ಕಿತ್ತೂರು ರಾಣಿ ಚೆನ್ನಮ್ಮನ ಸ್ವಾತಂತ್ರ್ಯ ಹೋರಾಟ, ದೇಶಪ್ರೇಮ ಎಲ್ಲರಿಗೂ ಪ್ರೇರಣೆಯಾಗಿದೆ

ಸಂಡೂರು: ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ಬ್ರಿಟೀಷರ ಕಾಯ್ದೆಯ ವಿರುದ್ಧ ಹೋರಾಡಿ ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ಶಿಕ್ಷಕ ಕೆ.ಬಿ. ಪ್ರಕಾಶ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ತಾಲೂಕಾಡಳಿತ ಹಾಗೂ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಾಗೂ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕಿತ್ತೂರು ರಾಣಿ ಚೆನ್ನಮ್ಮನ ಸ್ವಾತಂತ್ರ್ಯ ಹೋರಾಟ, ದೇಶಪ್ರೇಮ ಎಲ್ಲರಿಗೂ ಪ್ರೇರಣೆಯಾಗಿದೆ. ಚೆನ್ನಮ್ಮ ಆದರ್ಶ ಹಾಗೂ ಧೀರ ಗುಣ, ದೇಶಪ್ರೇಮ ನಾವೆಲ್ಲರೂ ರೂಢಿಸಿಕೊಳ್ಳಬೇಕಲ್ಲದೆ, ನಮ್ಮ ಮಕ್ಕಳಿಗೂ ಕಲಿಸಬೇಕು ಎಂದರು.

ತಹಸೀಲ್ದಾರ್ ಜಿ.ಅನಿಲ್‌ಕುಮಾರ್‌ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನ ಕಿಚ್ಚು, ದೇಶಪ್ರೇಮ ಪ್ರತಿಯೊಬ್ಬರಲ್ಲಿಯೂ ಬರಬೇಕು. ಮಹಿಳೆಯರು ಸಬಲರು ಹಾಗೂ ಧೈರ್ಯಶಾಲಿಗಳಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಗಡಾದ್‌ ರಮೇಶ್, ಕಾರ್ಯದರ್ಶಿ ಬಸವರಾಜ ಬಣಕಾರ, ಖಜಾಂಚಿ ಬನ್ನಿಹಟ್ಟಿ ಮಹೇಶ್, ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರು, ಸಮಾಜದ ನಿಕಟಪೂರ್ವ ಅಧ್ಯಕ್ಷ ಪಿ. ರವಿಕುಮಾರ್, ಗೌರವಾಧ್ಯಕ್ಷ ಮೇಲುಸೀಮೆ ಶಂಕ್ರಪ್ಪ, ತಾಲೂಕು ಘಟಕದ ಸದಸ್ಯರು, ತಡಾಳ್ ಮಹೇಶ್, ಷಣ್ಮುಖಪ್ಪ, ಸಮಾಜದ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.