ಪ್ರಾಮಾಣಿಕ, ನೈತಿಕತೆಯ, ಆತ್ಮೀಯತೆಯ ಸ್ನೇಹಜೀವಿ ಚಿದಂಬರಾವ್ ಜಂಬೆ. ರಂಗಭೂಮಿಗೆ ಅದ್ಭುತ ಪ್ರಯೋಗಗಳನ್ನು ನೀಡಿದ್ದಾರೆ. ನಾಡಿನ, ದೇಶದ ಹಾಗೂ ಅಂತಾರಾಷ್ಟ್ರೀಯ ನಿರ್ದೇಶಕರಾಗಿ ಎಲ್ಲ ಭಾಷೆಗಳಲ್ಲೂ ಅವರ ನಾಟಕಗಳು ಕರುನಾಡು ಬಿಟ್ಟು ಹೊರನಾಡಿನಲ್ಲೂ ಯಶಸ್ಸು ಕಂಡಿವೆ.

ಧಾರವಾಡ:

ರಂಗಬದ್ಧತೆ, ರಂಗ ಶಿಸ್ತು ಮತ್ತು ಹೊಸ ಯೋಚನೆಗಳ ಹರಿಕಾರರಾಗಿ ಚಿದಂಬರರಾವ್‌ ಜಂಬೆ ಕಾಣುತ್ತಾರೆ. ಧಾರವಾಡದಲ್ಲಿ ಅವರ ವಿಧಿಶಾ ಪ್ರಹಸನ ನಾಟಕ ಸಿದ್ಧತೆ ವೇಳೆ ಅದಕ್ಕೆ ಬೇಕಾದ ವಸ್ತುವನ್ನು ನಾಟಕಕಾರರಾದ ತಮ್ಮಿಂದ ಪಡೆಯದೇ ಬಿಡಲಿಲ್ಲ ಎಂದು ನಾಟಕಕಾರ, ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಇತ್ತೀಚೆಗೆ ನಿಧನರಾದ ಖ್ಯಾತ ರಂಗ ನಿರ್ದೇಶಕ ಚಿದಂಬರ್‌ರಾವ್‌ ಜಂಬೆ ಅವರಿಗೆ ಇಲ್ಲಿಯ ರಾ.ಹ. ದೇಶಪಾಂಡೆ ಭವನದಲ್ಲಿ ನಿನಾಂಸ ವಿದ್ಯಾರ್ಥಿ ಸಮೂಹ ಆಯೋಜಿಸಿದ್ದ ನುಡಿ ನಮನದಲ್ಲಿ ಮಾತನಾಡಿದ ಅವರು, ಅವರೊಬ್ಬ ಪ್ರಯೋಗಶೀಲ ನಿರ್ದೇಶಕರು ಎಂದರು.

ಲೇಖಕಿ ಡಾ. ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಪ್ರಾಮಾಣಿಕ, ನೈತಿಕತೆಯ, ಆತ್ಮೀಯತೆಯ ಸ್ನೇಹಜೀವಿ ಚಿದಂಬರಾವ್ ಜಂಬೆ. ರಂಗಭೂಮಿಗೆ ಅದ್ಭುತ ಪ್ರಯೋಗಗಳನ್ನು ನೀಡಿದ್ದಾರೆ. ನಾಡಿನ, ದೇಶದ ಹಾಗೂ ಅಂತಾರಾಷ್ಟ್ರೀಯ ನಿರ್ದೇಶಕರಾಗಿ ಎಲ್ಲ ಭಾಷೆಗಳಲ್ಲೂ ಅವರ ನಾಟಕಗಳು ಕರುನಾಡು ಬಿಟ್ಟು ಹೊರನಾಡಿನಲ್ಲೂ ಯಶಸ್ಸು ಕಂಡಿವೆ. ಧಾರವಾಡಕ್ಕೆ ರಂಗಾಯಣ ಬರುವಲ್ಲಿ ಅವರ ಪ್ರಯತ್ನ ಹೆಚ್ಚಿದೆ ಎಂದು ಹೇಳಿದರು.

ರಂಗ ನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ವಾಸ್ತವವಾದಿ ಶೈಲಿಯ ನಾಟಕಗಳನ್ನು ಕಟ್ಟುವ ಮೂಲಕ ತನ್ನದೇ ಆದ ಛಾಪು ಮೂಡಿಸಿದವರು ಚಿದಂಬರಾವ್ ಜಂಬೆ. ರಂಗ ಶಿಕ್ಷಣದ ಶಿಸ್ತು, ಸಮಯ ಪಾಲನೆ ಅವರಿಂದ ನಾವು ಕಲಿತಿದ್ದೇವೆ. 22 ವರ್ಷಗಳ ಕಾಲ ನೀನಾಸಂನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅವರು ನಮಗೆ ರಂಗಗುರು ಎಂದರು.

