ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ರಸ್ತೆಗಳಲ್ಲಿ ಮಳೆ ನೀರು ನಿಲ್ಲುವ ಹಾಗೂ ನೀರುಗಾಲುವೆಗಳಲ್ಲಿ ಕಸ ತುಂಬಿಕೊಂಡು ಸಮಸ್ಯೆ ಉಂಟು ಮಾಡುವ ಸ್ಥಳಗಳ ಸಮೀಕ್ಷೆ ಮಾಡಿ ಕೂಡಲೇ ಸರಿಪಡಿಸಬೇಕೆಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಸ್ತೆಗಳಲ್ಲಿ ನೀರು ನಿಲ್ಲದಂತೆ ಅಕ್ಕ-ಪಕ್ಕದ ಕಾಲುವೆಗಳಿಗೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ನೀರುಗಾಲುವೆ ಹೋಗುವ ಸ್ಥಳದ ಬಳಿ ಸ್ವಚ್ಛತೆ ಕಾಪಾಡಬೇಕು. ಈ ಕುರಿತು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಸ್ವಚ್ಛತಾ ಕಾರ್ಯ ಮಾಡಿಸಬೇಕು. ಮಳೆ ಬರುವ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ರಸ್ತೆ ಗುಂಡಿ ತ್ವರಿತವಾಗಿ ಮುಚ್ಚಿ:ನಗರದಲ್ಲಿ ಪ್ರಮುಖವಾಗಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಬೇಕು. ರಸ್ತೆಗಳು ಹಾಳಾಗಿದ್ದಲ್ಲಿ ಕೂಡಲೆ ಅದನ್ನು ಸರಿಪಡಿಸಬೇಕೆಂದು ಸೂಚಿಸಿದರು. ನಗರದಲ್ಲಿ ಡೆಂಘೀ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಸರಾಸರಿ 90 ರಿಂದ 95 ಪ್ರಕರಣಗಳು ಕಂಡು ಬರುತ್ತಿವೆ. ಅದನ್ನು ಮತ್ತಷ್ಟು ಕಡಿಮೆ ಮಾಡಲು ಆಯಾ ವಲಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ರಮೇಶ್, ರಮ್ಯಾ, ವಿನೋತ್ ಪ್ರಿಯಾ, ಕರೀಗೌಡ, ಸ್ನೇಹಲ್, ಗಿರೀಶ್, ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.