ಸಾರಾಂಶ
ಲಕ್ಷ್ಮೇಶ್ವರ: ಬ್ರಿಟಿಷರ ಸಾಮ್ರಾಜ್ಯ ಶಾಹಿ ಧೋರಣೆ ಖಂಡಿಸಿ ಅವರ ವಿರುದ್ಧ ಹೋರಾಡಿ ಭಾರತೀರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಎಂದು ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.
ಬುಧವಾರ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರದ ಕಿತ್ತೂರು ರಾಣಿ ಮೂರ್ತಿಗೆ ಪೂಜೆ ಸಲ್ಲಿಸಿ ಚೆನ್ನಮ್ಮನ 200 ನೇ ವಿಜಯೋತ್ಸವ ಆಚರಿಸಿ ಮಾತನಾಡಿದರು.ಭಾರತವು ಪರಕೀಯರ ದಾಸ್ಯದಲ್ಲಿ ತೆರಳುತ್ತಿರುವಾಗ ಸ್ವಾತಂತ್ರ್ಯದ ಕಹಳೆ ಊದುವ ಮೂಲಕ ಭಾರತೀಯರನ್ನು ಎಬ್ಬಿಸಿ ದೇಶಕ್ಕಾಗಿ ಹೋರಾಟ ಮಾಡಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಬ್ರಿಟೀಷರ ಒಡೆದು ಆಳುವ ನೀತಿಯಿಂದ ಚೂರು ಚೂರಾಗಿದ್ದ ಭಾರತೀಯರನ್ನು ಒಂದುಗೂಡಿಸುವ ಹಾಗೂ ಸ್ವಾತಂತ್ರ್ಯದ ಪರಿಕಲ್ಪನೆ ಮೂಡಿಸುವ ಕಾರ್ಯ ರಾಣಿ ಚೆನ್ನಮ್ಮ ಮಾಡಿದರು. ಭಾರತದ ಇತಿಹಾಸದಲ್ಲಿ ರಾಣಿ ಚೆನ್ನಮ್ಮ ತಮ್ಮ ಹೋರಾಟದ ಮೂಲಕ ಅಜರಾಮರವಾಗಿ ಉಳಿಯುತ್ತಾರೆ. ಬ್ರಿಟೀಷರ ಧಾರವಾಡ ಜಿಲ್ಲಾಧಿಕಾರಿ ಥ್ಯಾಕರೆಯ ರುಂಡ ಚಂಡಾಡಿ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದು ಸಣ್ಣ ಮಾತಲ್ಲ. ರಾಣಿ ಚೆನ್ನಮ್ಮನ ವಿಜಯೋತ್ಸವದ 200 ವರ್ಷಾಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಈ ವೇಳೆ ದೇವಣ್ಣ ಬಳಿಗಾರ, ಚನ್ನಪ್ಪ ಜಗಲಿ, ಚಂಬಣ್ಣ ಬಾಳಿಕಾಯಿ ರಾಣಿ ಚೆನ್ನಮ್ಮನ ಕುರಿತು ಮಾತನಾಡಿದರು.ಈ ವೇಳೆ ಪುರಸಭೆ ಸದಸ್ಯ ಮಹಾದೇವಪ್ಪ ಅಣ್ಣಿಗೇರಿ, ಪ್ರವೀಣ ಬಾಳಿಕಾಯಿ, ಈರಣ್ಣ ಕಟಗಿ, ಚಂದ್ರು ಮಾಗಡಿ, ಶಿವ ಜೋಗೆಪ್ಪ ಚಂದರಗಿ, ನೀಲಪ್ಪ ಶೆರಸೂರಿ, ಈರಣ್ಣ ಅಕ್ಕೂರ ಸೇರಿದಂತೆ ಅನೇಕರು ಇದ್ದರು.