ಸಾರಾಂಶ
ಭಟ್ಕಳ: ಪಟ್ಟಣದ ಸುಪ್ರಸಿದ್ಧ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶಾಂತಿಯುತವಾಗಿ ಸಂಪನ್ನಗೊಂಡಿತು.ಯುಗಾದಿಯಂದು ಧ್ವಜಾರೋಹಣದ ಮೂಲಕ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದವು. ಪ್ರತಿ ದಿನವೂ ಒಂದೊಂದು ವಾಹನದಲ್ಲಿ ಉತ್ಸವ ನೆರವೇರಿಸುವ ಮೂಲಕ ಜಾತ್ರಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶನಿವಾರ ರಾತ್ರಿ ಹೂವಿನ ತೇರು ಎಳೆಯುವ ಮೂಲಕ ಉತ್ಸವಗಳು ಸಂಪನ್ನಗೊಂಡಿದ್ದು ಭಾನುವಾರ ಬೆಳಿಗ್ಗೆ ಹನುಮಂತ ದೇವರ ಉತ್ಸವಮೂರ್ತಿಯನ್ನು ಬ್ರಹ್ಮರಥದಲ್ಲಿ ಇರಿಸುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ನಂತರ ಸಾವಿರಾರು ಭಕ್ತರು ದೇವರಿಗೆ ಪೂಜೆ, ರಥ ಕಾಣಿಕೆ ಸಲ್ಲಿಸಿದರು.
ಸಂಜೆ ನಡೆದ ರಥೋತ್ಸವದಲ್ಲಿ ತಾಲ್ಲೂಕಿನ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನಿಲ್ ನಾಯ್ಕ, ಅರ್ಬನ್ ಬ್ಯಾಂಕಿನ ನಿರ್ದೇಶಕಿ ಬೀನಾ ವೈದ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀಧರ ಮೊಗೇರ, ಕಾರ್ಯದರ್ಶಿ ಪ್ರಕಾಶ ಪ್ರಭು, ಸದಸ್ಯರಾದ ಸುರೇಂದ್ರ ಭಟ್ಕಳಕರ್, ಗಣಪತಿ ಆಚಾರ್ಯ, ರಮೇಶ ಗೊಂಡ, ಗಿರಿಜಾ ದೇವಡಿಗ, ಪರಿಮಳಾ ಶೇಟ್, ಅರ್ಚಕ ಪ್ರಮೋದ ಭಟ್ಟ, ಪ್ರಮುಖರಾದ ಶಿವರಾಮ ನಾಯ್ಕ, ಶಂಕರ ಹೆಬಳೆ, ರಾಜೇಶ ನಾಯಕ, ಪ್ರದೀಪ ಪೈ, ಬಿಜೆಪಿ ಪ್ರಮುಖರಾದ ಲಕ್ಷ್ಮೀನಾರಾಯಣ ನಾಯ್ಕ, ಶಿವಾನಿ ಶಾಂತಾರಾಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮುಂತಾದವರು ಇದ್ದರು.ರಥೋತ್ಸವಕ್ಕೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥ ಎಳೆಯುವ ಪೂರ್ವದಲ್ಲಿ ವರ್ಷಂಪ್ರತಿಯಂತೆ ಈ ಸಲವೂ ಕೂಡ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯದೊಂದಿಗೆ ಮುಸ್ಲಿಂ ಸಮುದಾಯದ ಚರ್ಕಿನ್ ಕುಟುಂಬ, ಜೈನ ಕುಟುಂಬ ಮತ್ತು ಪ್ರಭು ಕುಟುಂಬದವರಿಗೆ ಜಾತ್ರೆಗೆ ಆಗಮಿಸುವಂತೆ ಆಮಂತ್ರಣ ನೀಡಿದರು.