ಚೆಸ್: ಮಿಲನ್‌ಗೌಡ, ಭಾನುಪ್ರಸಾದ್‌ಗೆ ಉತ್ತಮ ರೇಟಿಂಗ್

| Published : Feb 10 2024, 01:45 AM IST

ಸಾರಾಂಶ

ಮಂಡ್ಯ ಚೆಸ್ ಅಕಾಡೆಮಿ ವತಿಯಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳಿಗೆ ಚೆಸ್ ಕಲಿಯುವಂತೆ ಪ್ರೇರೇಪಿಸಲಾಗುತ್ತಿದೆ. ಇದಕ್ಕಾಗಿ ೪೦ ಮಹಿಳೆಯರಿಗೆ ಬೇಸಿಕ್ ಚೆಸ್ ತರಬೇತಿ ನೀಡಿ ಅವರಿಂದ ಮಕ್ಕಳಿಗೆ ಕಲಿಸಲಾಗುತ್ತಿದೆ.

ರಾಜ್ಯದಲ್ಲೇ ಅತೀ ಹೆಚ್ಚುಅಂತಾರಾಷ್ಟ್ರೀಯ ಆಟಗಾರರು ಮಂಡ್ಯದಲ್ಲಿ । ಚೆಸ್ ಕಲಿಯಲು ಸರ್ಕಾರಿ-ಖಾಸಗಿ ಶಾಲೆ ಮಕ್ಕಳಿಗೆ ಪ್ರೋತ್ಸಾಹ

ಕನ್ನಡಪ್ರಭ ವಾರ್ತೆ ಮಂಡ್ಯ

ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ ಫೆ.೧ ರಂದು ಬಿಡುಗಡೆಗೊಳಿಸಿದ ಅಂತಾರಾಷ್ಟ್ರೀಯ ರೇಟಿಂಗ್ ಪಟ್ಟಿಯಲ್ಲಿ ಮಂಡ್ಯ ಚೆಸ್ ಅಕಾಡೆಮಿಯ ೧೨ ವರ್ಷದ ಎಸ್.ಮಿಲನ್‌ಗೌಡ ಕ್ಲಾಸಿಕಲ್ ರೇಟಿಂಗ್‌ನಲ್ಲಿ ೧೦೫೯ ಹಾಗೂ ೧೧ ವರ್ಷದ ಎಂ.ಭಾನುಪ್ರಸಾದ್ ಮಿಂಚಿನ ರೇಟಿಂಗ್‌ನಲ್ಲಿ ೧೧೪೪ನೇ ಸ್ಥಾನ ಪಡೆದಿದ್ದಾರೆ ಎಂದು ಅಕಾಡೆಮಿಯ ಜಂಟಿ ಕಾರ್ಯದರ್ಶಿ ಎನ್. ಮಾಧುರಿ ಜೈನ್ ಹೇಳಿದರು.

ಇವರಿಬ್ಬರೂ ಬೆಂಗಳೂರಿನಲ್ಲಿ ಜ.೨೨ರಂದು ಅಂತಾರಾಷ್ಟ್ರೀಯ ಮಿಂಚಿನ ಚೆಸ್ ಹಾಗೂ ಜ.೨೩ ರಿಂದ ೨೬ರವರೆಗೆ ನಡೆದ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಪಂದ್ಯಾವಳಿಗೆ ವಿವಿಧ ದೇಶಗಳಿಂದ ಸುಮಾರು ೭೦೦ ಸ್ಪರ್ಧಿಗಳು ಆಗಮಿಸಿದ್ದರು. ಮಂಡ್ಯ ಚೆಸ್ ಅಕಾಡೆಮಿಯು ರಾಜ್ಯದಲ್ಲೇ ಅತಿ ಹೆಚ್ಚಿನ ೮೮ ಅಂತಾರಾಷ್ಟ್ರೀಯ ರೇಟಿಂಗ್ ಆಟಗಾರರನ್ನು ಹೊಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ತರಬೇತಿ

ಮಂಡ್ಯ ಚೆಸ್ ಅಕಾಡೆಮಿ ವತಿಯಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳಿಗೆ ಚೆಸ್ ಕಲಿಯುವಂತೆ ಪ್ರೇರೇಪಿಸಲಾಗುತ್ತಿದೆ. ಇದಕ್ಕಾಗಿ ೪೦ ಮಹಿಳೆಯರಿಗೆ ಬೇಸಿಕ್ ಚೆಸ್ ತರಬೇತಿ ನೀಡಿ ಅವರಿಂದ ಮಕ್ಕಳಿಗೆ ಕಲಿಸಲಾಗುತ್ತಿದೆ. ಹಾಲಿ ಸರ್ಕಾರಿ ಶಾಲೆಗಳಲ್ಲಿ ೫೦ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ೨ ಸಾವಿರ ಮಕ್ಕಳು ಚೆಸ್ ಕಲಿಯುತ್ತಿದ್ದಾರೆ. ಒಂದು ಮಗುವಿಗೆ ತಿಂಗಳಿಗೆ ೪೦ ರು. ಗಳನ್ನು ಶುಲ್ಕವಾಗಿ ಪಡೆಯಲಾಗುತ್ತಿದೆ. ಚೆಸ್ ಆಟ ಕಲಿಯುವುದರಿಂದ ಭವಿಷ್ಯದಲ್ಲಿ ಉತ್ತಮ ಆಟಗಾರರಾಗಬಹುದು. ಉದ್ಯೋಗ ಸೃಷ್ಟಿಸಿಕೊಳ್ಳಬಹುದು. ಚೆಸ್ ಆಟಗಾರರಿಗೆ ಉದ್ಯೋಗವಕಾಶಗಳಲ್ಲಿ ಶೇ.೫ ಕೃಪಾಂಕ ಸಿಗಲಿದೆ ಎಂದೂ ಅವರು ಹೇಳಿದರು.

ಆದಿ ಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ರಾಜ್ಯಾದ್ಯಂತ ೪೦೦ ಶಾಲೆಗಳಲ್ಲಿ ಮಕ್ಕಳಿಗೆ ಚೆಸ್ ಕಲಿಸುವುದಕ್ಕೆ ಆಸಕ್ತಿ ತೋರಿದ್ದಾರೆ. ಚೆಸ್ ಆಟದಲ್ಲಿ ಮಂಡ್ಯ ರಾಷ್ಟ್ರದ ಗಮನ ಸೆಳೆಯುತ್ತಿದೆ. ಇಲ್ಲಿ ನಮಗೆ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಪಂದ್ಯಾವಳಿ ಆಯೋಜಿಸಬೇಕೆಂಬ ಕನಸಿದೆ. ಆದರೆ, ಸೌಲಭ್ಯಗಳ ಕೊರತೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

-------------

೯ಕೆಎಂಎನ್‌ಡಿ-೫

ಮಂಡ್ಯ ಚೆಸ್ ಅಕಾಡೆಮಿ ಜಂಟಿ ಕಾರ್ಯದರ್ಶಿ ಮಾಧುರಿ ಜೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.