ಹಾಸನ ಜಿಲ್ಲೆ ಶೈಕ್ಷಣಿಕವಾಗಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದ್ದು, ಕ್ರೀಡಾ ಸಾಧಕರ ಸಂಖ್ಯೆಯು ಹೆಚ್ಚಾಗಿದೆ. ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಚೆಸ್ ಆಟವು ಬುದ್ಧಿವಂತರ ಕ್ರೀಡೆಯಾಗಿದ್ದು, ಒಂದು ವಿಭಿನ್ನ ಮತ್ತು ವಿಶೇಷ ಕ್ರೀಡೆಯಾಗಿದೆ. ಇಂತಹ ಕ್ರೀಡೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ಹೆಮ್ಮೆಯ ವಿಚಾರ ಎಂದು ಶಾಸಕ ಸ್ವರೂಪ್ ಪ್ರಕಾಶ್ ಅವರು ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಸನ, ಮಾಸ್ಟರ್ಸ್ ಪದವಿ ಪೂರ್ವ ಕಾಲೇಜು ಹಾಸನ ಸಂಯುಕ್ತಾಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಚೆಸ್ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಕ್ರೀಡೆಯಂತಹ ರಾಜ್ಯಮಟ್ಟದ ಕ್ರೀಡಾಕೂಟವನ್ನು ನಮ್ಮ ಜಿಲ್ಲೆಯಲ್ಲಿ ಆಯೋಜಿಸಿರುವುದು ನಮ್ಮ ಹೆಮ್ಮೆ ಎಂದು ತಿಳಿಸಿದರು.

ಕ್ರೀಡೆಯಲ್ಲಿ ಗೆಲುವು, ಸೋಲು ಮುಖ್ಯವಲ್ಲ, ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದು ಮುಖ್ಯ, ಆಟವು ನಮ್ಮ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು ಎಂದರು.

ಹಾಸನ ಜಿಲ್ಲೆ ಶೈಕ್ಷಣಿಕವಾಗಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದ್ದು, ಕ್ರೀಡಾ ಸಾಧಕರ ಸಂಖ್ಯೆಯು ಹೆಚ್ಚಾಗಿದೆ. ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶುಭಂ ಶುಕ್ಲಾ ಅವರು ಮಾತನಾಡಿ, ಚೆಸ್ ಅಂದರೆ ಪ್ರಾಯೋಗಿಕವಾದ ಒಂದು ಕ್ರೀಡೆಯಾಗಿದೆ, ಒಂದು ಸಣ್ಣ ತಪ್ಪು ಇಡೀ ಆಟದ ದಿಕ್ಕನ್ನೇ ಬದಲಿಸಬಹುದು. ಆದ್ದರಿಂದ ಇದು ನಮಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಸುವ ಕ್ರೀಡೆಯಾಗಿದೆ ಎಂದು ಹೇಳಿದರು.

ರಾಜ್ಯದ ೩೩ ಜಿಲ್ಲೆಗಳಿಂದ ಮಕ್ಕಳು ಭಾಗವಹಿಸಿರುವುದು ತುಂಬ ಸಂತೋಷದ ವಿಷಯ ಎಂದ ಅವರು, ಕ್ರೀಡೆಯಲ್ಲಿ ಸೋಲು, ಗೆಲುವು ಎಂಬುವುದು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪ ನಿರ್ದೇಶಕರಾದ ಗಂಗಾಧರ್ ಕೆ. ಪಿ., ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಕುಮಾರ್ ಎಚ್. ಕೆ., ಮಾಸ್ಟರ್‍ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಸ್ ಮಂಜುನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

--------