ಸಶಕ್ತ ಭಾರತದ ಕನಸಿಗೆ ಮುನ್ನುಡಿ ಬರೆದ ಚೆನ್ನಮ್ಮ: ಶ್ರೀನಿವಾಸ ಮಾನೆ

| Published : Oct 24 2025, 01:00 AM IST

ಸಾರಾಂಶ

ಹಾನಗಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಮಸಾಲಿ ಸಮಾಜ ಗುರುವಾರ ಆಯೋಜಿಸಿದ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಉತ್ಸವದಲ್ಲಿ ಶಾಸಕ ಶ್ರೀನಿವಾಸ ಮಾನೆ ಪಾಲ್ಗೊಂಡಿದ್ದರು.

ಹಾನಗಲ್ಲ: ಭರತ ಭೂಮಿಯ ಮಣ್ಣಿನ ಶೂರತನದ ಪ್ರತೀಕವಾದ ವೀರರಾಣಿ ಕಿತ್ತೂರು ಚೆನ್ನಮ್ಮ ದೇಶದ ಸ್ವಾತಂತ್ರ್ಯದ ಕ್ರಾಂತಿಯ ದಿಟ್ಟ ಮಹಿಳೆಯಾಗಿ, ದೇಶಪ್ರೇಮ ಕಟ್ಟಿಕೊಟ್ಟ ಇತಿಹಾಸವನ್ನು ಈ ನಾಡಿನ ಪ್ರತಿಯೊಬ್ಬ ಪ್ರಜೆ ಜ್ಞಾಪಿಸಿಕೊಳ್ಳಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಗುರುವಾರ ಹಾನಗಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಮಸಾಲಿ ಸಮಾಜ ಆಯೋಜಿಸಿದ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ರಿಟಿಷರ ಕಪ್ಪುಹಣದ ಬೇಡಿಕೆಗೆ ಹೋರಾಟದ ಉತ್ತರ ನೀಡಿ ಶಕ್ತಿ ಪ್ರದರ್ಶಿಸಿದ್ದಲ್ಲದೆ, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ ಮುನ್ನುಗ್ಗುವ ಸಂದೇಶ ನೀಡಿದ ಕಿತ್ತೂರು ಚೆನ್ನಮ್ಮ ಸಶಕ್ತ ಭಾರತದ ಕನಸಿಗೆ ಮುನ್ನುಡಿ ಬರೆದರು. ಜಾತಿ, ಮತ, ಪಂಥಗಳ ಮೇರೆ ಮೀರಿ ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಬದುಕನ್ನೇ ಮೀಸಲಿಟ್ಟ ನಮ್ಮ ಸ್ವಾತಂತ್ರ್ಯ ವೀರರ ತ್ಯಾಗ, ಬಲಿದಾನವನ್ನು ನೆನೆಯೋಣ. ಭಾರತ ದೇಶದ ಅಭಿವೃದ್ಧಿಯನ್ನು ಸಹಿಸದ ಪರಕೀಯರ ಷಡ್ಯಂತ್ರಕ್ಕೆ ಬಲಿಯಾಗದೇ ಒಟ್ಟಾಗಿ ಆಲೋಚಿಸಿ ದೇಶದ ಹಿತಕ್ಕೆ ಜತೆಯಾಗೋಣ. ವೀರರಾಣಿ ಕಿತ್ತೂರು ಚೆನ್ನಮ್ಮ ಒಂದು ಶಕ್ತಿ. ಅದು ಭಾರತದ ಪ್ರತಿಯೊಬ್ಬರಿಗೆ ಸ್ಫೂರ್ತಿ ಎಂದರು.

ತಹಸೀಲ್ದಾರ್‌ ಎಸ್. ರೇಣುಕಾ ಮಾತನಾಡಿ, ಬ್ರಿಟಿಷರಿಗೆ ಶರಣಾಗದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅಜರಾಮರವಾದ ಶೌರ್ಯದ ಮೂಲಕ ಭಾರತದ ಇತಿಹಾಸದಲ್ಲಿ ಶಾಶ್ವತ ನಕ್ಷತ್ರವಾಗಿದ್ದಾರೆ. ಈ ದೇಶದಲ್ಲಿ ನಮ್ಮವರ ಮೋಸದಿಂದಲೇ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಹಿನ್ನಡೆಯಾಗಿತ್ತು. ಆದಾಗ್ಯೂ ಮುನ್ನುಗ್ಗಿದ ನಮ್ಮ ಶೂರರ ಕ್ರಾಂತಿಯ ಫಲವೇ ಭಾರತದ ಸ್ವಾತಂತ್ರ್ಯ ಎಂದರು.

ಪಂಚಮಸಾಲಿ ಸಮಾಜದ ಅಧ್ಯಕ್ಷ ಕರಬಸಪ್ಪ ಶಿವೂರ, ಕಾರ್ಯದರ್ಶಿ ಸೋಮಶೇಖರ ಕೋತಂಬರಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಸಮಾಜ ಸೇವಕ ಸಿದ್ದಲಿಂಗಪ್ಪ ಕಮಡೊಳ್ಳಿ, ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಸಾಹಿತಿ ಮಾರುತಿ ಶಿಡ್ಲಾಪುರ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ನಿಜಲಿಂಗಪ್ಪ ಮುದೆಪ್ಪನವರ, ರವಿಬಾಬು ಪೂಜಾರ, ಸಿ. ಮಂಜುನಾಥ, ರಾಜು ಹಲಸೂರ, ಕೆ.ಬಿ. ಪಾಟೀಲ, ರುದ್ರಣ್ಣ ಅಗಸಿಬಾಗಿಲ, ವಿನಾಯಕ ಕಮಡೊಳ್ಳಿ, ಮಧು ಪಾಣಿಗಟ್ಟಿ, ಭರಮಣ್ಣ ಶಿವೂರ, ಬಿ.ಐ. ಹುನಗುಂದ, ಬಸಣ್ಣ ಎಲಿ, ಬಸಣ್ಣ ಆಲದಕಟ್ಟಿ, ಸಿದ್ದು ಓಣಿಕೇರಿ, ರಾಜಶೇಖರ ಮಲಗುಂದ, ನಾಗಣ್ಣ ಶಿವಣ್ಣನವರ, ಮಂಜು ಗೋರಣ್ಣನವರ, ಮತೀನ ಶಿರಬಡಗಿ, ಖುರ್ಷಿದ ಹುಲ್ಲತ್ತಿ, ಶಿವು ಭದ್ರಾವತಿ, ಶಿವು ತಳವಾರ, ಮಾರ್ತಾಂಡಪ್ಪ ಮಣ್ಣಮ್ಮನವರ, ಸುರೇಶ್ ನಾಗಣ್ಣನವರ, ವಿನಯ ಬಂಕನಾಳ ಪಾಲ್ಗೊಂಡಿದ್ದರು.

ಬಡೆವಪ್ಪ ಬಡೆಪ್ಪನವರ ಕ್ರಾಂತಿಗೀತೆ ಹಾಡಿದರು. ಸಿದ್ದು ಗೌರಣ್ಣನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸನ್ಮಾನ: ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ತಹಸೀಲ್ದಾರ್‌ ಎಸ್. ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಮ್ಮ ಹಿರೇಮಠ ಅವರನ್ನು ಪಂಚಮಸಾಲಿ ಸಮಾಜದಿಂದ ಗೌರವಿಸಲಾಯಿತು.