ಚೆಸ್ಕಾಂ ನಿರ್ಲಕ್ಷ್ಯ: ಕತ್ತಲಲ್ಲಿ ಮಲೆನಾಡ ಹಳ್ಳಿಗಳು

| Published : Jun 16 2024, 01:45 AM IST

ಸಾರಾಂಶ

ಮಳೆಗಾಲದ ಪೂರ್ವಸಿದ್ಧತೆ ನಡೆಸದ ವಿದ್ಯುತ್‌ನ ಚೆಸ್ಕಾಂ ಇಲಾಖೆಯಿಂದಾಗಿ ವಾರಪೂರ್ತಿ ಮಲೆನಾಡಿನ ಗ್ರಾಮಗಳು ಕತ್ತಲಲ್ಲಿ ಕಳೆಯುವಂತಾಗಿದೆ. ಮಳೆಗಾಲ ಪೂರ್ವ ವಿದ್ಯುತ್ ತಂತಿ ಸಮೀಪದ ಮರ ಹಾಗೂ ಮರದ ರೆಂಬೆಗಳನ್ನು ತೆರವುಗೊಳಿಸದೆ ಜಡಿ ಮಳೆಗೆ ಈಗಾಗಲೇ ಕಸಬಾ, ಹಾನುಬಾಳ್ ಹಾಗೂ ಹೆತ್ತೂರು ಹೋಬಳಿಯ ಸುಮಾರು ಇಪ್ಪತ್ತಕ್ಕೂ ಅಧಿಕ ಗ್ರಾಮಗಳು ವಾರಗಳಿಂದಲೂ ವಿದ್ಯುತ್ ಕಡಿತಗೊಂಡಿದೆ.

ಮಳೆಗಾಲದಲ್ಲಿ ಯಾವುದೇ ಪೂರ್ವ ಸಿದ್ಧತೆ ನಡೆಸದ ಇಲಾಖೆ । ಗುಡ್ಡಗಾಡು, ಅರಣ್ಯ ಮಧ್ಯೆ ಹಾದು ಹೋಗಿರುವ ಶೇ.70 ರಷ್ಟು ತಂತಿಗಳು

ಶ್ರೀವಿದ್ಯಾಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮಳೆಗಾಲದ ಪೂರ್ವಸಿದ್ಧತೆ ನಡೆಸದ ಚೆಸ್ಕಾಂ ಇಲಾಖೆಯಿಂದಾಗಿ ವಾರಪೂರ್ತಿ ಮಲೆನಾಡಿನ ಗ್ರಾಮಗಳು ಕತ್ತಲಲ್ಲಿ ಕಳೆಯುವಂತಾಗಿದೆ.

