸೈದಾಪುರ. (22ವೈಡಿಆರ್12)
-22ವೈಡಿಆರ್7 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.
22ವೈಡಿಆರ್8 : ಅಪಾಯಕಾರಿ ತ್ಯಾಜ್ಯವನ್ನು ಡ್ರೈನೇಜ್ ಮೂಲಕ ಹೊರಬಿಡುತ್ತಿರುವ ಕಂಪನಿಗಳು.22ವೈಡಿಆರ್9 : ಸೋಮವಾರ ರಾತ್ರಿ ವೇಳೆ ಕೆಮಿಕಲ್ ಕಂಪನಿಗಳಿಂದ ಹೊಗೆ ಹೊರಬಿಡುತ್ತಿರುವ ದೃಶ್ಯ