ಸಾರಾಂಶ
ಒಂದು ಕೈಯಲ್ಲಿ ತುಂಡಾದ ಹಲ್ಲು, ಇನ್ನೊಂದು ಕೈಯಲ್ಲಿ ಲಿಂಗ, ಮತ್ತೊಂದು ಕೈಯಲ್ಲಿ ಕೂಡಲಿ ಮಗದೊಂದು ಕೈಯಲ್ಲಿ ತ್ರಿಶೂಲ. ಸಿಂದೂರ ಮೈಬಣ್ಣದ ಈ ವಿಶಿಷ್ಟ ಗಣಪತಿ ಕುಲಕರ್ಣಿ ಮನೆತನಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕೆಂಪು ಗಣಪತಿಗೆ 198 ವರುಷಗಳ ಇತಿಹಾಸವಿದೆ.
ಹುಬ್ಬಳ್ಳಿ: ನಾಡಿನಾದ್ಯಂತ ಪ್ರತಿವರ್ಷವೂ ಕೆಲವೆಡೆ ಕೆಲ ಮನೆತನಗಳು ವಂಶಪಾರಂಪರಿಕವಾಗಿ ಗಣೇಶೋತ್ಸವ ಆಚರಿಸುತ್ತಿದ್ದು, ಅದರಲ್ಲಿ ಹುಬ್ಬಳ್ಳಿ ತಾಲೂಕಿನ ಛಬ್ಬಿಯಲ್ಲಿ ಕುಲಕರ್ಣಿ ಮನೆತನಗಳ ಆಚರಣೆ ದ್ವಿಶತಮಾನದ ಅಂಚಿನಲ್ಲಿದೆ.
ಸಕಲ ಸಂಕಷ್ಟ ನಿವಾರಿಸುವ ಗಣಪನ ಆರಾಧನೆಗೆ ದಿನಗಣನೆ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಛಬ್ಬಿಯ ಕುಲಕರ್ಣಿ ಮನೆತನದ 7 ಮನೆಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಒಂದು ಕೈಯಲ್ಲಿ ತುಂಡಾದ ಹಲ್ಲು, ಇನ್ನೊಂದು ಕೈಯಲ್ಲಿ ಲಿಂಗ, ಮತ್ತೊಂದು ಕೈಯಲ್ಲಿ ಕೂಡಲಿ ಮಗದೊಂದು ಕೈಯಲ್ಲಿ ತ್ರಿಶೂಲ. ಸಿಂದೂರ ಮೈಬಣ್ಣದ ಈ ವಿಶಿಷ್ಟ ಗಣಪತಿ ಕುಲಕರ್ಣಿ ಮನೆತನಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕೆಂಪು ಗಣಪತಿಗೆ 198 ವರುಷಗಳ ಇತಿಹಾಸವಿದೆ.
1821ರಲ್ಲಿ ಹಳೆ ಹುಬ್ಬಳ್ಳಿಯ ಶ್ರೀ ದತ್ತ ದೇವಸ್ಥಾನಕ್ಕೆ ಬಂದು ನೆಲೆಸಿದ ಶ್ರೀ ಕೃಷ್ಣಂದ್ರ ಸ್ವಾಮಿಗಳು 1827ರ ಸುಮಾರಿಗೆ ಛಬ್ಬಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಶಾನಭೋಗ ತಮ್ಮಪ್ಪನವರಿಂದ ಪಾದಪೂಜೆ, ಭಿಕ್ಷೆ ಸ್ವೀಕರಿಸಿದ ಗುರುಗಳ ಆದೇಶದಂತೆ ತಮ್ಮಪ್ಪನವರು ಪ್ರತಿವರ್ಷ ಶ್ರೀ ಗಣೇಶೋತ್ಸವ ಆರಂಭಿಸಿದರು. ಸಂತಾನವಿಲ್ಲದ ತಮ್ಮಪ್ಪನವರಿಗೆ ಗಣೇಶೋತ್ಸವ ಆಚರಣೆ ಆರಂಭಿಸಿದ ಬಳಿಕ ಸಂತಾನ ಭಾಗ್ಯ ಒದಗಿತು. ತಮ್ಮಪ್ಪನವರಿಂದ ಆರಂಭವಾದ ಗಣೇಶೋತ್ಸವ ಈಗ ಏಳನೇ ತಲೆಮಾರಿನ ವರೆಗೂ ಮುಂದುವರೆದಿದೆ.ಆಚರಣೆ ಹೇಗೆ?
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಸಂಜೆ 6 ಗಂಟೆ ನಂತರ ಪಲ್ಲಕ್ಕಿಯಲ್ಲಿ ವಾದ್ಯ ವೈಭವದೊಂದಿಗೆ ಮೂರ್ತಿಯುನ್ನು ತಂದು ವಿಶೇಷ ಮಂಟಪಗಳಲ್ಲಿ ಕೂಡಿಸಲಾಗುತ್ತದೆ. ಮನೆಯ ಯಜಮಾನ ಪುಣ್ಯಾಹವಾಚನದೊಂದಿಗೆ ವಿದ್ಯುಕ್ತವಾಗಿ ಗಣಪತಿ ಪ್ರತಿಷ್ಠಾಪಿಸಲಾಗುತ್ತದೆ. ವೈದಿಕರಿಂದ ಪ್ರತಿದಿನ ಗಣಪತಿಗೆ ಅಭಿಷೇಕ, ಪಾರಾಯಣ, ನೈವೇದ್ಯ, ಆರತಿ, ಮಂತ್ರಪುಷ್ಪ ಸೇವೆಗಳು ನಡೆಯುತ್ತವೆ. ರಾತ್ರಿ ವೇದೋಕ್ತ ಮಂತ್ರಪುಷ್ಪ ಹಾಗೂ ಸಂಗೀತ ಸೇವೆಗಳು ಜರುಗುತ್ತದೆ. ಮೂರನೇ ದಿನ ರಾತ್ರಿ 12ರ ನಂತರ ಶಾಸ್ರೋಕ್ತವಾಗಿ ಮೆರವಣಿಗೆಯಲ್ಲಿ ಕೊಂಡೊಯ್ದು ಬಾವಿಯಲ್ಲಿ ವಿಸರ್ಜಸಲಾಗುತ್ತದೆ.ಈ ಬಾರಿಯೂ ಗಣಪತಿ ದರುಶನಕ್ಕೆ ಬರುವ ಭಕ್ತಾದಿಗಳಿಗೆ ಗ್ರಾಮ ಪಂಚಾಯಿತಿ ಎಲ್ಲ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಭಕ್ತರಿಗೆ ಉಚಿತ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ.
24ಎಚ್‌ಯುಬಿ21, 21ಎಛಬ್ಬಿ ಗಣಪತಿ.