ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ವಿವಿಧತೆಯಲ್ಲಿ ಏಕತೆ ಸಾರುವ, ಭಾವೈಕ್ಯತೆಯ ಭಗವಂತ ಎಂದು ಪ್ರಸಿದ್ಧಿ ಹೊಂದಿರುವ ಛಟ್ಟಿಯ ಸುಮಾರು ಏಳು ದಿನಗಳ ಕಾಲ ನಡೆಯುವ ರಾವುತರಾಯನ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.ಪಟ್ಟಣದ ರಾವುತರಾಯನ ದೇವಸ್ಥಾನದಿಂದ ಪಲ್ಲಕ್ಕಿ ಮಹೋತ್ಸವದಲ್ಲಿ ಡೊಳ್ಳು ಕುಣಿತ ಮೂಲಕ ನೂರಾರು ಭಕ್ತರು ಸೇರಿ ಏಳುಕೋಟಿ- ಏಳು ಕೋಟಿಗೆ ಉಘೇ.. ಎಂಬ ಘೋಷಣೆಯೊಂದಿಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಹತ್ತಿರ ಮಲ್ಲಯ್ಯನ ದೇವಸ್ಥಾನಕ್ಕೆ ಹೋಗುವ ಮೂಲಕ ಛಟ್ಟಿಯ ಅಮಾವಾಸ್ಯೆಯ ಮರುದಿನ ಸುಮಾರು ಏಳು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ನೂರಾರು ಭಕ್ತರ ಸಂಭ್ರಮದ ನಡುವೆ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳು ವಿಧಿ-ವಿಧಾನಗಳ ಮೂಲಕ ನಡೆದವು. ಛಟ್ಟಿಯ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿಯಲ್ಲಿ ರಾವುತರಾಯನ ದೇವರ ಮೂರ್ತಿ ಮೆರವಣಿಗೆಯಲ್ಲಿ ಮಲ್ಲಯ್ಯನ ದೇವಸ್ಥಾನದವರೆಗೆ ನೂರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಛಟ್ಟಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಮಲ್ಲಯ್ಯನ ದೇವಸ್ಥಾನದಲ್ಲಿ ಧರ್ಮ ಬಿಟ್ಟು ನಡೆದರೆ ಉಳಿಗಾಲವಿಲ್ಲ, ಧರ್ಮದಿಂದ ನಡೆಯಿರಿ ಎಂದು ಭವಿಷ್ಯವಾಣಿ ನುಡಿದರು. ನಂತರ ಷಷ್ಟಿ ತಿಥಿ ಎಂದು ಊರಿನ ಜನರಿಗೆ ಪ್ರಸಾದ ವ್ಯವಸ್ಥೆ ನಡೆಯುತ್ತದೆ.
ಕಳೆದ ಮಹಾನವಮಿ ಜಾತ್ರಾ ಮಹೋತ್ಸವದಲ್ಲಿ ಸುಮಾರು ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ರಾವುತರಾಯ ದೇವರ ಮೂರ್ತಿ ಛತ್ರಿ ಚಾಮರಗಳೊಂದಿಗೆ ಅಶ್ವಾರೂಢನಾಗಿ ಮಲ್ಲಯ್ಯನ ದೇವಸ್ಥಾನಕ್ಕೆ ಆಗಮಿಸುವ ಮೂಲಕ ರಾವುತರಾಯ ಗಂಗೆ ಮಾಳಮ್ಮನವರ ಮದುವೆಯ ಸಾಂಪ್ರಾದಾಯಿಕ ಪ್ರಸಂಗಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೋಡಲು ರಾಜ್ಯ ಅಂತರ್ ರಾಜ್ಯದಿಂದ ಸುಮಾರು ಲಕ್ಷಾಂತರ ಜನ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.ಛಟ್ಟಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಸುಮಾರು ಏಳು ದಿನಗಳ ಕಾಲ ಸಿಂದಗಿ ಎಪಿಎಂಸಿ ಸಮಿತಿ ಹಾಗೂ ಶ್ರೀ ರಾವುತರಾಯ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಜಾನುವಾರುಗಳ ಜಾತ್ರೆ ಪಟ್ಟಣದ ರಾವುತರಾಯ ಮಲ್ಲಯ್ಯನ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ನಡೆಯುತ್ತದೆ.
ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಬಿ.ಕೆ.ಪಾಟೀಲ, ಪ್ರಮೋದ ನಾಡಗೌಡ, ಮುಖಂಡರುಗಳಾದ ಮಲ್ಲು ಜಮಾದಾರ, ಕಾಶೀನಾಥ ತಳಕೇರಿ, ಶಂಕ್ರಪ್ಪ ಪೂಜಾರಿ, ರಾವುತಪ್ಪ ದೇವರಮನಿ, ಸಂಗಪ್ಪ ತಡವಲ, ರಾಮಪ್ಪ ದೇವರಮನಿ, ಗುರು ಜಡಗೊಂಡ, ಶಂಕರ ಜಮಾದಾರ, ನಿಂಗು ಜಡಗೊಂಡ, ರಮೇಶ್ ಮ್ಯಾಕೇರಿ, ಅರವಿಂದ ನಾಡಗೌಡ, ಸಂಜೀವ ನಾಡಗೌಡ ಸೇರಿ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.