ಚೆಸ್‌ದಿಂದ ಏಕಾಗ್ರತೆ, ಜ್ಞಾಪಕ ಶಕ್ತಿ ವೃದ್ಧಿ: ಶಾಸಕ ಸತೀಶ ಸೈಲ್‌

| Published : Jan 07 2025, 12:32 AM IST

ಸಾರಾಂಶ

ಚೆಸ್ ಪಾರ್ಕ್ ಉಪಯೋಗವನ್ನು ಎಲ್ಲರೂ ಪಡೆಯಬೇಕು. ಚೆಸ್ ಕೇವಲ ಆಟವಲ್ಲ, ಮೈಂಡ್ ಗೇಮ್ ಆಟವಾಗಿದ್ದು, ಯಾವ ಹಂತದಲ್ಲಿ ಯಾವ ಕಾಯಿ ಮುನ್ನಡೆಸಬೇಕು? ಯಾವ ರೀತಿ ಆಡಬೇಕು? ಎನ್ನುವುದರ ಯೋಜನೆ ರೂಪಿಸಿ ಆಡುವ ಆಟವಾಗಿದೆ.

ಕಾರವಾರ: ಬಾಲ್ಯದಿಂದಲೇ ಚೆಸ್ ಆಡುವುದರಿಂದ ಮಕ್ಕಳಲ್ಲಿ ಕಲಿಕೆ, ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಂದ ವಯೋವೃದ್ಧರವರೆಗೂ ಚೆಸ್ ಪಾರ್ಕ್ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.ಸೋಮವಾರ ತಾಲೂಕಿನ ಚಿತ್ತಾಕುಲ ಗ್ರಾಪಂ ವ್ಯಾಪ್ತಿಯ ಮರಠಾ ಶಾಲೆ ಆವರಣದಲ್ಲಿ ಜಿಪಂ, ತಾಪಂ ಹಾಗೂ ಚಿತ್ತಾಕುಲ ಗ್ರಾಪಂ ಸಹಯೋಗದಿಂದ ಚಿತ್ತಾಕುಲ ಚೆಸ್ ಕ್ಲಬ್(ಸಿ- 3) ಮತ್ತು ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿ, ಚೆಸ್ ಆಡುವ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದ್ದು, ಸ್ಥಳೀಯ ಎಲ್ಲ ವಯೋಮಾನದವರು ಈ ಪಾರ್ಕ್‌ಗೆ ಬಂದು ಚೆಸ್ ಆಡುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಅನೇಕ ಯೋಜನೆಗಳ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯ ಮಾಡಬೇಕಾದರೆ ಆಕ್ಷೇಪಣೆ ಮಾಡುವುದು ಒಳೆಯದಲ್ಲ. ಅಭಿವೃದ್ಧಿ ಹೊಂದಿದಾಗ ಮಾತ್ರ ಸ್ಥಳಿಯರಿಗೆ ಉದ್ಯೋಗವಕಾಶ ದೊರೆಯಲು ಸಾಧ್ಯ. ಆದ್ದರಿಂದ ಅಭಿವೃದ್ಧಿ ಕಾರ್ಯದಲ್ಲಿ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದಾಗ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಚೆಸ್ ಪಾರ್ಕ್ ಉಪಯೋಗವನ್ನು ಎಲ್ಲರೂ ಪಡೆಯಬೇಕು. ಚೆಸ್ ಕೇವಲ ಆಟವಲ್ಲ, ಮೈಂಡ್ ಗೇಮ್ ಆಟವಾಗಿದ್ದು, ಯಾವ ಹಂತದಲ್ಲಿ ಯಾವ ಕಾಯಿ ಮುನ್ನಡೆಸಬೇಕು? ಯಾವ ರೀತಿ ಆಡಬೇಕು? ಎನ್ನುವುದರ ಯೋಜನೆ ರೂಪಿಸಿ ಆಡುವ ಆಟವಾಗಿದೆ. ಈ ಆಟ ಜೀವನಕ್ಕೂ ಅನ್ವಯವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ಆಡಳಿತ ವ್ಯವಸ್ಥೆಯಲ್ಲಿ ಎಲ್ಲರ ಸಹಕಾರವಿದ್ದಾಗ ಮಾತ್ರ ವಿನೂತನ ರೀತಿಯ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಸಾಧ್ಯ. ಎಲ್ಲರ ಸಹಕಾರದಿಂದ ಚೆಸ್‌ ಪಾರ್ಕ್ ನಿರ್ಮಾಣವಾಗಿದೆ ಎಂದರು.

ಚೆಸ್ ಕ್ರೀಡೆಗೆ ಉತ್ತೇಜನ ನೀಡಲು ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ, ಕುಮಟಾ ತಾಲೂಕಿನ ಹೆಗಡೆ ಹಾಗೂ ಕಾರವಾರ ತಾಲೂಕಿನ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಚೆಸ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕಡೆ ಮಾಡುವ ಉದ್ದೇಶವಿದೆ ಎಂದರು.

ಉಪವಿಭಾಗಾಧಿಕಾರಿ ಕನಿಷ್ಕ, ಜಿಪಂ ನಿವೃತ್ತ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ತಾಪಂ ಆಡಳಿತಾಧಿಕಾರಿ ಸೋಮಶೇಖರ ಮೇಸ್ತ, ಕಾರ್ಯನಿರ್ವಹಣಾಧಿಕಾರಿ ವೀರನಗೌಡ, ಚಿತ್ತಾಕುಲ ಗ್ರಾಪಂ ಅಧ್ಯಕ್ಷ ನಿತೀನ ಬಾಂದೇಕರ, ಉಪಾಧ್ಯಕ್ಷ ಸೂರಜ ದೇಸಾಯಿ ಮತ್ತಿತರರು ಇದ್ದರು.