ದೇಶದ ಸ್ವಾತಂತ್ರ್ಯ ಹಾಗೂ ನಾಡಿನ ಸ್ವಾಭಿಮಾನಕ್ಕಾಗಿ ಹೋರಾಡಿದ ಚೆನ್ನಮ್ಮ, ಬ್ರಿಟಿಷರ ಅಧೀನಕ್ಕೆ ಕಿತ್ತೂರು ಸಂಸ್ಥಾನವನ್ನು ಒಪ್ಪಿಸಲು ನಿರಾಕರಿಸಿ ವೀರಾವೇಶದಿಂದ ಹೋರಾಟ ನಡೆಸಿದರು.
ಶಿರಹಟ್ಟಿ: ಬ್ರಿಟಿಷರ ದಬ್ಬಾಳಿಕೆ ಹಾಗೂ ಅನ್ಯಾಯದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮನ ಧೈರ್ಯ, ಸಾಹಸ, ದೇಶಪ್ರೇಮ ಮತ್ತು ಸ್ವಾಭಿಮಾನ ಯುವಜನತೆಗೆ ಮಾದರಿಯಾಗಿವೆ. ಮಹಿಳೆಯರೂ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬಲ್ಲರು ಎಂಬುದನ್ನು ತಮ್ಮ ಹೋರಾಟದ ಮೂಲಕ ಸಾಬೀತುಪಡಿಸಿದ ವೀರರಾಣಿ ಚೆನ್ನಮ್ಮನ ಜೀವನ ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ತುಳಿ ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ತಾಲೂಕು ಘಟಕದ ವತಿಯಿಂದ ಕಡಕೋಳ ಗ್ರಾಮದಲ್ಲಿ ಚೆನ್ನಮ್ಮ ಜಯಂತಿ ಪ್ರಯುಕ್ತ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ದೇಶದ ಸ್ವಾತಂತ್ರ್ಯ ಹಾಗೂ ನಾಡಿನ ಸ್ವಾಭಿಮಾನಕ್ಕಾಗಿ ಹೋರಾಡಿದ ಚೆನ್ನಮ್ಮ, ಬ್ರಿಟಿಷರ ಅಧೀನಕ್ಕೆ ಕಿತ್ತೂರು ಸಂಸ್ಥಾನವನ್ನು ಒಪ್ಪಿಸಲು ನಿರಾಕರಿಸಿ ವೀರಾವೇಶದಿಂದ ಹೋರಾಟ ನಡೆಸಿದರು. ತಮ್ಮ ರಾಜ್ಯದ ಹಕ್ಕು, ಜನರ ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು ಕಾಪಾಡಲು ತೋರಿದ ಅವರ ಧೈರ್ಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಸಮಾಜದ ಮುಖಂಡ ಎಸ್.ಬಿ. ಹೊಸೂರ ಮಾತನಾಡಿ, ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ನಾಡಿನ ಗೌರವಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಚೆನ್ನಮ್ಮ, ಮಹಿಳೆಯರು ಯಾವುದೇ ಕ್ಷೇತ್ರದಲ್ಲಿಯೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡಬಲ್ಲರು ಎಂಬುದನ್ನು ತಮ್ಮ ಸಾಹಸಮಯ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ. ಅಧಿಕಾರದ ಆಸೆಗಿಂತ ನಾಡಿನ ಹಿತಕ್ಕೆ ಆದ್ಯತೆ ನೀಡಿದ ಅವರ ಹೋರಾಟದ ಮನೋಭಾವ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.ತಾಲೂಕು ಪ್ರಧಾನ ಕಾರ್ಯದರ್ಶಿ ಶರಣಪ್ಪ ಹೊಂಬಳ, ತಿಪ್ಪಣ್ಣ ಕೊಂಚಿಗೇರಿ, ಹಾಲಪ್ಪ ದುಗ್ಗಾಣಿ, ರಾಮಣ್ಣ ಕೊಂಚಿಗೇರಿ, ಬಸವರಾಜ್ ಚಿಕ್ಕತೋಟದ, ಅಶೋಕ್ ಬಳ್ಳಾರಿ, ಬಸವರಾಜ್ ವಡವಿ, ಬಸವರಾಜ್ ಕಲ್ಯಾಣಿ, ಕುಮಾರ್ ಅಡವಿ, ಚಂದ್ರು ಕೊಂಚಿಗೇರಿ, ಧರ್ಮರಾಜ ಕೊಂಚಿಗೇರಿ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.