ಪೌರಕಾರ್ಮಿಕರ ಜೊತೆ ಮುಖ್ಯಾಧಿಕಾರಿ ಸ್ವಚ್ಛತಾ ಕಾರ್ಯ

| Published : Mar 30 2024, 12:48 AM IST

ಸಾರಾಂಶ

ಕೆರೂರ: ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಕ್ಕೆ ತರಬೇಕಾದರೆ ಸ್ವಚ್ಛತೆಯೇ ಮುಖ್ಯ ಕಾರಣ ಎಂದು ಬಲವಾಗಿ ನಂಬಿರುವ ಕೆರೂರು ಪಪಂ ಮುಖ್ಯಾಧಿಕಾರಿ ಜಗದೀಶ.ಆರ್.ನಾಯ್ಕರ ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಕನಸಿಗೆ ಇಂಬು ಕೊಡುತ್ತಿದ್ದಾರೆ. ಪೌರಕಾರ್ಮಿಕರ ಜೊತೆ ಸೇರಿ ಪಟ್ಟಣದಲ್ಲಿ ಸ್ಚಚ್ಛತಾ ಅಭಿಯಾನ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆರೂರ

ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಕ್ಕೆ ತರಬೇಕಾದರೆ ಸ್ವಚ್ಛತೆಯೇ ಮುಖ್ಯ ಕಾರಣ ಎಂದು ಬಲವಾಗಿ ನಂಬಿರುವ ಕೆರೂರು ಪಪಂ ಮುಖ್ಯಾಧಿಕಾರಿ ಜಗದೀಶ.ಆರ್.ನಾಯ್ಕರ ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಕನಸಿಗೆ ಇಂಬು ಕೊಡುತ್ತಿದ್ದಾರೆ. ಪೌರಕಾರ್ಮಿಕರ ಜೊತೆ ಸೇರಿ ಪಟ್ಟಣದಲ್ಲಿ ಸ್ಚಚ್ಛತಾ ಅಭಿಯಾನ ನಡೆಸುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಪಪಂ ಕಾರ್ಯಾಲಯಕ್ಕೆ ಆಗಮಿಸಿ ಪೌರ ಕಾರ್ಮಿಕರನ್ನೆಲ್ಲ ಸೇರಿಸಿ ಸ್ವತಃ ತಾವೇ ಮುಂದಾಳತ್ವ ವಹಿಸಿ ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗುತ್ತಾರೆ. ಪೌರ ಕಾರ್ಮಿಕರನ್ನು ಕರೆದುಕೊಂಡು ಪಟ್ಟಣದ ರಸ್ತೆ, ಬಯಲು, ಗಟಾರ ಸೇರಿದಂತೆ ವಿವಿಧೆಡೆ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿಯಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಬೇಸಿಗೆಯ ಬಿಸಿಲಿನ ಪ್ರತಾಪಕ್ಕೆ ನೀರಿನ ಮೂಲಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಂಡ ಪಟ್ಟಣದ 110 ಎಕರೆ ವಿಸ್ತೀರ್ಣದ ಕೆರೆಯ ನೀರಿನ ಆಳ ಕಡಿಮೆಯಾಗುತ್ತಿದೆ. ನೀರಿನ ಕೊರತೆಯಾಗಬಾರದೆಂದು ಪಟ್ಟಣದಲ್ಲಿಯ ಬಾವಿಗಳನ್ನು ಸ್ವಚ್ಛಗೊಳಿಸಿ ನೀರನ್ನು ತಿಳಿಯಾಗಿಸಿ ನಾಗರಿಕರು ಬಳಕೆ ಮಾಡುವಂತೆ ಮಾಡಿದ್ದಾರೆ. ಅಲ್ಲದೇ, ನೀರನ್ನು ಮಿತವಾಗಿ ಬಳಕೆ ಮಾಡುವಂತೆ ಧ್ವನಿವರ್ಧಕದ ಮೂಲಕ ಜನರನ್ನು ಜಾಗೃತ ಮೂಡಿಸುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದ್ದು, ಅವು ಸಮರ್ಪಕವಾಗಿ ಬಳಕೆಯಾಗುವಂತೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಸ್ಯಾನಿಟರಿ ಇನ್ಸ್‌ಪೆಕ್ಟರ್‌ ನವೀನ ಮಹಾರಾಜನವರ ಹಾಗೂ ಬಿ.ಸಿ.ಕಟ್ಟಿಮನಿ ಸೇರಿದಂತೆ ಪಪಂ ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ. ಆಡಳಿತಾಧಿಕಾರಿ ಬಾದಾಮಿ ತಹಸೀಲ್ದಾರ್‌ ಜೆ.ಬಿ.ಮಜ್ಜಗಿ ನಿರ್ದೇಶನದಲ್ಲಿ ಆಡಳಿತದಲ್ಲಿ ಸುಧಾರಣೆ ತರಲು ಶ್ರಮವಹಿಸುತ್ತಿದ್ದಾರೆ.

--

ಕೋಟ್

ಈ ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹಾಗೂ ನೀರಿನ ಕೊರತೆ ಆಗುವುದು ಸಹಜ. ನಾಗರಿಕರಿಗೆ ಯಾವ ತೊಂದರೆಯೂ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಪಟ್ಟಣ ಪಂಚಾಯತಿಯದ್ದು. ನಾನು ಚುನಾವಣೆ ನಿಮಿತ್ತ ವರ್ಗಾವಣೆಗೊಂಡು ಬಂದವನು. ನನ್ನ ಅವಧಿ ಮೂರು ತಿಂಗಳಾಗಬಹುದು, ನಾನಿರುವಷ್ಟು ದಿನ ಪ್ರಾಮಾಣಿಕವಾಗಿ ಪಟ್ಟಣದ ಸೇವೆ ಮಾಡುವುದು ನನ್ನ ಜವಾಬ್ದಾರಿ.

ಜಗದೀಶ.ಆರ್.ನಾಯ್ಕರ, ಪಪಂ ಮುಖ್ಯಾಧಿಕಾರಿ ಕೆರೂರ