ಜುಲೈ 31ರಂದು ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲುವಿನಲ್ಲಿ ಚನ್ನಮ್ಮರ ಉತ್ತರಕ್ರಿಯಾದಿ ಭೂ ಶಾಂತಿ ಕಾರ್ಯಕ್ರಮವಿದೆ. ಮಂಡ್ಯ ಜಿಲ್ಲೆಯಿಂದ ಭಾಗವಹಿಸುವವರಿಗೆ ಜೆಡಿಎಸ್ ನಾಯಕರು ವಾಹನದ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರು ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳು ಹಾಗೂ ಸಾರ್ವಜನಿಕ ಸೇವೆಯ ಮೂಲಕ ಜನರ ಮನಸಲ್ಲಿ ಅಚ್ಚಳಿಯದಂತಹ ಸ್ಥಾನ ಪಡೆದಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಬಣ್ಣಿಸಿದರು.

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಜೆಡಿಎಸ್ ರಾಜ್ಯ ಹಾಗೂ ಜಿಲ್ಲಾ ಮಹಿಳಾ ಘಟಕದಿಂದ ನಡೆದ ಚನ್ನಮ್ಮ ದೇವೇಗೌಡ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಮ್ಮ ಅವರು ನನಗೆ ತಾಯಿ ರೀತಿ ಆಶೀರ್ವಾದ ಮಾಡಿದ್ದರು. ಅವರ ಆದರ್ಶಮಯ ಬದುಕು, ಸೇವಾ ಮನೋಭಾವ ಹಾಗೂ ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು ಸ್ಮರಣೀಯವಾಗಿವೆ ಎಂದು ಸ್ಮರಿಸಿದರು.

1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಕೆಆರ್‌ಎಸ್ ಅಣೆಕಟ್ಟೆಗೆ ಚನ್ನಮ್ಮ ಬಾಗಿನ ಅರ್ಪಿಸಿದಾಗ ಮೆರವಣಿಗೆಯಲ್ಲಿ ಭಾಗವಹಿಸಿದರು. ಅವರು ನಿಧನರಾದ ದಿನ ಲಕ್ಷಾಂತರ ಜನ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮಂಡ್ಯದಲ್ಲೂ ಚನ್ನಮ್ಮ ಹಾಗೂ ದೇವೇಗೌಡ, ಕುಮಾರಣ್ಣನ ಕುಟುಂಬದ ಲಕ್ಷಾಂತರ ಮಂದಿ ಅಭಿಮಾನಿಗಳು ಪುಣ್ಯ ಸ್ಮರಣೆ ಮಾಡುತ್ತಿದ್ದೇವೆ ಎಂದರು.

ಜುಲೈ 31ರಂದು ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲುವಿನಲ್ಲಿ ಚನ್ನಮ್ಮರ ಉತ್ತರಕ್ರಿಯಾದಿ ಭೂ ಶಾಂತಿ ಕಾರ್ಯಕ್ರಮವಿದೆ. ಮಂಡ್ಯ ಜಿಲ್ಲೆಯಿಂದ ಭಾಗವಹಿಸುವವರಿಗೆ ಜೆಡಿಎಸ್ ನಾಯಕರು ವಾಹನದ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ದೇವೇಗೌಡರು ರಾಜಕೀಯ ಜೀವನ ಉತ್ತಮವಾಗಿರಲು ಕಾರಣರಾದವರಲ್ಲಿ ಚನ್ನಮ್ಮ ಅವರು ಪ್ರಮುಖರು. ಇಂತಹ ಮಹಾನ್ ತಾಯಿಯ ನೆನಪು ಚಿರಕಾಲ ಜನಮಾನಸದಲ್ಲಿ ಉಳಿಯಬೇಕು. ಅವರ ಜೀವನ ಕ್ರಮ, ಆದರ್ಶಗಳು ಇಂದಿನ ಸಮಾಜಕ್ಕೆ ಆದರ್ಶವಾಗಬೇಕು ಎಂದರು.

ಗೃಹಣಿಯಾಗಿ, ಪತ್ನಿಯಾಗಿ ಹಾಗೂ ತಾಯಿಯಾಗಿ ಅವರು ಭಾರತೀಯ ನಾರಿ ಪರಂಪರೆಯ ಸಂಕೇತದಂತೆ ಇದ್ದರು. ಅಪಾರ ದೈವ ಭಕ್ತರಾಗಿದ್ದ ಅವರು ಅತಿಥಿ ಸತ್ಕಾರರ ಪರಂಪರೆಗೆ ಅರ್ಥ ತುಂಬಿದ್ದರು ಎಂದು ತಮ್ಮ ಹಾಗೂ ಅವರ ನಡುವಿನ ಅಂದಿನ ದಿನಗಳನ್ನು ನೆನಪಿಸಿಕೊಂಡರು.

ಒಳ್ಳೆಯ ಸದ್ಗುಣಗಳಿಂದ ಜನಮನ್ನಣೆ ಗಳಿಸಬಹುದು ಎನ್ನುವುದಕ್ಕೆ ಚನ್ನಮ್ಮ ಅವರೆ ನಿದರ್ಶನ. ಚನ್ನಮ್ಮ ಅವರು ಸಾಮಾನ್ಯ ಮಹಿಳೆಯಲ್ಲ. ಆಸಿಡ್ ಹಾಕಿದವರಿಗೂ ಶಿಕ್ಷೆ ಮಾಡಬೇಡಿ ಎಂದು ಹೇಳಿದ ಮಹಾತಾಯಿ. ಅವರಲ್ಲಿ ಸೇಡಿನ ಮನೋಭಾವ ಇರಲಿಲ್ಲ ಎಂದರು.

ಪ್ರಧಾನಮಂತ್ರಿಯ ಶ್ರೀಮತಿಯಾದರು ದೇವರ ಮನೆ, ಅಡುಗೆ ಮನೆ, ಆತಿಥ್ಯ ಬಿಟ್ಟರೆ ಹೊರಗಡೆ ಅವರು ಬರುತ್ತಿರಲಿಲ್ಲ. ಪುಸ್ತಕವನ್ನು ಓದುವ ಹವ್ಯಾಸ ಇಟ್ಟಕೊಂಡಿದ್ದರು. ಅವರ ಸಿಂಪ್ಲಿಸಿಟಿ, ಅವರ ಮನೋಭಾವನೆಗಳನ್ನು ಮಹಿಳೆಯರು ಅನುಸರಿಸಬೇಕು ಎಂದು ಕರೆ ನೀಡಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯಶಂಕರ್, ನಗರ ಘಟಕದ ಅಧ್ಯಕ್ಷೆ ಜಯಶೀಲಮ್ಮ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಮುಖಂಡರಾದ ಮಂಜುನಾಥ್, ಕನ್ಯಾಕುಮಾರಿ, ಹೇಮಾವತಿ, ಪದ್ಮಾವತಿ, ವತ್ಸಲ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೋರೇಗೌಡ, ನಾಗಮ್ಮ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.