ಹೌದು ತಾಲೂಕಿನಲ್ಲಿ ಸುಮಾರು ೧೯೦೦ ಕಿ.ಮೀ.ಗೂ ಅಧಿಕ ವಿದ್ಯುತ್ ಲೈನ್‌ಗಳು ಹರಡಿಕೊಂಡಿದ್ದು ಈ ವಿದ್ಯುತ್ ಲೈನ್‌ಗಳ ಪೈಕಿ ಶೇ. ೭೦ ರಷ್ಟು ವಿದ್ಯುತ್ ತಂತಿಗಳು ಗುಡ್ಡಗಾಡು, ಕಾಫಿತೋಟ ಹಾಗೂ ಅರಣ್ಯದ ಮಧ್ಯೆ ಹಾದು ಹೋಗಿವೆ. ಹೀಗೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಮೇಲೆ ಪ್ರತಿವರ್ಷ ಮಳೆಗಾಲದಲ್ಲಿ ಮರಗಳು ಉರುಳುವುದು ಸಹಜ. ಇದಕ್ಕಾಗಿ ಮಳೆಗಾಲ ಪೂರ್ವ ವಿದ್ಯುತ್ ತಂತಿ ಸಮೀಪದ ಮರ ಹಾಗೂ ಮರದ ರೆಂಬೆಗಳನ್ನು ತೆರವುಗೊಳಿಸುವ ಕೆಲಸಕ್ಕೆ ಇಲಾಖೆ ಹೆಚ್ಚಿನ ಒತ್ತು ನೀಡುವ ಮೂಲಕ ಸಂಭವನೀಯ ಅನಾಹುತ ತಪ್ಪಿಸುತ್ತದೆ. ಆದರೆ, ಈ ಬಾರಿ ಇಂತಹ ಕಾರ್ಯ ಸಾಕಷ್ಟು ಪ್ರದೇಶಗಳಲ್ಲಿ ನಡೆಯದಿರುವುದರಿಂದ ಜೂನ್ ಮೊದಲ ದಿನದಿಂದ ಸುರಿಯುತ್ತಿರುವ ಜಡಿ ಮಳೆಗೆ ಈಗಾಗಲೇ ಕಸಬಾ, ಹಾನುಬಾಳ್ ಹಾಗೂ ಹೆತ್ತೂರು ಹೋಬಳಿಯ ಸುಮಾರು ಇಪ್ಪತ್ತಕ್ಕೂ ಅಧಿಕ ಗ್ರಾಮಗಳು ವಾರಗಳಿಂದಲೂ ವಿದ್ಯುತ್ ಇಲ್ಲದೆ ದಿನದೂಡುತ್ತಿದ್ದು ವಿದ್ಯುತ್ ಲೈನ್ ದುರಸ್ತಿಪಡಿಸುವ ಕೆಲಸಕ್ಕೆ ನೌಕರರಿದ್ದರೂ ಅಗತ್ಯ ಪರಿಕರಗಳ ಕೊರತೆ ಕಾರಣ ಸಕಾಲಕ್ಕೆ ವಿದ್ಯುತ್ ಲೈನ್ ದುರಸ್ತಿ ಕೆಲಸವಾಗುತ್ತಿಲ್ಲ ಎಂದು ದೂರಲಾಗಿದೆ.

ತುಂಡಾಗಿ ಬೀಳುತ್ತಿವೆ ತಂತಿಗಳು:

ಕಾಡಾನೆ ತವರು ಹಾಗೂ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ತಾಲೂಕಿನಲ್ಲಿ ವಿದ್ಯುತ್ ಕಂಬಗಳನ್ನು ೮ ಮೀಟರ್‌ನಿಂದ ೯ ಮೀಟರ್‌ಗೆ ಎತ್ತರಿಸಬೇಕು ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಹಾಕಿರುವ ೪ ಎಸಿಆರ್ ತಂತಿಗಳನ್ನು ಬದಲಿಸಿ ರ್‍ಯಾಬಿಟ್ ಕಂಡಕ್ಟರ್ ೧ಎಸಿಎಸ್‌ಆರ್ ತಂತಿಗಳನ್ನು ಹಾಕಬೇಕು ಎಂಬ ಸರ್ಕಾರದ ಯೋಜನೆ ಜಾರಿಯಾಗಿ ಅರ್ಧ ದಶಕಗಳೇ ಕಳೆಯುತ್ತಿದ್ದರೂ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಇಂದಿಗೂ ವಿದ್ಯುತ್ ಕಂಬಗಳನ್ನು ಬದಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿಲ್ಲ. ೪ ಎಸಿಎಸ್‌ಆರ್ ವಿದ್ಯುತ್ ತಂತಿಗಳು ತಮ್ಮ ಸತ್ವ ಕಳೆದುಕೊಂಡು ಅಲ್ಲಲ್ಲಿ ತುಂಡಾಗಿ ಬೀಳುತ್ತಿದ್ದು ಜನರ ಪ್ರಾಣ ಭಯದಲ್ಲೆ ಜಮೀನುಗಳಿಗೆ ಹೋಗಿ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೊಮ್ಮನಕೆರೆ ಗ್ರಾಮದಲ್ಲಿ ಹಸು ಹಾಗೂ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಇತ್ತೀಚಿನ ವರ್ಷದಲ್ಲಿ ನಡೆದಿದೆ.