ರಂಗಾಯಣ ಮಾಜಿ ನಿರ್ದೇಶಕ ಪ್ರಕಾಶ್ ಗರುಡ, ರಂಗಾಯಣದ ಪರಿಕಲ್ಪನೆಯು ಜಂಬೆ ಹಾಗೂ ಕಾರಂತರ ದೃಷ್ಟಿಯಲ್ಲಿ ಬೇರೆಯೇ ಇತ್ತು, ಆದರೆ, ಪ್ರಸ್ತುತ ಸಂದರ್ಭದಲ್ಲಿ ಯಾವ ರಂಗಾಯಣಗಳು ಆ ಪರಿಕಲ್ಪನೆ ಅಡಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಡಾ. ಬಂಡು ಕುಲಕರ್ಣಿ ಹಾಗೂ ನಟ, ನಿರ್ದೇಶಕ ಹುಲಗಪ್ಪ ಕಟ್ಟಿಮನಿ ಮಾತನಾಡಿ, ಯಾವುದೇ ನಾಟಕಗಳನ್ನು ನಿರ್ದೇಶಿಸುವ ಮೊದಲು ಅವರು ತಾವು ಮೊದಲು ಒಳಹೊಕ್ಕು ನಂತರ ವಿದ್ಯಾರ್ಥಿಗಳನ್ನು ಆ ನಾಟಕದ ಒಳನೋಟಗಳಲ್ಲಿ ತಲ್ಲಿನರಾಗುವಂತೆ, ಪಾತ್ರಗಳಲ್ಲಿ ಪ್ರವೇಶ ಮಾಡುವಂತೆ, ಆ ಪಾತ್ರಕ್ಕೆ ಜೀವ ತುಂಬುವಂತೆ ನಟಿಸಲು ಒಂದು ದಾರಿಯನ್ನು ಹಾಕಿದ ಮಹಾನ್ ನಿರ್ದೇಶಕರು ಚಿದಂಬರಾವ್ ಜಂಬೆ ಎಂದರು.

ರಂಗ ಸಂಗೀತ ಕಲಾವಿದ ರಾಘವ ಕಮ್ಮಾರ, ವಸ್ತ್ರ ವಿನ್ಯಾಸಕಿ ನೀಲಾ ನಿಂಬನಗೌಡರ, ಶುಭಾ ಜೋಶಿ, ಅಕ್ಷಯ್ ಜೋಶಿ, ಗಿರಿಜಾ ಶಕ್ಕೆ, ಎಂ.ಬಿ. ಬಿರಾದಾರ್, ಅಶೋಕ ಶೆಟ್ಟರ್, ಡಾ. ಶಿವಾನಂದ ಶೆಟ್ಟರ, ವಿನಿತ್ ಜೋಶಿ, ಬಸವರಾಜ ವಂದಾಲಿ, ದುಂಡೇಶ ಹಿರೇಮಠ, ಆಶಾ ಸೈಯದ್, ಸನ್ಮತಿ ಅಂಗಡಿ, ನಿಖಿಲ್ ಪಾಟೀಲ್, ದಿವಾಕರ್ ಹೆಗಡೆ, ಗಂಗಾ ಕಾಳೆನವರ ಇದ್ದರು.ನಾಟಕ ಅಕಾಡೆಮಿ ಬೌದ್ಧಿಕ ದಿವಾಳಿ

ಗುರುಗಳಾದ ಚಿದಂಬರರಾವ್‌ ಜಂಬೆ ಕೇವಲ ರಂಗ ನಿರ್ದೇಶಕರಾಗದೇ, ರಂಗ ಶಿಕ್ಷಕರಾದರು. ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಅವರು ನನ್ನ ಪಾಲಿಗೆ ಓರ್ವ ಶ್ರೇಷ್ಠ ರಂಗ ವಿಜ್ಞಾನಿ. ಅವರೆಂದೂ ಅಧಿಕಾರ, ಪ್ರಶಸ್ತಿ, ಹಣದ ಹಿಂದೆ ಹೋಗಲಿಲ್ಲ. ಅಧಿಕಾರಿ ಶಾಹಿ ಮನಸ್ಥಿತಿ ವಿರೋಧಿಸಿದವರು. ಅದನ್ನು ತಮ್ಮ ಮರಣದ ನಂತರವೂ ಸಾಧಿಸಿ ತೋರಿಸಿದರು. ಅವರ ಅಂತಿಮ ಸಂಸ್ಕಾರಕ್ಕೆ ಸರ್ಕಾರವಾಗಲಿ, ನಾಟಕ ಅಕಾಡೆಮಿಯಾಗಲಿ ಬರಲಿಲ್ಲ. ಅದು ಜಂಬೆ ಅವರಿಗಾದ ಅವಮಾನ ಖಂಡಿತ ಅಲ್ಲ. ಅದು ಸರ್ಕಾರದ, ನಾಟಕ ಅಕಾಡೆಮಿಯ ಬೌದ್ಧಿಕ ದಿವಾಳಿತನ ಎತ್ತಿ ತೋರಿಸಿತು.

ಧನಂಜಯ ಕುಲಕರ್ಣಿ, ರಂಗಕರ್ಮಿ