ಸಾರಾಂಶ
ಧಾರವಾಡ: ಅದು ಮುಂಗಾರು ಆಗಲಿ, ಹಿಂಗಾರಾಗಲಿ ಯಾವುದೇ ಹಂಗಾಮಿಗೆ ಈಗೀಗ ಹವಾಮಾನ ಬದಲಾವಣೆ ವಿಪರೀತ ತೊಂದರೆ ಮಾಡುತ್ತಿದೆ. ಈ ಹಿಂಗಾರಿನಲ್ಲಿ ಉತ್ತಮ ಫಸಲು ತೆಗೆಯುವ ನಿರೀಕ್ಷೆಯಲ್ಲಿದ್ದ ಧಾರವಾಡ ಭಾಗದ ರೈತರಿಗೆ ಹವಾಮಾನ ನಿರಾಸೆ ತಂದಿದೆ. ಹಿಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ತಗೆಯಬೇಕು ಎಂಬ ನಿರೀಕ್ಷೆಯಲ್ಲಿದ್ದ ಧಾರವಾಡ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಕಡಲೆ, ಜೋಳ ಬೆಳೆ ಬೆಳೆದ ರೈತರು ಕೀಟ ಬಾಧೆ ಹಾಗೂ ವಿವಿಧ ರೋಗಗಳ ಆತಂಕ ಎದುರಿಸುತ್ತಿದ್ದಾರೆ.
ಚಳಿ ಹೆಚ್ಚಾಗಿರಬೇಕಾದ ಈ ದಿನಗಳಲ್ಲಿ ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಉಂಟಾಗಿದೆ. ಜೊತೆಗೆ ಬೆಳಂಬೆಳ್ಳಗೆ ಅತಿಯಾದ ಮಂಜು ಬೀಳುತ್ತಿರುವುದರಿಂದ ಕಡಲೆ ಬೆಳೆ ಸಿಡಿ ರೋಗ, ಕಾಯಿ ಕೊರಕ, ಸೊರಗು ರೋಗದಿಂದ ಒಣಗಿ ಹೋಗುತ್ತಿದೆ. ಜೋಳ ಸಹ ಕೀಟ ಬಾಧೆಯಿಂದ ಸೊರಗುತ್ತಿದೆ.ಧಾರವಾಡ ತಾಲೂಕಿನ ಯಾದವಾಡ, ಶಿಬಾರಗಟ್ಟಿ, ಅಮ್ಮಿನಭಾವಿ, ಹೆಬ್ಬಳ್ಳಿ, ಸೋಮಾಪುರ, ಗೋವನಕೋಪ್ಪ,
ಕವಲಗೇರಿ, ಕರಡಿಗುಡ್ಡ, ಮರೇವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಡಲೆ ಅಧಿಕವಾಗಿ ಹಿಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಕಡಲೆ ಬೆಳೆಗೆ ಕೀಟಗಳ ಹಾವಳಿ ಜಾಸ್ತಿಯಾಗಿದೆ. ರೈತರು ಕೀಟಗಳ ಹತೋಟಿಗೆ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.ಕಡಲೆ ಬೆಳೆಯು ಉತ್ತರ ಕರ್ನಾಟಕ ಭಾಗದ ಮುಖ್ಯವಾದ ಹಿಂಗಾರು ದ್ವಿದಳ ಧಾನ್ಯ ಬೆಳೆಯಾಗಿದೆ.