ಖಾಸಗಿಯವರಿಗೊಂದು ಇಲಾಖೆಗೊಂದು ನ್ಯಾಯ: ಖಾಸಗಿ ವ್ಯಕ್ತಿಗಳು ಅಥಾವ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುವ ವೇಳೆ ಕಡ್ಡಾಯವಾಗಿ ರ್‍ಯಾಭಿಟ್ ಕಂಡಕ್ಟರ್ ೧ ಎಸಿಎಸ್‌ಆರ್ ತಂತಿಗಳನ್ನೆ ಬಳಸ ಬೇಕು. ಆರ್‌ಸಿಸಿ ಕಂಬಗಳನ್ನೆ ಹಾಕಬೇಕು ಹಾಗೂ ಟ್ರಾನ್ಸ್‌ಪಾರಂ ಸುತ್ತ ಸುರಕ್ಷತೆಯ ದೃಷ್ಟಿಯಿಂದ ತಂತಿ ಬೇಲಿ ನಿರ್ಮಿಸ ಬೇಕು ಎಂಬೆಲ್ಲ ನಿಯಮಗಳು ಅನ್ವಯವಾಗುತ್ತದೆ. ಆದರೆ, ಇಲಾಖೆಯೆ ಕೆಲಸ ನಿರ್ವಹಿಸುವ ವೇಳೆ ಬಳಕೆಯಲ್ಲಿ ಇಲ್ಲದ ೮ ಮೀಟರ್ ಪಿಸಿಎಸ್ ಕಂಬ ೪ ಎಸಿಎಸ್‌ರ್ ತಂತಿ ಸೇರಿದಂತೆ ತಮ್ಮ ಗೋಧಮಿನಲ್ಲಿ ಸಂಗ್ರಹವಿರುವ ಸಮಾಗ್ರಿಗಳಿಂದ ಕೆಲಸ ಮುಗಿಸುತ್ತಿದ್ದು ಟ್ರಾನ್ಸ್‌ಫಾರಂರ್ ನಿಂದ ಜನರ ರಕ್ಷಿಸುವ ಯಾವ ಮುಂಜಾಗ್ರತೆಯು ಇಲ್ಲದಾಗಿದೆ.

ಕರೆ ಸ್ವೀಕರಸದ ಅಧಿಕಾರಿಗಳು:

ಹಿಂದೆ ಪ್ರಬಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ ನಿರಂಜನ್ ಎಂಬ ಅಧಿಕಾರಿ ಸೇರಿದಂತೆ ಸಾಕಷ್ಟು ಅಧಿಕಾರಿಗಳು ಸಾರ್ವಜನಿಕರ ಕರೆ ಸ್ವೀಕರಿಸುವುದಿಲ್ಲ ಎಂಬ ದೂರುಗಳಿದ್ದು ಈ ಸಂಬಂಧ ಇಲಾಖೆಯ ಮುಂಭಾಗ ಸಾಕಷ್ಟು ವಾಗ್ವದಗಳು ನಡೆದಿವೆ.

ಈ ಸಂಬಂದ ಹೇಳಿಕೆ ಪಡೆಯಲು ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮೊಬೈಲ್ ನಂಬರ್‌ಗೆ ಸಾಕಷ್ಟು ಬಾರಿ ಪತ್ರಿಕೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಅಧಿಕಾರಿಗಳು ಕರೆಸ್ವೀಕರಿಸುವುದಿಲ್ಲ. ಲೈನ್ ಸಮೀಪ ಮರದ ರೆಂಬೆಗಳನ್ನು ಕಡಿಯದ ಪರಿಣಾಮ ಕಳೆದ ವಾರದ ಜಡಿಮಳೆಗೆ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ವಾರಗಳ ಕಾಲ ವಿದ್ಯುತ್ ಕಾಣೆಯಾಗಿತ್ತು.

ಸಾ.ಸು.ವಿಶ್ವನಾಥ್. ರೈತ ಸಂಘದ ಮುಖಂಡ.