ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಿಡಿಗೆದ್ದ ವೀರರಾಣಿ ಕಿತ್ತೂರು ಚೆನ್ನಮ್ಮನ ಸಾಧನೆ ಸಂಭ್ರಮಿಸುವ ಪವಿತ್ರ ದಿನ
ಹೂವಿನಹಡಗಲಿ: ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಲ್ಲ, ಒಂದು ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲೆಸದ ಸಾಮ್ರಾಜ್ಞಿಯಾಗಿದ್ದು, ಪ್ರತಿರೋಧದ ಅಮರ ಸಂಕೇತವಾಗಿ ಇತಿಹಾಸದಲ್ಲಿ ಉಳಿದ ವೀರ ಮಹಿಳೆಯಾಗಿದ್ದಾಳೆ ಎಂದು ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಾಗೂ 202ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಿಡಿಗೆದ್ದ ವೀರರಾಣಿ ಕಿತ್ತೂರು ಚೆನ್ನಮ್ಮನ ಸಾಧನೆ ಸಂಭ್ರಮಿಸುವ ಪವಿತ್ರ ದಿನವಾಗಿದೆ, ಜತೆಗೆ ನಮ್ಮ ನಾಡಿನ ದಾರ್ಶನಿಕರಾದ ಕಿತ್ತೂರು ರಾಣಿ ಚೆನ್ನಮ್ಮ, ಕನಕದಾಸ, ವಾಲ್ಮೀಕಿ, ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರನ್ನು ಒಂದು ಜಾತಿಯ ಸಂಕೋಲೆಗೆ ಸೀಮಿತಗೊಳಿಸಬಾರದು ಎಂದರು.
ಕಿತ್ತೂರು ಚೆನ್ನಮ್ಮನ ಯಶೋಗಾಥೆಯ ಚರಿತ್ರೆ ಎಲ್ಲರೂ ಓದಬೇಕು. ವೀರಮಾತೆಯ ಆದರ್ಶ, ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ ಮಾತನಾಡಿ, ಇತಿಹಾಸ ಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು, ಅವರ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವಾಗಿರುತ್ತದೆ. ದಾರ್ಶನಿಕರ ಜಯಂತಿ ಎಲ್ಲ ಸಮುದಾಯದವರು ಒಟ್ಟಿಗೆ ಸೇರಿ ಆಚರಿಸಿದರೆ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.
ತಾಪಂ ಇಒ ಜಿ. ಪರಮೇಶ್ವರ, ವೀರಶೈವ ಮಹಾಸಭಾ ಅಧ್ಯಕ್ಷ ಸಿ.ಕೆ.ಎಂ. ಬಸವಲಿಂಗಸ್ವಾಮಿ, ನಗರ ಘಟಕದ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಪಂಚಮಸಾಲಿ ಸಮಾಜದ ಅಧ್ಯಕ್ಷ ಕೆ.ಎಸ್. ಶಾಂತನಗೌಡ, ಕಾರ್ಯದರ್ಶಿ ಸೊಪ್ಪಿನ ರಾಕೇಶ, ಎಂ.ವಿ.ಪಾಟೀಲ್, ಪಿ.ಕೇಶಪ್ಪ, ಬೀರಬ್ಬಿ ಬಸವರಾಜ, ಕನ್ನಿಹಳ್ಳಿ ಮುದುಕಪ್ಪ, ಕೆ.ಪತ್ರೇಶ, ಪಿ.ಶಿವಕುಮಾರ್, ಬಾವಿಮನಿ ಕೊಟ್ರೇಶ, ನೌಕರರ ಸಂಘದ ಅಧ್ಯಕ್ಷ ವಿ.ಬಿ. ಜಗದೀಶ, ಗೌರವ ಅಧ್ಯಕ್ಷ ಬಸೆಟ್ಟಿ ಪ್ರಕಾಶ, ಸಿ.ಜೆ. ಚಂದ್ರಪ್ಪ, ಹೊಂಬಾಳೆ ಕೊಟ್ರೇಶ, ಟಿ.ಪಿ. ವೀರೇಂದ್ರ, ಎಚ್.ಕೆ. ಮಹೇಶ ಸೇರಿದಂತೆ ಇತರರಿದ್ದರು.