ಯಾದಗಿರಿಯಲ್ಲಿ ನದಿ ಸೇರಲು 5 ರಾಜ್ಯಗಳ ಕೆಮಿಕಲ್‌ಗೆ ಕಳ್ಳಗಿಂಡಿ

| Published : Aug 18 2025, 12:00 AM IST

ಸಾರಾಂಶ

ಇಲ್ಲಿನ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗುವ 5 ರಾಜ್ಯಗಳ ಕೆಮಿಕಲ್‌ ತ್ಯಾಜ್ಯ ಇಲ್ಲಿಗೆ ಸಮೀಪದ ಭೀಮಾ ಕೃಷ್ಣಾ ಸಂಗಮಕ್ಕೆ ಸೇರುತ್ತಿದೆ. ಜನ-ಜಲ ಜೀವಕ್ಕೆ ಇದು ಕುತ್ತಾಗಿ ಪರಿಣಮಿಸುತ್ತದೆ ಎಂದು ಗೊತ್ತಿದ್ದರೂ ಕಂಪನಿಗಳ ಇಂತಹ ಕೃತ್ಯ ಇದೀಗ ಹಾಡಹಗಲೇ ನಡೆಯುತ್ತಿರುವುದು ಅಧಿಕಾರಿಗಳ ಜಾಣಕುರುಡ ನೀತಿಗೆ ಹಿಡಿದ ಕನ್ನಡಿಯಂತಿದೆ.

ಆನಂದ್‌ ಎಂ.ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ಕೆಮಿಕಲ್‌ ಕಂಪನಿಗಳು ಕಳ್ಳದಾರಿ ಮೂಲಕ ತ್ಯಾಜ್ಯ ಹಳ್ಳಗುಂಟ ಸಾಗಿ ನದಿಗೆ ಸೇರುವಂತೆ ಹೊರಬಿಡುತ್ತವೆ. ಇಲ್ಲಿನ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗುವ 5 ರಾಜ್ಯಗಳ ಕೆಮಿಕಲ್‌ ತ್ಯಾಜ್ಯ ಇಲ್ಲಿಗೆ ಸಮೀಪದ ಭೀಮಾ ಕೃಷ್ಣಾ ಸಂಗಮಕ್ಕೆ ಸೇರುತ್ತಿದೆ. ಜನ-ಜಲ ಜೀವಕ್ಕೆ ಇದು ಕುತ್ತಾಗಿ ಪರಿಣಮಿಸುತ್ತದೆ ಎಂದು ಗೊತ್ತಿದ್ದರೂ ಕಂಪನಿಗಳ ಇಂತಹ ಕೃತ್ಯ ಇದೀಗ ಹಾಡಹಗಲೇ ನಡೆಯುತ್ತಿರುವುದು ಅಧಿಕಾರಿಗಳ ಜಾಣಕುರುಡ ನೀತಿಗೆ ಹಿಡಿದ ಕನ್ನಡಿಯಂತಿದೆ.

ಅಂತಹ ತ್ಯಾಜ್ಯ ಹೊತ್ತುತರುವ ವಾಹನಗಳಿಂದ (ಟ್ಯಾಂಕರ್) ಅನೇಕ ಬಾರಿ ರಸ್ತೆಗುಂಟ ರಕ್ತ ಸುರಿಯುತ್ತಿರುವುದೂ ಕಂಡು ಬಂದಿದೆ. ಇದು ನಮಗೆ ಅಚ್ಚರಿ ಹಾಗೂ ಆಘಾತ ಮೂಡಿಸಿದೆ ಎನ್ನುತ್ತಾರೆ ಸೈದಾಪುರದ ವೀರೇಶ, ವಿವಿಧ ರಾಜ್ಯಗಳ ಆಸ್ಪತ್ರೆಗಳ ತ್ಯಾಜ್ಯ (ಬಯೋ ಮೆಡಿಕಲ್‌ ವೇಸ್ಟ್‌) ಸಹ ಇಲ್ಲಿಗೇ ಬಂದು ಬೀಳುತ್ತಿದೆ ಎಂಬ ಅನುಮಾನವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ವಾಹನಗಳು ರಸ್ತೆ ಮೇಲೆ ಸಂಚರಿಸುತ್ತಿದ್ದಾಗ, ತ್ಯಾಜ್ಯ ಬಂದಲ್ಲಿ ವಿಲೇವಾರಿ ಮಾಡಿ ಓಡಿ ಹೋಗುತ್ತಿದ್ದ ವಾಹಗಳನ್ನು ನಾವು ಹಿಡಿದುಕೊಟ್ಟಿದ್ದೆವಾದರೂ, ಪೊಲೀಸರು ಹಾಗೂ ಪರಿಸರ ಅಧಿಕಾರಿಗಳು ಕಂಪನಿಗಳ ಪರ ವಾಕಲತ್ತು ವಹಿಸಿದವರಂತೆ ನಮಗೆ ಬೆದರಿಸಿ, ವಾಹನವನ್ನು ಬಿಡುಗಡೆ ಮಾಡುತ್ತಾರೆ. ವಾಸ್ತವದಲ್ಲಿ ಅದರಲ್ಲೇನಿದೆ ? ಎಂಥ ತ್ಯಾಜ್ಯ ? ಕಳ್ಳತನದಿಂದ ಬಂದು ವಿವಿಧ ಗ್ರಾಮಗಳ ಹೊರವಲಯದಲ್ಲಿ ಚೆಲ್ಲಿ ಏಕೆ ಪರಾರಿಯಾಗುತ್ತಿವೆ ಎಂಬುದನ್ನು ತನಿಖೆ ನಡೆಸುವುದೇ ಇಲ್ಲ ಎಂದು ಅವರು ಅನೇಕ ಸಂದರ್ಭದ ಉದಾಹಣೆಗಳ ಮೆಲುಕು ಹಾಕಿದರು.

