ತೇಜಸ್ಸಿನ ಸಾಕಾರಮೂರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಧೈರ್ಯ ಮತ್ತು ಸಾಹಸ ಅಪಾರವಾದುದು.

ಶಿವಾನುಭವ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿಕೆ

ಕನ್ನಡಪ್ರಭ ವಾರ್ತೆ ಗದಗ

ತೇಜಸ್ಸಿನ ಸಾಕಾರಮೂರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಧೈರ್ಯ ಮತ್ತು ಸಾಹಸ ಅಪಾರವಾದುದು. ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮುಂಚೆಯೇ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಆದ್ಯ ವೀರಮಹಿಳೆ ಆಕೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ನಗರದ ಲಿಂಗಾಯತ ಪ್ರಗತಿಶೀಲ ಸಂಘದ 2821ನೇ ಶಿವಾನುಭವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅನೇಕ ಕಠಿಣ ಸನ್ನಿವೇಶಗಳನ್ನು ದಿಟ್ಟವಾಗಿ ಎದುರಿಸಿದ ಕಿತ್ತೂರು ರಾಣಿ ಚೆನ್ನಮ್ಮ ಎರಡನೇ ಬಾರಿ ಬ್ರಿಟಿಷರ ಆಕ್ರಮಣಕ್ಕೆ ಒಳಗಾಗಿ ಸೆರೆಮನೆ ಸೇರಿದಾಗಲೂ ಲಿಂಗಪೂಜೆ, ಆಚಾರ ವಿಚಾರಗಳನ್ನು ಬಿಡದೆ ಪಾಲಿಸಿದ ಸಂಸ್ಕಾರವಂತೆಯಾಗಿದ್ದರು.

ಇನ್ನು ಜಗತ್ಪ್ರಸಿದ್ಧ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ಶ್ರೀ ವಾಲ್ಮೀಕಿಯವರು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದು, ಧರ್ಮ, ಸತ್ಯ, ನ್ಯಾಯ, ಕರ್ತವ್ಯನಿಷ್ಠೆ ಹಾಗೂ ಆದರ್ಶ ಜೀವನ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು. ಮುಖ್ಯ ಅತಿಥಿಯಾಗಿದ್ದ ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, ರಾಮಾಯಣ ಮಹಾಕಾವ್ಯದ ಸಂದೇಶಗಳು ಸಾರ್ವಕಾಲಿಕ ಆದರ್ಶಗಳಾಗಿವೆ. ಮನುಷ್ಯ ಹೇಗೆ ಬದುಕಬೇಕು ಹಾಗೂ ಬದುಕಿನಲ್ಲಿ ಎದುರಾಗುವ ಅಗ್ನಿಪರೀಕ್ಷೆಗಳನ್ನು ಹೇಗೆ ಎದುರಿಸಬೇಕೆಂದು ವಾಲ್ಮೀಕಿಯವರ ವಿಚಾರಗಳು ದಾರಿದೀಪವಾಗಿವೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಡಾ. ಪ್ರಭಾ ದೇಸಾಯಿ (ವೈದ್ಯಕೀಯ), ಮಂಗಳಾ ಕೆ. ನೀಲಗುಂದ (ಕೃಷಿ), ವಿಜಯಲಕ್ಷ್ಮಿ ಅಂಗಡಿ (ಕಾನೂನು) ಹಾಗೂ ಶಿವಲೀಲಾ ಅಕ್ಕಿ (ಸಾಮಾಜಿಕ ಸೇವೆ) ಅವರನ್ನು ಗೌರವಿಸಲಾಯಿತು. ಪ್ರತೀಕ್ಷಾ ಗುಮ್ಮಗೋಳ ಧರ್ಮಗ್ರಂಥ ಪಠಣ, ಅಮೃತ ಅಳಗುಂಡಗಿ ವಚನ ಚಿಂತನೆ ಹಾಗೂ ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ವಚನ ಸಂಗೀತ ಪ್ರಸ್ತುತಪಡಿಸಿದರು. ಲತಾ ಬಾಲಚಂದ್ರ ಬರಮಗೌಡ ದಾಸೋಹ ಸೇವೆ ವಹಿಸಿದ್ದರು.

ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಪ್ರತಿಭಾ ಬಡ್ನಿ ನಿರೂಪಿಸಿದರು. ವೇದಿಕೆಯಲ್ಲಿ ದಾನಯ್ಯ ಗಣಾಚಾರಿ, ಬಾಲಚಂದ್ರ ಬರಮಗೌಡ, ಚನ್ನವೀರ ಹುಣಸಿಕಟ್ಟಿ, ಹುಚ್ಚಣ್ಣ ಶಹಪುರ, ರಾಚಪ್ಪ ಮಿಣಜಗಿ, ಪ್ರಕಾಶ ಅಸುಂಡಿ, ಡಾ. ರಮೇಶ ಕಲ್ಲನಗೌಡ, ಡಾ. ಪ್ರಭು ಗಂಜಿಹಾಳ, ಡಾ. ಆದೇಶ ಅಂಗಡಿ, ಎಸ್.ಐ. ಪಟ್ಟೇದ, ಸೋಮು ಪುರಾಣಿಕ, ಸುನಂದ ಪಿಳ್ಳೆ, ವೀರಣ್ಣ ಗೋಟಡಕಿ ಸೇರಿದಂತೆ ಅನೇಕರಿದ್ದರು.