ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಇರುವ ಪುರಸಭೆಯ ವಾಣಿಜ್ಯ ಸಂರ್ಕೀಣದ ಹಿಂದೆ ಕೋಳಿ ಮಾಂಸ ಮಾರಾಟ ಮಾಡುತ್ತಿರುವ ಅಂಗಡಿಯನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಿರುವ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ವಿರುದ್ಧ ಪುರಸಭೆಯ ಮುಂಭಾಗದಲ್ಲಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆಯಿತು.
ಈ ವೇಳೆ ನೂರಅಹ್ಮದ್ ಮಕಾಂದಾರ ಮಾತನಾಡಿ, ಪುರರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ಅವರು ನಮ್ಮ ಮಾಲ್ಕಿ ವಹಿವಾಟಿನ ಜಾಗೆಯಲ್ಲಿ ಕೋಳಿ ಮಾಂಸ ಮಾರಾಟ ಮಾಡುವ ಅಂಗಡಿಯನ್ನು ವ್ಯಾಪಾರಿ ಲೈಸೆನ್ಸ ಪಡೆದುಕೊಂಡು ವ್ಯಾಪಾರ ಮಾಡುತ್ತಿರುವುದು ಗೊತ್ತಿದ್ದರೂ ಅಧಿಕಾರಿಗಳು ಕೆಲ ಮುಖಂಡರ ಕುಮ್ಮಕ್ಕಿನಿಂದ ನಮ್ಮ ಅಂಗಡಿಯನ್ನು ತೆರವುಗೊಳಿಸುವಂತೆ ಪದೆ ಪದೆ ನೋಟಿಸ್ ನೀಡುವ ಮೂಲಕ ನಮಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಖಂಡನೀಯ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಪುರಸಭೆಯ ವಾಣಿಜ್ಯ ಮಳಿಗೆಯಲ್ಲಿ ಲೈಸೆನ್ಸ ಇಲ್ಲದೆ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದು ನಮ್ಮ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ಆಗ್ರಹಿಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪ್ರತಿಭಟನಾ ನಿರತರ ಹತ್ತಿರಕ್ಕೆ ಆಗಮಿಸಿದ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ಕೋಳಿ ಮಾಂಸ ಮಾರಾಟ ಮಾಡುವ ಲೈಸೆನ್ಸ್ ಹೊಂದಿರುವ ತಮಗೆ ನಾವು ಯಾವುದೇ ರೀತಿಯ ಕಿರುಕುಳ ನೀಡುತ್ತಿಲ್ಲ, ಅಲ್ಲದೆ ಕೋಳಿ ಮಾಂಸದ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲವೆಂಬ ದೂರು ಬಂದ ಹಿನ್ನೆಲೆಯಲ್ಲಿ ನಾವು ನಿಮಗೆ ನೋಟಿಸ್ ನೀಡಿದ್ದೇವೆ. ನಿಮ್ಮ ಮಾಲ್ಕಿ ಜಾಗೆಯ ಕುರಿತು ವ್ಯಾಜ್ಯದ ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ಅದರ ಬಗ್ಗೆ ನಮ್ಮದು ಯಾವುದೇ ತಕರಾರು ಇಲ್ಲ, ಕೋಳಿ ಮಾಂಸ ಮಾರಾಟ ಮಾಡಲು ನಾವು ಅಭ್ಯಂತರ ಮಾಡುವುದಿಲ್ಲವೆಂದು ಇದೇ ವೇಳೆ ಸ್ಪಷ್ಟಪಡಿಸಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟು ತೆರಳಿದ ಘಟನೆ ನಡೆಯಿತು.
ನನ್ನುಸಾಬ ಮಕಾಂದಾರ, ಸೈಯದ್ ಮಕಾಂದಾರ, ಮಹ್ಮದ್ ಹನೀಫ್ ಮಕಾಂದಾರ, ಮಹ್ಮದ್ ಸಾಧಿಕ್ ಮಕಾಂದಾರ, ಫೀರಾಂಬೀ ಮಕಾಂದಾರ, ಅಮೀನಾಬೀ ಮಕಾಂದಾರ, ಜುಬೇದಾ ಮಕಾಂದಾರ, ಜಬೀನಾ ಮಕಾಂದಾರ, ಪರ್ವೀನ್ ಮಕಾಂದಾರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.