ಕೈಗಾರಿಕೆಗಳ ಸ್ಥಾಪನೆಗೆ ಮುನ್ನ ಪರಿಸರ ಪ್ರಭಾವದ ಮೌಲ್ಯಮಾಪನ ವರದಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಯಾವ ರೀತಿಯ, ಎಂಥ ಕಾರ್ಖಾನೆಗಳು ಬರುತ್ತವೆ ಎಂಬುದನ್ನು ನಮಗೆ ತಿಳಿಸಬೇಕಿದ್ದ ಅಧಿಕಾರಿಗಳು ವಿಷಪೂರಿತ ರಾಸಾಯನಿಕ ಕಂಪನಿಗಳನ್ನು ಸ್ಥಾಪಿಸಲು ಅನುಮತಿ ಕೊಟ್ಟಿರುವುದು ದುರಂತ ಎಂದು ಸೈದಾಪುರದ ಮಲ್ಲಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಂಪನಿಗಳ ದುರ್ನಾತದಿಂದ ಮಕ್ಕಳಿಗೆ ಚರ್ಮ, ಅಲರ್ಜಿ. ವೃದ್ಧರಿಗೆ ಮತ್ತು ಮಹಿಳೆಯರಿಗೆ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸರ್ಕಾರದಲ್ಲಿರುವ ಎಲ್ಲ ಪಕ್ಷದ ನಾಯಕರು ಕೂಡ ನಮ್ಮ ಭಾಗ‌ದ ಜನರನ್ನು ಪ್ರಾಣಿಗಳ ರೀತಿ ನೋಡುತ್ತಿದ್ದಾರೆ. ರೈತರ ಭೂಮಿ ತಗೆದುಕೊಳ್ಳುವಾಗ ಹುಸಿ ಆಶ್ವಾಸನೆ ನೀಡಿ, ಭೂಮಿ ಕಸಿದುಕೊಂಡು ರೈತರಿಗೆ ಮೋಸ ಮಾಡಿದ್ದಾರೆ. ಸರ್ಕಾರದ ಈ ಧೋರಣೆಯ ವಿರುದ್ಧ ಉಗ್ರ ಹೋರಾಟ ಮಾಡಲು ಸಿದ್ಧರಾಗುತ್ತಿದ್ದೇವೆ.

ಜಗದೀಶ ಬೆಳಗುಂದಿ, ನಿರ್ದೇಶಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. ಸೈದಾಪುರ.

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ನಮ್ಮ ಕೃಷಿ ಭೂಮಿ ತೆಗೆದುಕೊಳ್ಳುವಾಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ, ಇಲ್ಲಿ ಸಾರ್ವಜನಿಕ ಉದ್ಯಮ ಮತ್ತು ಪರಿಸರ ಸ್ನೇಹಿ ಕಂಪನಿಗಳನ್ನು ಸ್ಥಾಪಿಸುವುದರ ಮೂಲಕ ಇಲ್ಲಿನ ಜನತೆಗೆ ಇಲ್ಲಿಯೇ ಕೆಲಸ‌ ದೊರಕುವಂತೆ ಮಾಡುತ್ತೇವೆ ಎಂದು ನಂಬಿಸಿ‌ ನಮ್ಮಿಂದ ಭೂಮಿ ತೆಗೆದುಕೊಂಡಿದ್ದಾರೆ. ಈಗ, ಜೀವಕ್ಕೆ ಮಾರಕವಾದ ಕಂಪನಿಗಳನ್ನು ಸ್ಥಾಪಿಸಿ ನಮ್ಮನ್ನ ಜೀವಂತ ಶವವಾಗುವಂತೆ ಮಾಡಿ, ಹಂತ ಹಂತವಾಗಿ ಪ್ರಾಣವನ್ನು ಕಿತ್ತುಕೊಳ್ಳುತ್ತಿದ್ದಾರೆ.

ದಶರಥ ಮಂತ್ರಿ, ಶೆಟ್ಟಿಹಳ್ಳಿ.