ಪುತ್ತನಪುರದಲ್ಲಿ ಕಡಲೆ ಬೆಳೆ ಕ್ಷೇತ್ರೋತ್ಸವ

| Published : Jan 31 2025, 12:47 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಪುತ್ತನಪುರ ಗ್ರಾಮದಲ್ಲಿ ಕಡಲೆ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಷ್ಟ್ರೀಯ ಕೃಷಿ ಹವಾಮಾನ ಸ್ಥಿತಿಸ್ಥಾಪಕ ಆವಿಷ್ಕಾರಗಳ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಪುತ್ತನಪುರ ಗ್ರಾಮದಲ್ಲಿ ಕಡಲೆ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿ ಡಾ.ಶ್ರುತಿ, ಎಂ.ಕೆ.ಕಡಲೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳಾದ ಸೂಕ್ತ ತಳಿ ಹಾಗೂ ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ, ಸರಿಯಾದ ಅಂತರದಲ್ಲಿ ಬಿತ್ತನೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ ಇವುಗಳ ಬಗ್ಗೆ ಮಾಹಿತಿ ಒದಗಿಸಿದರು. ಸಂದಿಗ್ಧ ಹಂತಗಳಲ್ಲಿ ಕೈಗೊಳ್ಳಬೇಕಾಗಿರುವ ಚಟುವಟಿಕೆಗಳಾದ ಕುಡಿ ಚಿವುಟುವುದು, ಲಘು ಪೋಷಕಾಂಶಗಳ ಸಿಂಪಡಣೆ ಮತ್ತು ಕಾಯಿಕೊರಕ ಹಾಗೂ ಸೊರಗು ರೋಗದ ನಿರ್ವಹಣೆ ಇವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆ ರೈತ ಮಂಜುನಾಥ್ ಮತ್ತು ರಮೇಶ್ ಅವರು ಕಡಲೆ ಬೆಳೆಯ ವೈಜ್ಞಾನಿಕ ನಿರ್ವಹಣಾ ಕ್ರಮಗಳ ಅಳವಡಿಕೆಯಿಂದ ಕಾಯಿಕೊರಕ ಕೀಟ ಮತ್ತು ಸೊರಗು ರೋಗದ ಹಾವಳಿ ಕಡಿಮೆಯಾಗಿದ್ದು, ಸರಿಯಾದ ಸಮಯದಲ್ಲಿ ಕುಡಿ ಚಿವುಟುವ ಕ್ರಮ ಅನುಸರಿಸಿರುವುದರಿಂದ ಹೆಚ್ಚಿನ ಕವಲುಗಳು ಮತ್ತು ಹೆಚ್ಚಿನ ಕಾಯಿಗಳ ಸಂಖ್ಯೆ ಕಂಡುಬಂದಿದೆ ಎಂದು ಹಿಮ್ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮ ಮಟ್ಟದ ಹವಮಾನ ವೈಪರೀತ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷ ರಾಜಶೇಖರಪ್ಪ ಮಾತನಾಡಿ, ಯೋಜನೆಯಡಿ ತಿಳಿಸಿಕೊಟ್ಟಿರುವ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು, ಅದರಲ್ಲೂ ಕಂದಕ ಬದುಗಳ ಅಳವಡಿಕೆಯಿಂದ ಮಣ್ಣಿನಲ್ಲಿ ತೇವಾಂಶ ಸಂರಕ್ಷಣೆಯಾಗಿ, ಉತ್ತಮ ಬೆಳವಣಿಗೆ ಕಂಡುಬಂದಿದ್ದು ಹೆಚ್ಚಿನ ಇಳುವರಿಯ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಮಿತಿಯ ನಿರ್ದೇಶಕ ಪುಟ್ಟಬಸವಯ್ಯ ಮತ್ತು ಸದಸ್ಯರಾದ ಚಿಕ್ಕಸಿದ್ದಯ್ಯ ಕಾರ್ಯಕ್ರಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು. ಕ್ಷೇತ್ರೋತ್ಸವದಲ್ಲಿ ಮಾದರಿ ಪ್ರಾತ್ಯಕ್ಷಿಕೆ ತಾಕುಗಳನ್ನು ಭಾಗವಹಿಸಿದ್ದ ಎಲ್ಲ ರೈತರು ವೀಕ್ಷಿಸಿ ಜಾಕಿ ತಳಿಯಲ್ಲಿ ಸೊರಗು ರೋಗದ ಭಾದೆ ಕಡಿಮೆಯಿದ್ದು, ಇದೊಂದು ಉತ್ತಮ ತಳಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಶಿವರಾಮು, ಸಿದ್ದಯ್ಯ, ಅಂಕಯ್ಯ, ದೇಸಯ್ಯ ಮತ್ತು ೪೦ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಯೋಜನೆಯ ಹಿರಿಯ ಸಂಶೋಧನಾ ಸಹಾಯಕ ಮೋಹನ್‌ಕುಮಾರ್,ಬಿ.ಎನ್ ಕಾರ್ಯಕ್ರಮವನ್ನು ಆಯೋಜಿಸಿ ನಿರ್ವಹಿಸಿದರು.