ಅದರಲ್ಲೂ ಧಾರವಾಡ ತಾಲ್ಲೂಕಿನ ಕಪ್ಪು ಮಣ್ಣಿನ ಪ್ರದೇಶದಲ್ಲಿ ಕಡಲೆ ಬೆಳೆಯನ್ನು ಹೆಚ್ಚಾಗಿ ರೈತರು ಸಾಕಷ್ಟು ವಿಶ್ವಾಸದಿಂದ ಬಿತ್ತಿದ್ದಾರೆ. ಸದ್ಯ ಬೆಳೆಯ ಎಳೆಯ ಎಲೆಗಳ ಮೇಲೆ ಮೊಟ್ಟೆ ಕಾಣಿಸಿಕೊಂಡಿದ್ದು, ಎಲೆಯ ಭಾಗ ಒಣಗಿದೆ. ಕೀಟದ ತೀವ್ರತೆ ಇದ್ದಲ್ಲಿ ಚಿಗುರಿನ, ಎಲೆಯ ಭಾಗ ತಿಂದು ಹಾಕುತ್ತಿದೆ. ಅಲ್ಲಲ್ಲಿ ಹಸಿರು ಹುಳುಗಳು ಕಂಡು ಬಂದಿದ್ದರಿಂದ ಸಾಮೂಹಿಕ ಕ್ರಿಮಿನಾಶಕ ಸಿಂಪರಣೆ ಕ್ರಮದಿಂದ ಕೀಟ ಬಾಧೆಯನ್ನುನಿಯಂತ್ರಿಸದೇ ಇದ್ದಲ್ಲಿ ಖರ್ಚು ಮಾಡಿ ಬೆಳೆದ ಬೆಳೆ ಕೈಗೆಟುಕುವುದಿಲ್ಲ ಎನ್ನುವುದು ಕೃಷಿ ತಂತ್ರಜ್ಞರ ಹೇಳಿಕೆ.
ಕೃಷಿ ತಂತ್ರಜ್ಞರು, ಅಧಿಕಾರಿಗಳಾದ ಎಸ್.ಎ. ಗದ್ದನಕೇರಿ, ಡಾ. ಕಲಾವತಿ ಕಂಬಳಿ, ಡಾ. ಸಂತೋಷ ಒಂಟೆಅವರನ್ನೊಳಗೊಂಡ ಜಿಲ್ಲಾ ಪೀಡೆ ಸರ್ವೆಕ್ಷಣಾ ತಂಡ ಧಾರವಾಡ ತಾಲೂಕಿನ ಅಮ್ಮಿನಭಾವಿ
ಹೋಬಳಿಯ ಹೆಬ್ಬಳ್ಳಿ ಗ್ರಾಮದ ವಿವಿಧ ರೈತರ ಸಮಸ್ಯಾತ್ಮಕ ಜಮೀನುಗಳಿಗೆ ಭೇಟಿ ನೀಡಿರೈತರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಕಡಲೆ ಒಣಗುತ್ತಿದೆಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಬೆಳೆಹಾನಿಯಾಗಿತ್ತು. ಸಾಲ ಮಾಡಿ ಮೂರು ಎಕರೆ ಕಡಲೆ ಬೆಳೆದಿದ್ದು ಕೀಟಭಾದೆ ಹಾಗೂ ಮಳೆಯ ವಾತಾವರಣದಿಂದ ಕಡಲೆ ಒಣಗುತ್ತಿದೆ. ಹತೋಟಿ ಕ್ರಮವಹಿಸಿದ್ದು ಇಳುವರಿ ಕಡಿಮೆ ಆಗುವ ಭಯ ಕಾಡುತ್ತಿದೆ.
- ವಿಠ್ಠಲ್ ದಿಂಡಲಕೊಪ್ಪ, ಯಾದವಾಡ ರೈತ.ಅಲ್ಲಲ್ಲಿ ಕೀಟಧಾರವಾಡ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 32114 ಹೆಕ್ಟರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದ್ದು ಮುಖ್ಯ ಹಿಂಗಾರು ಬೆಳೆಗಳಾದ ಕಡಲೆ ಹಾಗೂ ಜೋಳದಲ್ಲಿ ಅಲ್ಲಲ್ಲಿ ಕೀಟ ಹಾಗೂ ರೋಗಗಳ ಬಾಧೆ ಕಂಡು ಬರುತ್ತಿದ್ದು ರೈತರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದ್ದೇವೆ. ರೈತರು ಅಳವಡಿಸಿಕೊಳ್ಳಬೇಕು.- ರಾಜಶೇಖರ ಅಣಗೌಡರ, ಸಹಾಯಕ ಕೃಷಿ ನಿರ್ದೇಶಕರು, ಧಾರವಾಡ